ವಿಜಯನಗರದ ಎರಡನೇ ಹಂತದ ಪ್ರಸಿದ್ಧ ಶ್ರೀ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದಂದು ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡುಗಳನ್ನು ಭಕ್ತರಿಗೆ ಉಚಿತವಾಗಿ ವಿತರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ದೇವಾಲಯದ ಸಂಸ್ಥಾಪಕ ಪ್ರೊ.ಭಾಷ್ಯಂ ಸ್ವಾಮಿ ತಿಳಿಸಿದರು.
ನೂತನ ಕ್ರೈಸ್ತ ವರ್ಷಾರಂಭದ ದಿನ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಲಡ್ಡುಗಳನ್ನು ವಿತರಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜ.1ರಂದು ಬೆಳಗ್ಗೆ 4 ಗಂಟೆಯಿಂದ ಪ್ರಾರಂಭಿಸಿ ಯೋಗಾ ನರಸಿಂಹಸ್ವಾಮಿಗೆ ವಿಶೇಷ ಅಲಂಕಾರ ಮತ್ತು ಶ್ರೀರಂಗಂಕ್ಷೇತ್ರ, ಮಧುರೈ ಕ್ಷೇತ್ರಗಳಿಂದ ತರಿಸಿರುವ ವಿಶೇಷ ‘ತೋಮಾಲೆ’ ಮತ್ತು ಸ್ವರ್ಣಪುಷ್ಪದಿಂದ ಶ್ರೀಸ್ವಾಮಿಗೆ ‘ಸಹಸ್ರನಾಮರ್ಚನೆ’ ಮತ್ತು ದೇವಾಲಯದ ಉತ್ಸವ ಮೂರ್ತಿ ಶ್ರೀ ರಂಗನಾಥಗೆ ಸ್ವಾಮಿಗೆ ದೇವಾಲಯದ ಆವರಣದಲ್ಲಿ ‘ಏಕಾದಶ ಪ್ರಾಕಾರೋತ್ಸವ’ ಹಾಗೂ ಐವತ್ತು ಕ್ವಿಂಟಾಲ್ ಪುಳಿಯೋಗರೆ ನಿವೇದನೆ ಮಾಡಲಾಗುವುದು. ಈ ಸಂದರ್ಭದಲ್ಲಿ ಎಲ್ಲ ಭಕ್ತರಿಗೆ ಲಡ್ಡು ವಿತರಿಸಲಾಗುವುದು ಎಂದರು.
1994ರಿಂದ ಅಂದಾಜು ಒಂದು ಸಾವಿರ ಲಡ್ಡು ವಿತರಣೆಯಿಂದ ಈ ಕೆಲಸ ಪ್ರಾರಂಭವಾಗಿದೆ. ಡಾ.ರಾಜ್‌ಕುಮಾರ್ ದೇವಸ್ಥಾನಕ್ಕೆ ಬಂದ ಸಂದರ್ಭದಲ್ಲಿ ನೀಡಿದ ಸಲಹೆ ಮೇರೆಗೆ ಲಡ್ಡು ವಿತರಣೆ ಕಾರ್ಯಕ್ರಮ ಆಯೋಜಿಸಲಾಯಿತು. ಅಂದಿನಿಂದ ಇಲ್ಲಿಯವರೆಗೂ ಡಾ.ರಾಜ್ ಕುಮಾರ್ ಮತ್ತು ಅವರ ಎಲ್ಲ ಕುಟುಂಬ ಸದಸ್ಯರ ಮನೆಗೆ ಲಡ್ಡು ಪ್ರಸಾದ ವಿತರಿಸಲಾಗುತ್ತದೆ ಎಂದರು.
