ನ್ಯೂಸ್

ಬೋವಿ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು / ಅರ್ಜಿ ಹಿಡಿದು ಬೆಂಗಳೂರಿಗೆ ಬರುವ ಅವಶ್ಯಕತೆ ಇಲ್ಲ / ಮಧ್ಯವರ್ತಿಗಳನ್ನು ದೂರವಿಡಿ / ಎಂ ರಾಮಪ್ಪ

ವಿಜಯವಾಣಿ ಸುದ್ದಿಜಾಲ ಕೋಲಾರ

ಭೋವಿ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರವು ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಬಗ್ಗೆ ಸಮುದಾಯದ ಮುಖಂಡರು ಸಾರ್ವಜನಿಕರಿಗೆ ಅರಿವು ಮೂಡಿಸಿ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಲು ಸಹಕರಿಸಬೇಕು. ಮಧ್ಯವರ್ತಿಗಳಿಗೆ ಕಡಿವಾಣ ಹಾಕಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ತಲುಪುವಂತೆ ಆಗಬೇಕು ಎಂದು ಭೋವಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ ತಿಳಿಸಿದರು.

ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಅರ್ಹ ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಸಾಕು. ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಬಂದು ಅರ್ಜಿ ಹಿಂದೆ ಬೀಳುವ ಕೆಲಸವನ್ನು ಮಾಡಬೇಡಿ ನಾನೇ ನಿಮ್ಮ ಜಿಲ್ಲೆಗೆ ಬಂದು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದರು. ೨೦೨೫-೨೬ನೇ ಸಾಲಿನಲ್ಲಿ ಹೆಚ್ಚಿನ ಗುರಿ ನಿಗದಿಪಡಿಸಿದ್ದು, ಭೋವಿ ಸಮುದಾಯದವರ ಸ್ವಾವಲಂಬನೆ, ಉದ್ಯೋಗಾವಕಾಶ ಮತ್ತು ಕೃಷಿ ಆಧಾರಿತ ಅಭಿವೃದ್ಧಿಗೆ ನಿಗಮವು ಹೆಚ್ಚಿನ ಒತ್ತು ನೀಡಿದೆ ಎಂದರು.

ನಿಗಮದ ಸ್ಥಾಪನೆ ಮತ್ತು ಉದ್ದೇಶ :

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮವು ೨೦೧೫-೧೬ ರ ರಾಜ್ಯ ಬಜೆಟ್‌ನಲ್ಲಿ ಘೋಷಣೆಯಾಗಿ, ೨೦೧೬ ರಲ್ಲಿ ಅಧಿಕೃತವಾಗಿ ಸ್ಥಾಪನೆಯಾಯಿತು. ಭೋವಿ, ಒಡ್ಡೆ, ವಡ್ಡರ್, ಮಣ್ಣುವಡ್ಡರ ಸೇರಿದಂತೆ ಒಟ್ಟು ೯ ಉಪಜಾತಿಗಳ ಸಮಗ್ರ ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವುದೇ ನಿಗಮದ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು.

ಕೋಲಾರ ಜಿಲ್ಲೆಯಲ್ಲಿ ಭೋವಿ ಸಮುದಾಯದ ಒಟ್ಟು ಜನಸಂಖ್ಯೆ ೮೨,೦೩೫ ಇದ್ದು, ಪುರುಷರು ೪೧,೫೪೩, ಮಹಿಳೆಯರು ೪೦,೪೯೨ ಇದೆ ಎಂದರು.

ಕೋಲಾರದಲ್ಲಿ ಕಛೇರಿ :

