ಚಿತ್ರದುರ್ಗ: ಭಗವಂತನ ಸೇವೆಯಲ್ಲಿ ಸದಾ ಇದ್ದರೆ ಮನುಕುಲದ ಏಳಿಗೆಯಾಗುತ್ತದೆ ಎಂದು ತಾವರೆಕೆರೆ ಶಿಲಾಮಠದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಸಿದ್ದಾಪುರದಲ್ಲಿ ಬುಧವಾರ ಶ್ರೀ ವೀರಭದ್ರೇಶ್ವರ ಭಕ್ತ ಮಂಡಳಿ ಹಮ್ಮಿಕೊಂಡಿದ್ದ ವೀರಾಂಜನೇಯ, ಶ್ರೀ ಭದ್ರ ಕಾಳಮ್ಮ ಸಮೇತ ಶ್ರೀ ವೀರಭದ್ರ ಸ್ವಾಮಿ ದೇವಾಲಯದ ನೂತನ ಉತ್ಸವಮೂರ್ತಿ ಪ್ರತಿಷ್ಠಾಪನೆ, ಲೋಕಾರ್ಪಣೆ ಸಮಾರಭದ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು.
ದೇಗುಲಗಳ ನಿರ್ಮಾಣ ಮುಖ್ಯವಲ್ಲ, ಉತ್ತಮ ವ್ಯಕ್ತಿತ್ವ ನಿರ್ಮಾಣವಾಗಬೇಕು. ದೇವಾಲಯಗಳಲ್ಲಿ ಸ್ವಚ್ಛತೆಯೊಂದಿಗೆ ನಿತ್ಯ ಪೂಜಾ ಕೈಂಕರ್ಯಗಳು ನಡೆಯವುದು ಕೂಡ ಮುಖ್ಯ. ನಮ್ಮನ್ನು ಯಾವ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ ಎಂಬುದೇ ನಿಜವಾದ ಆಧ್ಯಾತ್ಮಿಕತೆ. ಭಾವನಾತ್ಮಕವಾಗಿಯೂ ನಾವು ಪರಿಶುದ್ಧರಾಗಬೇಕು ಎಂದು ತಿಳಿಸಿದರು.
ವೀರಭದ್ರ ದೇವರ ಆರಾಧಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗುಗ್ಗಳದಲ್ಲಿ ಕೆಂಡ ತುಳಿದಾಗ, ಭಕ್ತರ ಕೈ, ಬಾಯಿಗೆ ಸೂತ್ರ ಹಾಕಿದಾಗ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇದು ವೀರಭದ್ರನ ಪವಾಡ. ಇದು ವಿಜ್ಞಾನಕ್ಕೆ ಸವಾಲಾಗಿದೆ. ಭಗವಂತನ ಸೇವೆಯಲ್ಲಿ ಉತ್ಸಾಹ, ಭಕ್ತಿ ಇರಬೇಕು ಎಂದರು.
ದೇವರ ನೆಲೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಯಾವ ಧರ್ಮವೂ ಹಿಂಸೆ ಪ್ರಚೋದಿಸುವುದಿಲ್ಲ. ಜೀವನದ ಮೌಲ್ಯಗಳು ಎಲ್ಲ ಧರ್ಮಗಳಲ್ಲಿವೆ. ಪ್ರತಿ ವರ್ಷ ಅನೇಕ ದೇಗುಲಗಳು ನಿರ್ಮಾಣವಾಗುತ್ತಿವೆ. ಆದರೆ, ಜನರಲ್ಲಿ ಭಕ್ತಿ ಮತ್ತು ಮಾನವೀಯ ಮೌಲ್ಯಗಳು ಬೆಳೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಯುವಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ನೀಡದಿದ್ದರೆ ಅವರಲ್ಲಿ ಕ್ರೂರತನ ಬೆಳೆಯುವ ಅಪಾಯವಿದೆ. ದುಶ್ಚಟಗಳನ್ನು ಮಠಾಧೀಶರ ಪಾದಕ್ಕೆ ಅರ್ಪಿಸಬೇಕು ಎಂದರು.
ಶ್ರೀಗಳನ್ನು ಗ್ರಾಮದ ದ್ವಾರಬಾಗಿಲಿಂದ ಮಂಗಳ ವಾದ್ಯದೊಂದಿಗೆ ವೇದಿಕೆಗೆ ಕರೆ ತರಲಾಯಿತು. ಸಿದ್ಧಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಟೇಲ್ ರುದ್ರಪ್ಪ, ಜಯಣ್ಣ, ಆರೂಢಾಚಾರ್ಯ, ಪ್ರಸನ್ನಕುಮಾರ್, ನಿರಂಜನ್, ಪಾಪಣ್ಣ ಹಾಗೂ ಗ್ರಾಮಸ್ಥರು ಇದ್ದರು.
ಪಟೇಲ್ ಶಿವಕುಮಾರ್ ಸ್ವಾಗತಿಸಿದರು. ಶಿಲ್ಪಿಗಳು, ಅರ್ಚಕರು ಹಾಗೂ ಪುರೋಹಿತರನ್ನು ಗೌರವಿಸಲಾಯಿತು.