ಬೆಂಗಳೂರು: ಕಾಂಗ್ರೆಸ್ ಶಾಸಕ ಹರೀಶ್‌ಗೌಡ ಅವರಿಗೆ ಪರಿಚಿತರು ಸೇರಿ ಹಲವು ಗಣ್ಯರಿಗೆ ಹನಿಟ್ರ್ಯಾಪ್ ಮೂಲಕ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಗ್ಯಾಂಗ್ ಪೈಕಿ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಮೂಲದ ಸಂತೋಷ್ ಮತ್ತು ಪುಟ್ಟರಾಜು ಬಂಧಿತರು.
ಆರೋಪಿಗಳು ತಿರುಚಿದ ಮತ್ತು ನಕಲಿ ವಿಡಿಯೋಗಳನ್ನು ಇಟ್ಟುಕೊಂಡು ರಾಜಕಾರಣಿಗಳು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡಲು ಯತ್ನಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಗಣ್ಯ ವ್ಯಕ್ತಿಗಳನ್ನು ಪರಿಚಯಿಸಿಕೊಂಡು ಅವರ ಮೊಬೈಲ್ ನಂಬರ್ ಪಡೆಯುತ್ತಿದ್ದರು. ನಂತರ ಅವರನ್ನು ಹಿಂಬಾಲಿಸಿ ಚಲನವಲನದ ಮೇಲೆ ಕಣ್ಣಿಡುತ್ತಿದ್ದರು. ಅವರು ಉಳಿದುಕೊಳ್ಳುತ್ತಿದ್ದ ಐಷಾರಾಮಿ ಹೋಟೆಲ್ಗಳ ರೂಂ ಬುಕ್ಕಿಂಗ್, ಚೆಕ್‌ಇನ್ ಹಾಗೂ ಚೆಕ್‌ಔಟ್ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದರು. ಕಾರ್ಯಕ್ರಮಗಳಲ್ಲಿ ಗಣ್ಯ ವ್ಯಕ್ತಿಗಳಿಗೆ ಯುವತಿಯರನ್ನು ಪರಿಚಯ ಮಾಡಿಕೊಡುತ್ತಿದ್ದರು. ಗಣ್ಯ ವ್ಯಕ್ತಿಗಳು ಯುವತಿಯರ ಜತೆ ಆಪ್ತ ಸಂಭಾಷಣೆಯಲ್ಲಿ ತೊಡಗಿದ್ದಾಗ ಅವರ ೆಟೊ ತೆಗೆದುಕೊಳ್ಳುತ್ತಿದ್ದರು ಮತ್ತು ವಿಡಿಯೋ ಚಿತ್ರೀಕರಿಸಿಕೊಳ್ಳುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬ್ಲ್ಯಾಕ್‌ಮೇಲ್:
ಗಣ್ಯ ವ್ಯಕ್ತಿಗಳು ತಂಗುತ್ತಿದ್ದ ಹೋಟೆಲ್‌ನ ರೂಂಗೆ ಆರೋಪಿಗಳು ಯುವತಿಯರನ್ನು ಕಳುಹಿಸುತ್ತಿದ್ದರು. ಆ ರೂಂಗಳಲ್ಲಿ ಮೊದಲೇ ರಹಸ್ಯ ಕ್ಯಾಮೆರಾ ಇಟ್ಟು, ಗಣ್ಯ ವ್ಯಕ್ತಿಗಳು ಯುವತಿಯರ ಜತೆ ಏಕಾಂತದಲ್ಲಿದ್ದಾಗ ಖಾಸಗಿ ಕ್ಷಣದ ವಿಡಿಯೋ ಚಿತ್ರೀಕರಿಸುತ್ತಿದ್ದರು. ಆ ವಿಡಿಯೋಗಳನ್ನು ಗಣ್ಯ ವ್ಯಕ್ತಿಗಳಿಗೆ ಕಳುಹಿಸಿ, ಹಣ ಕೊಡುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಹಣ ಕೊಡದಿದ್ದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸುವುದಾಗಿ ಮತ್ತು ಪೊಲೀಸರಿಗೆ ಕೊಡುವುದಾಗಿ ಬೆದರಿಸುತ್ತಿದ್ದರು. ಅದೇ ರೀತಿ ಶಾಸಕ ಹರೀಶ್‌ಗೌಡ ಅವರಿಗೂ ಬೆದರಿಕೆ ಹಾಕಿದ್ದರು. ಈ ಸಂಬಂಧ ಹರೀಶ್‌ಗೌಡ ಅವರು ಜೂ.೧೦ರಂದು ದೂರು ಕೊಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದರು:
ದೂರಿನನ್ವಯ ಸಂತೋಷ್ ಮತ್ತು ಪುಟ್ಟರಾಜುನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ನವೀನ್ ಎಂಬಾತ ಪರಾರಿಯಾಗಿದ್ದಾನೆ. ಪ್ರಕರಣದಲ್ಲಿ ಹಲವು ಯುವತಿಯರು ಸಹ ಭಾಗಿಯಾಗಿದ್ದು, ಅವರೆಲ್ಲರೂ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಸಂತೋಷ್ ಮತ್ತು ಪುಟ್ಟರಾಜು, ಈ ಹಿಂದೆ ಮೈಸೂರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಆ ಸಮಯದಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಮಹಿಳೆಯರನ್ನು ಬಳಸಿಕೊಂಡು ಮೈಸೂರು ಮತ್ತು ಬೆಂಗಳೂರಿನಲ್ಲಿ ಹಲವು ಉದ್ಯಮಿಗಳು, ರಾಜಕಾರಣಿಗಳು, ಗಣ್ಯರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಹಣ ವಸೂಲಿ ಮಾಡಿದ್ದಾರೆ. ವಿಶ್ರಾಂತ ಕುಲಪತಿಯನ್ನೂ ಖೆಡ್ಡಾಗೆ ಕೆಡವಿ ಹಣ ವಸೂಲಿ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶಾಸಕ ಹರೀಶ್‌ಗೌಡರಿಗೆ ೨೦೧೯ರಿಂದಲೂ ಸಂತೋಷ್ ಮತ್ತು ನವೀನ್‌ರ ಪರಿಚಯವಿತ್ತು. ಆರೋಪಿಗಳು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಹರೀಶ್‌ಗೌಡರ ಮೂಲಕವೇ ಹಲವು ಗಣ್ಯರನ್ನು ಪರಿಚಯಿಸಿಕೊಂಡಿದ್ದರು. ಆ ಗಣ್ಯರ ಖಾಸಗಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ್ದರು. ಆ ಗಣ್ಯರು ಈ ವಿಚಾರವನ್ನು ಹರೀಶ್‌ಗೌಡರ ಗಮನಕ್ಕೆ ತಂದಿದ್ದರು. ಬಳಿಕ ಹರೀಶ್‌ಗೌಡರು ಸಂತೋಷ್ ಮತ್ತು ನವೀನ್‌ಗೆ ಬುದ್ಧಿ ಹೇಳಿದ್ದರು. ಇದರಿಂದ ಕೆರಳಿದ್ದ ಆರೋಪಿಗಳು ಹರೀಶ್‌ಗೌಡರ ಖಾಸಗಿ ೆಟೊ, ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಹಾಗೂ ಅವರ ವಿರುದ್ಧ ಮಹಿಳೆಯರಿಂದ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಹೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.