ಡಿಸಿ ಕಚೇರಿಯಲ್ಲಿ ಬ್ಯಾಂಕ್‌ಗಳ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಜಿಲ್ಲಾಮಟ್ಟದ ಸುರಕ್ಷಾ ಸಮಿತಿ ಸಭೆ ನಡೆಸಿದರು. ಅನಿಲ್ಕುಮಾರ್ ಭೂಮರಡ್ಡಿ, ಚಂದ್ರಶೇಖರ್, ಕೃಷ್ಣಮೂರ್ತಿ ಇದ್ದರು. 
ನ್ಯೂಸ್

ಬ್ಯಾಂಕ್‌, ಎಟಿಎಂಗಳಲ್ಲಿ ಸುರಕ್ಷಾ ಕ್ರಮ ಕಡ್ಡಾಯ

ಶಿವಮೊಗ್ಗ: ಜಿಲ್ಲೆಯ ಎಲ್ಲ ಬ್ಯಾಂಕ್‌ಗಳಲ್ಲಿ ಸಿಸಿ ಟಿವಿ, ಎಚ್ಚರಿಕೆ ಗಂಟೆ(ಅಲಾರ್ಮ್)ಗಳ ಅಳವಡಿಕೆ, ಭದ್ರತಾ ಸಿಬ್ಬಂದಿ ನಿಯೋಜನೆ, ಪೊಲೀಸ್ ಗಸ್ತು ಸೇರಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು.

ಡಿಸಿ ಕಚೇರಿಯಲ್ಲಿ ಬುಧವಾರ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಸುರಕ್ಷಾ ಸಮಿತಿ(ಡಿಎಲ್‌ಎಸ್‌ಸಿ) ಸಭೆ ನಡೆಸಿದ ಅವರು, 358 ಬ್ಯಾಂಕ್‌ಗಳು, 435 ಎಟಿಎಂಗಳು, 5 ಕರೆನ್ಸಿ ಚೆಸ್ಟ್‌ಗಳು ಜಿಲ್ಲೆಯಲ್ಲಿವೆ. ಆರ್‌ಬಿಐ ಮಾರ್ಗಸೂಚಿ ಅನ್ವಯ ಬ್ಯಾಂಕ್‌ಗಳಲ್ಲಿ ಹಾಗೂ ಕರೆನ್ಸಿ ಚೆಸ್ಟ್‌ಗಳಲ್ಲಿ ಸಿಸಿ ಟಿವಿ, ಸೈರನ್, ಬೆಂಕಿ ನಂದಿಸುವ ಸಾಧನಗಳನ್ನು ಅಳವಡಿಸಬೇಕು. ಅವುಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂದು ಖಾತ್ರಿ ಪಡಿಸಿಕೊಳ್ಳಬೇಕು ಎಂದರು.

