ತರೀಕೆರೆ: ಬೇಲೇನಹಳ್ಳಿ ಗ್ರಾಪಂ ಉಪಾಧ್ಯಕ್ಷೆಯಾಗಿ ಇಟ್ಟಿಗೆ ಗ್ರಾಮದ 5ನೇ ವಾರ್ಡ್ ಸದಸ್ಯೆ ವನಜಾಕ್ಷಿಬಾಯಿ ಆಯ್ಕೆಯಾದರು.
14 ಸದಸ್ಯ ಬಲದ ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಇಟ್ಟಿಗೆ ಗ್ರಾಮದ ವನಜಾಕ್ಷಿಬಾಯಿ ಮತ್ತು ಎ.ರಂಗಾಪುರ ಗ್ರಾಮದ ಸುಂಕಮ್ಮ ನಾಮಪತ್ರ ಸಲ್ಲಿಸಿ ತೀವ್ರ ಸ್ಪರ್ಧೆ ನೀಡಿದ್ದರು. ವನಜಾಕ್ಷಿಬಾಯಿಗೆ 7, ಸುಂಕಮ್ಮ ಪರ 6 ಮತ ಚಲಾವಣೆಯಾಗಿ ಮತ್ತೊಂದು ಮತ ಇಬ್ಬರಿಗೂ ಚಲಾವಣೆಯಾಗಿದ್ದರಿಂದ 1 ಮತಗಳ ಅಂತರದಿಂದ ವನಜಾಕ್ಷಿಬಾಯಿ ಗೆಲುವು ತಮ್ಮದಾಗಿಸಿಕೊಂಡರು. ಸದಸ್ಯರು ನೂತನ ಉಪಾಧ್ಯಕ್ಷೆಯನ್ನು ಅಭಿನಂದಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ದಯಾಶಂಕರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಗ್ರಾಪಂ ಅಧ್ಯಕ್ಷ ಇ.ಟಿ.ಕಾಂತಕುಮಾರ್‌ನಾಯ್ಕ, ಬಿ.ವಿ.ಶಿವಕುಮಾರಸ್ವಾಮಿ, ಸುಧಾ, ಟಿ.ಆರ್.ಬಸವರಾಜ್, ಎಚ್.ಆರ್.ಉಮೇಶ, ಸುಮಿತ್ರಮ್ಮ, ಪಿಡಿಒ ರಘುವೀರ್ ಮತ್ತಿತರರಿದ್ದರು.