ನಿಗಮದ ಯೋಜನೆಗಳನ್ನು ಸಮುದಾಯಕ್ಕೆ ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ೨೦೨೦ರಲ್ಲಿ ಕೋಲಾರದಲ್ಲಿ ಜಿಲ್ಲಾ ಕಚೇರಿಯನ್ನು ಸ್ಥಾಪಿಸಲಾಗಿದ್ದು, ಕಚೇರಿ ಕಾರ್ಯಗಳಿಗೆ ಮತ್ತು ಸಮುದಾಯದ ಅನುಕೂಲಕ್ಕಾಗಿ, ಕುಂಬಾರಹಳ್ಳಿ ಪ್ರದೇಶದಲ್ಲಿ ೧೦,೦೦೦ ಚದರ ಅಡಿ ಭೂಮಿಯನ್ನು ೫೫.೮೧ ಲಕ್ಷ ವೆಚ್ಚದಲ್ಲಿ ಈಗಾಗಲೇ ಖರೀದಿಸಲಾಗಿದೆ. ಪ್ರಸ್ತುತ ಒಬ್ಬ ಜಿಲ್ಲಾ ವ್ಯವಸ್ಥಾಪಕರು ಮತ್ತು ಇಬ್ಬರು ಸಹಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಸ್ವಯA ಉದ್ಯೋಗ ನೇರ ಸಾಲ ಯೋಜನೆಯಡಿ ೧ ಲಕ್ಷ ಘಟಕ ವೆಚ್ಚದಲ್ಲಿ ೫೦,೦೦೦ ಸಹಾಯಧನ ಮತ್ತು ಶೇ.೪ ರ ಬಡ್ಡಿ ದರದಲ್ಲಿ ೫೦,೦೦೦ ಸಾಲ ನೀಡಲಾಗುತ್ತದೆ. ಕುರಿ ಮತ್ತು ಮೇಕೆ ಸಾಕಾಣಿಕೆ ಯೋಜನೆಗೂ ಸಹ ೧ ಲಕ್ಷ ಘಟಕ ವೆಚ್ಚದಲ್ಲಿ ೫೦,೦೦೦ ಸಹಾಯಧನ ಮತ್ತು ಶೇ.೪ ರ ಬಡ್ಡಿ ದರದಲ್ಲಿ ೫೦,೦೦೦ ಸಾಲದೊಂದಿಗೆ ನೆರವು ನೀಡುತ್ತಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ ೫ ಲಕ್ಷದವರೆಗೆ ಅರ್ಧ ಸಹಾಯಧನ ಮತ್ತು ಅರ್ಧ ಸಾಲದ ರೂಪದಲ್ಲಿ ಆರ್ಥಿಕ ಶಕ್ತಿ ತುಂಬುತ್ತಿದೆ ಎಂದರು.

ಈ ವರ್ಷದ ಗುರಿ :

೨೦೨೫-೨೬ ನೇ ಸಾಲಿನ ಪ್ರಸಕ್ತ ಆರ್ಥಿಕ ಗುರಿಯನ್ನು ಹೆಚ್ಚಿಸಲಾಗಿದೆ. ಈ ಸಾಲಿನಲ್ಲಿ ಒಟ್ಟು ೧,೦೭೯ ಫಲಾನುಭವಿಗಳಿಗೆ ೭೧೩.೭೫ ಲಕ್ಷ ಆರ್ಥಿಕ ನೆರವು ನೀಡಲು ಗುರಿ ಹೊಂದಲಾಗಿದೆ. ಸರ್ಕಾರದ ಈ ಎಲ್ಲಾ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಲು ಸಮುದಾಯದ ಮುಖಂಡರು ಜನರಲ್ಲಿ ಅರಿವು ಮೂಡಿಸಬೇಕು ಎಂದು ವ್ಯವಸ್ಥಾಪಕ ನಿರ್ದೇಶಕ ಚಂದ್ರನಾಯಕ್ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಜಿಲ್ಲೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಅದರಲ್ಲಿ ಎಲ್ಲಾ ನಿಗಮ ಮಂಡಳಿಗಳಲ್ಲಿನ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಭೋವಿ ಜನಾಂಗದ ಕುಶಲಕರ್ಮಿಗಳು, ಉದ್ಯಮಿದಾರರು, ಹೈನುಗಾರರು, ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ಸಬ್ಸಿಡಿ, ಸಾಲ ಇತರೆ ಸವಲತ್ತು ನೀಡಬೇಕು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪಾಸಾದವರಿಗೆ ಉದ್ಯಮಶೀಲ ತರಬೇತಿ ನೀಡಿ ಅವರನ್ನು ಸ್ವಾವಲಂಭಿಗಳನ್ನಾಗಿ ಮಾಡಬೇಕೆಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಪಿ ಭಾಗೇವಾಡಿ, ಅಪರ ಜಿಲ್ಲಾಧಿಕಾರಿ ಮಂಗಳ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀನಿವಾಸ್, ಜಿಲ್ಲಾ ವ್ಯವಸ್ಥಾಪಕರಾದ ವಿಜಯಲಕ್ಷ್ಮಿ, ಮಾಜಿ ಶಾಸಕರಾದ ಎಂ ನಾರಾಯಣಸ್ವಾಮಿ, ಸೇರಿದಂತೆ ಸಮುದಾಯದ ಮುಖಂಡರು ಜಿಲ್ಲೆಯ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಚಿತ್ರ ೦೬ ಕೆ.ಎಲ್.ಆರ್. ೦೩ : ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬೋವಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ, ಜಿಲ್ಲಾಧಿಕಾರಿ ಎಂ.ಆರ್.ರವಿ, ಸಿ.ಇ.ಓ. ಪ್ರವೀಣ್ ಪಿ.ಬಾಗೇವಾಡಿ ಮುಂತಾದವರು ಇದ್ದರು.