ಪ್ರಸಾದವನ್ನು ವಿಶೇಷವಾಗಿ 100 ನುರಿತ ಬಾಣಸಿಗರಿಂದ ತಯಾರಿಸಲಾಗುತ್ತಿದೆ. 150 ಗ್ರಾಂ ತೂಕದ 2 ಲಕ್ಷ ಲಾಡು ತಯಾರಿಸಲಾಗುತ್ತಿದೆ. ಜತೆಗೆ 2 ಕೆ.ಜಿ., 10 ಕೆ.ಜಿ. ತೂಕ ಲಾಡುಗಳನ್ನು ತಯಾರಿಸಲಾಗುತ್ತಿದೆ. ದೇವಾಲಯಕ್ಕೆ ಬರುವ ಎಲ್ಲ ಭಕ್ತರಿಗೆ ವಿತರಿಸಲಾಗುವುದು ಎಂದರು.
ಲಾಡುಗಳನ್ನು ತಯಾರಿಸಲು 100 ಕ್ವಿಂಟಾಲ್ ಕಡ್ಲೆ ಹಿಟ್ಟು, 100 ಕ್ವಿಂಟಾಲ್ ಸಕ್ಕರೆ, 10000 ಸಾವಿರ ಲೀಟರ್ ಖಾದ್ಯತೈಲ, 500 ಕೆ.ಜಿ. ಗೋಡಂಬಿ, 500 ಕೆಜಿ ಒಣದ್ರಾಕ್ಷಿ, 250 ಕೆಜಿ ಬಾದಾಮಿ, 1000 ಕೆಜಿ ಡೈಮಂಡ್ ಸಕ್ಕರೆ, 2000 ಕೆಜಿ ಬೂರಾ ಸಕ್ಕರೆ, 50 ಕೆಜಿ ಪಿಸ್ತಾ, 50 ಕೆಜಿ ಏಲಕ್ಕಿ, 50 ಕೆಜಿ ಜಾಕಾಯಿ ಮತ್ತು ಜಾಪತ್ರೆ, 50 ಕೆಜಿ ಪಚ್ಚೆ ಕರ್ಪೂರ, 200 ಕೆಜಿ ಲವಂಗವನ್ನು ಬಳಸಲಾಗಿದೆ ಎಂದು ವಿವರಿಸಿದರು.
ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಮಾತನಾಡಿ, ಲೋಕ ಕಲ್ಯಾಣಾರ್ಥ ಯಾವುದೇ ಜಾತಿ, ಮತಗಳ ಭೇದವಿಲ್ಲದೆ ಪ್ರಪಂಚದ ಎಲ್ಲೆಡೆ ಆಚರಿಸುವ ಕ್ರೈಸ್ತ ವರ್ಷಾರಂಭದ ಹಿನ್ನೆಲೆಯಲ್ಲಿ ವಿಶ್ವಶಾಂತಿ, ಭ್ರಾತೃತ್ವ ಮತ್ತು ಸರ್ವಧರ್ಮ ಸಮನ್ವಯತೆಗಾಗಿ ಮತ್ತು ನಾಡಿನ ಎಲ್ಲಾ ಜನರ ಒಳಿತಿಗಾಗಿ ಪ್ರಾರ್ಥಿಸಿ ಲಡ್ಡು ಪ್ರಸಾದ ನಿವೇದನೆ ಮತ್ತು ಭಕ್ತರಿಗೆ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಭಾಷ್ಯಂ ಸ್ವಾಮಿ ಅವರು ವಿಡಿಯೋ ಕಾಲ ಮೂಲಕ ನಟ ಶಿವರಾಜ್‌ಕುಮಾರ ಜತೆ ಮಾತನಾಡಿದ್ದಾರೆ. ಅವರು ಆರೋಗ್ಯವಾಗಿದ್ದಾರೆ. ಅವರಿಗಾಗಿಯೂ ವಿಶೇಷ ಪೂಜೆ ಮಾಡಲಾಗುತ್ತದೆ ಎಂದರು. ಡಾ.ರಾಜ್‌ಕುಮಾರ್ ಕುಟುಂಬದ ಗೋವಿಂದ ರಾಜ್, ಲಕ್ಷ್ಮೀ ರಾಜ್ ಕುಮಾರ್, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಇದ್ದರು.