ನ್ಯೂಸ್

ಬ್ಯಾಂಕಿನಿಂದ ಚಿನ್ನ ಕದ್ದಿದ್ದ ಆರೋಪಿ ಬಂಧನ

ಹಾಸನ: ಎಸ್‌ಬಿಐ ಶಾಖೆಯಲ್ಲಿ ಗ್ರಾಹಕರು ಗಿರಿವಿ ಇಟ್ಟಿದ್ದ ಚಿನ್ನವನ್ನು ಕದ್ದು ನಾಪತ್ತೆಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.
ಅರಕಲಗೂಡು ತಾಲೂಕು ಬೆಳವಾಡಿ ಗ್ರಾಮದ ಲವ (49) ಬಂಧಿತ. ಬೆಳವಾಡಿ ಎಸ್‌ಬಿಐ ಶಾಖೆಯಲ್ಲಿ ಕಳೆದ ಹತ್ತು ವರ್ಷದಿಂದ ಹೊರಗುತ್ತಿಗೆ ಮೇಲೆ ಅಟೆಂಡರ್ ಆಗಿದ್ದ ಲವ 1.7 ಕೆಜಿ ಚಿನ್ನದ ಆಭರಣಗಳನ್ನು ಕಳವು ಮಾಡಿದ್ದ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಏನಿದು ಪ್ರಕರಣ?: ಗಿರವಿ ಇಡಲು ಬ್ಯಾಂಕ್‌ಗೆ ಬರುತ್ತಿದ್ದವರ ಸ್ನೇಹ ಗಳಿಸುತ್ತಿದ್ದ ಲವ, ಆಭರಣಗಳ ವಿವರ ಪಡೆದುಕೊಳ್ಳುತ್ತಿದ್ದ. ವ್ಯವಸ್ಥಾಪಕರು ಒಡವೆ ಪರಿಶೀಲನೆ ನಡೆಸಿದ ನಂತರ ಈತ ತನ್ನ ಕೈಚಳಕದಿಂದ ಅದೇ ಮಾದರಿಯ ನಕಲಿ ಚಿನ್ನಾಭರಣಗಳನ್ನು ಇರಿಸಿ ಅಸಲಿ ಒಡವೆ ದೋಚುತ್ತಿದ್ದ. ಕದ್ದ ಒಡವೆಯನ್ನು ಖಾಸಗಿ ಕಂಪನಿಯಲ್ಲಿ ಗಿರವಿ ಇಟ್ಟು ಹಣ ಪಡೆದುಕೊಳ್ಳುತ್ತಿದ್ದ. ಗ್ರಾಹಕರು ತಮ್ಮ ಒಡವೆ ಬಿಡಿಸಿಕೊಳ್ಳಲು ಬರುವ ಸುದ್ದಿ ತಿಳಿಯುತ್ತಿದ್ದಂತೆ ಮತ್ತೆ ಬ್ಯಾಂಕಿನಿಂದ ನಕಲಿ ಒಡವೆಗಳನ್ನು ತೆಗೆದುಕೊಂಡು ಹೋಗಿ ಗಿರವಿ ಇಟ್ಟಿದ್ದ ಆಭರಣ ತಂದು ಬ್ಯಾಂಕಿನಲ್ಲಿಡುತ್ತಿದ್ದ. ಮೇ 5ರಂದು ಬ್ಯಾಂಕಿನ ಗಿರವಿ ವಿಭಾಗದವರು ಚಿನ್ನ ಪರಿಶೀಲನೆ ವೇಳೆ ಲವನ ವಂಚನೆ ಜಾಲ ಬಯಲಾಗಿದೆ. ಮೇನೇಜರ್ ನೀಡಿದ ವರದಿ ಆಧರಿಸಿ, ಹಾಸನ ಎಸ್‌ಬಿಐ ಪ್ರಾದೇಶಿಕ ಕಚೇರಿ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಅನುರಾಧಾ ಜೂನ್ 14ರಂದು ಕೊಣನೂರು ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಬ್ಯಾಂಕಿನ ಭದ್ರತಾ ಕಪಾಟಿನಲ್ಲಿದ್ದ 30 ಪಾಕೆಟ್ ಪೈಕಿ 18 ಪಾಕೆಟ್ ನಕಲಿ ಚಿನ್ನದ ಆಭರಣ ಎಂದು ಖಾತ್ರಿಯಾಯಿತು. ಬ್ಯಾಂಕ್ ಅಧಿಕಾರಿಗಳ ಜತೆ ವಿಶ್ವಾಸಗಳಿಸಿದ್ದ ಲವ ಚಿನ್ನದ ಸಾಲದ ದಸ್ತ್ತಾವೇಜು ಉಸ್ತುವಾರಿ ಹೊತ್ತಿದ್ದ. ತನಗೆ ಬ್ಯಾಂಕಿನಲ್ಲಿ ದೊರೆತ ಅವಕಾಶದಿಂದ ಅಸಲಿ ಚಿನ್ನದ ಆಭರಣಗಳನ್ನೇ ಲಪಟಾಯಿಸಿದ್ದ. ದೂರುದಾರರ ಪ್ರಕಾರ, ಆರೋಪಿ ಲವ ಅಪಹರಿಸಿರುವ ಚಿನ್ನದ ಒಟ್ಟು ಮೌಲ್ಯ ಸುಮಾರು ಒಂದು ಕೋಟಿ ರೂ. ಎಂದು ಅಂದಾಜಿಸಲಾಗಿದೆ. 19 ಎಚ್‌ಎಸ್‌ಎನ್ 09ಎ
ಆರೋಪಿ ಲವ