ಎಚ್ಚರಿಕೆ ಗಂಟೆ ಮತ್ತು ಇತರೆ ಸುರಕ್ಷಾ ಕ್ರಮಗಳೊಂದಿಗೆ ಸ್ಟ್ರಾಂಗ್ ರೂಂ ನಿರ್ವಹಣೆ ಮಾಡಬೇಕು. ಕರನ್ಸಿ ಚೆಸ್ಟ್‌ಗಳಿಂದ ಹಣ ವರ್ಗಾವಣೆ ವೇಳೆ ಅಗತ್ಯ ಸುರಕ್ಷತಾ ಕ್ರಮಗಳಾದ ಪೊಲೀಸ್ ನಿಯೋಜನೆ ಸೇರಿ ಇತರೆ ಕ್ರಮ ಕೈಗೊಳ್ಳಬೇಕು. ಹತ್ತಿರದ ಪೊಲೀಸ್ ಠಾಣೆಯೊಂದಿಗೆ ಸಂಪರ್ಕದಲ್ಲಿರಬೇಕು. ಎಟಿಎಂಗಳಲ್ಲಿ ಸಿಸಿ ಟಿವಿ ಅಳವಡಿಕೆ, ಸೈರನ್ ಮತ್ತು ಬೆಂಕಿ ನಂದಿಸುವ ಸಾಧನಗಳನ್ನು ಅಳವಡಿಸಿ, ಅವು ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ನಿರ್ದಿಷ್ಟಪಡಿಸಿದ ರೀತಿಯಲ್ಲೇ ಎಟಿಎಂ ರೂಂಗಳು ಇರಬೇಕು. ಅಧಿಕೃತ ವ್ಯಕ್ತಿಗಳ ಎದುರು ಮಾತ್ರ ನಗದನ್ನು ಲೋಡ್ ಮತ್ತು ಅನ್‌ಲೋಡ್ ಮಾಡಬೇಕು. ಹತ್ತಿರದ ಪೊಲೀಸ್ ಠಾಣೆಗೆ ಬ್ಯಾಂಕುಗಳ ಜವಾಬ್ದಾರಿಯುತ ವ್ಯಕ್ತಿಗಳ ಸಂಪರ್ಕದ ವಿವರ ನೀಡಿರಬೇಕು. ಗ್ರಾಹಕರು ವಂಚನೆಗೆ ಒಳಗಾಗದಂತೆ ಮಾಹಿತಿ ಫಲಕಗಳನ್ನು ಎಟಿಎಂ ಒಳಗೆ ಹಾಕಿರಬೇಕು ಎಂದು ಸೂಚಿಸಿದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಚಂದ್ರಶೇಖರ್, ಎಎಸ್ಪಿ ಅನಿಲ್ಕುಮಾರ್ ಭೂಮರಡ್ಡಿ, ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಇದ್ದರು.

ಸಿಗುತ್ತಿಲ್ಲ ತುರ್ತು ಸ್ಪಂದನೆ

ಸೈಬರ್ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಅನುಕೂಲ ಮಾಡಿಕೊಡಲು ಬ್ಯಾಂಕ್‌ಗಳಲ್ಲಿ ಸಂತ್ರಸ್ತರ ಕೆವೈಸಿ ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಕೇಳಲಾಗುತ್ತದೆ. ಆ ವೇಳೆ ಬ್ಯಾಂಕ್‌ಗಳಿಂದ ತಕ್ಷಣಕ್ಕೆ ಸಹಕಾರ ಸಿಗದೆ ವಿಳಂಬ ಆಗುತ್ತಿರುವುದಕ್ಕೆ ಅನೇಕ ವೇಳೆ ಸಂತ್ರಸ್ತರನ್ನು ನಷ್ಟದಿಂದ ರಕ್ಷಿಸುವುದು ಕಷ್ಟವಾಗುತ್ತಿದೆ. ಆದ್ದರಿಂದ ಬ್ಯಾಂಕ್‌ಗಳು ಕ್ಷಿಪ್ರಗತಿಯಲ್ಲಿ ಸಹಕರಿಸಬೇಕು ಹಾಗೂ ಕೋರ್ಟ್ ಆದೇಶವಾದ ಪ್ರಕರಣಗಳಲ್ಲಿ ತಕ್ಷಣಕ್ಕೆ ಕ್ರಮ ವಹಿಸಬೇಕೆಂದು ಸೈಬರ್ ವಿಭಾಗದ ಡಿವೈಎಸ್ಪಿ ಕೃಷ್ಣಮೂರ್ತಿ ಹೇಳಿದರು. ಸೈಬರ್ ಪ್ರಕರಣಗಳಿಗೆ ಸಂಬಂಧಿಸಿ ಸಂತ್ರಸ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ಬ್ಯಾಂಕ್‌ಗಳು ವಿಳಂಬ ಮಾಡದೆ ಸಹಕರಿಸಬೇಕು. ಸೈಬರ್ ಪೊಲೀಸ್ ಠಾಣೆಯವರು ಬ್ಯಾಂಕ್‌ವಾರು ಮುಖ್ಯ ಕಚೇರಿಗಳ ಇಮೇಲ್ ಐಡಿಯನ್ನು ಸಂಗ್ರಹಿಸಿ ಅಲ್ಲಿ ವ್ಯವಹರಿಸಿದಲ್ಲಿ ಶೀಘ್ರ ಪ್ರತಿಕ್ರಿಯೆ ಲಭಿಸುವುದು ಎಂದು ಜಿಲಾಧಿಕಾರಿ ತಿಳಿಸಿದರು.