ಬಾಳೆಹೊನ್ನೂರು: ಸಾವಿರಾರು ವರ್ಷಗಳ ಹಿಂದೆ ವೇದ ಮಂತ್ರಗಳನ್ನು ರಚಿಸಿ ಹಿಂದು ಧರ್ಮಕ್ಕೆ ನೀಡಿದ ಋಷಿ ಮುನಿಗಳಿಗೆ ಉಪಾಕರ್ಮದಂದು ತರ್ಪಣ ನೀಡಿ ಋಣ ಭಾರ ಕಳೆದುಕೊಳ್ಳಬೇಕು ಎಂದು ಮೃಗವಧೆಯ ಅಭಿನಂದನ್ ಭಟ್ ಹೇಳಿದರು.
ಪಟ್ಟಣದ ಶ್ರೀ ವಾಣಿ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರದ ಆವರಣದಲ್ಲಿ ಉಪಾಕರ್ಮ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಅವರು ಮಾತನಾಡಿದರು. ಗುರಿ ಸಾಧಿಸಬೇಕಾದರೆ ಪ್ರತಿಯೊಬ್ಬ್ಟರೂ ಐದು ವಿಧವಾದ ದೇವಋಣ, ಪಿತೃಋಣ, ಮನುಷ್ಯ, ಭೂತ, ಋಷಿ ಋಣಗಳನ್ನು ವೇದೋಕ್ತ ಮಾರ್ಗದಿಂದ ಅನುಸರಿಸಿ ತೀರಿಸಬೇಕು. ಮನುಷ್ಯನ ಸುಖ ದುಃಖಗಳಿಗೆ ಜನ್ಮ ಜನ್ಮಾಂತರದಲ್ಲಿ ಮಾಡಿರುವ ಕರ್ಮ ಲಗಳೇ ಕಾರಣವಾಗಿರುತ್ತವೆ. ಈ ಕರ್ಮ ಲಗಳನ್ನು ಕಳೆದು ಭಗವಂತನ ಅನುಗ್ರಹ ಪಡೆಯುವುದೇ ಸಾಧನೆಯಾಗಿದೆ ಎಂದರು.
ಶೋಡಷ ಕರ್ಮದಲ್ಲಿ ಉಪನಯನವು ಒಂದು ಕರ್ಮವಾಗಿದ್ದು ಅದರ ಮುಂದುವರಿದ ಭಾಗವೇ ಉಪಾಕರ್ಮ. ಉಪಾಕರ್ಮದಂದು ವೇದಾಧ್ಯಯನ ಮಾಡಲು ಪ್ರಶಸ್ತ ದಿನವಾಗಿದ್ದು ಕೆಲವೆಡೆ ಇಂದಿಗೂ ನೂರಾರು ವಟುಗಳು ವೇದಾಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಕೂಟ ಮಹಾಜಗತ್ತಿನ ಜಯಪುರ ಹಾಗೂ ಕೊಪ್ಪ ಅಂಗ ಸಂಸ್ಥೆಯ ವಕ್ತಾರ ಯಜ್ಞಪುರುಷ ಹೇರಳೆ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಸಂಪ್ರದಾಯ ದೂರವಾಗುತ್ತಿದೆ. ಪ್ರತಿಯೊಬ್ಬರೂ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಬೇಕು ಹಾಗೂ ಮಕ್ಕಳಿಗೆ ಸಂಪ್ರದಾಯದ ಅರಿವು ಮೂಡಿಸಬೇಕು ಎಂದರು.
ಪುರೋಹಿತರಾದ ಮಂಜುನಾಥ್ ಭಟ್, ಸುನೀಲ್ ಭಟ್, ಮಾರ್ಕಾಂಡಯ ಭಟ್, ರಾಮಕೃಷ್ಣ ಭಟ್, ನಾಗರಾಜ್ ಭಟ್, ರಂಗನಾಥ್ ಹೊಳ್ಳ, ಶಿವಸ್ವಾಮಿ ಮತ್ತಿತರರಿದ್ದರು.