ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನದ ಹೊರನೋಟ. 
ನ್ಯೂಸ್

ಬೇಡಿದ ವರ ನೀಡುವ ಮಾಯಕಾರ

ಎಚ್.ಡಿ.ಕೋಟೆ: ಬೇಡಿದ ವರವನ್ನು ನೀಡುವ, ಭಕ್ತರ ಪಾಲಿನ ಆರಾಧ್ಯ ದೈವ ಮಾಯಕಾರ ಮಾದಪ್ಪ ಬೆಳೆದ ಸ್ಥಳವೇ ಭೀಮನಕೊಲ್ಲಿ ಗ್ರಾಮ. ತಾಲೂಕಿನ ಪ್ರಸಿದ್ಧ ದೇವಸ್ಥಾನಗಳಲ್ಲಿ ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನವೂ ಒಂದು.

ಪ್ರತಿದಿನ ದೇವಸ್ಥಾನದಲ್ಲಿ ಪೂಜೆ ನಡೆಯುತ್ತದೆ. ಪ್ರತಿ ಅಮಾವಾಸ್ಯೆ ದಿನ ವಿಶೇಷ ಪೂಜೆ ಇರುತ್ತದೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಮೂರು ದಿನಗಳ ಕಾಲ ದೊಡ್ಡ ಜಾತ್ರೆ ನಡೆಯುತ್ತದೆ. ರಥೋತ್ಸವ, ಭೀಮನ ಅಮಾವಾಸ್ಯೆ, ರುದ್ರಾಭಿಷೇಕ ಪೂಜಾ ಸಂದರ್ಭದಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ಜಾತ್ರಾ ಸಂದರ್ಭದಲ್ಲಿ 30 ರಿಂದ 40 ಸಾವಿರ ಜನರು ಸೇರುತ್ತಾರೆ.

ಪ್ರತಿ ವರ್ಷ ನಂಜನಗೂಡು ತಾಲೂಕಿನ ಕಳಲೆ ಗ್ರಾಮಸ್ಥರು ಹಾಗೂ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದ 24 ಮನೆ ತೆಲಗುಶೆಟ್ಟರು ಪ್ರಸಾದ ವಿನಿಯೋಗಕ್ಕೆ ಕೈ ಜೋಡಿಸುತ್ತಾರೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ತಾಲೂಕು ಕೇಂದ್ರದಿಂದ 30 ಕಿ.ಮೀ. ದೂರದಲ್ಲಿ ಈ ದೇವಸ್ಥಾನ ಇದ್ದು, ಮೈಸೂರು ಮಾರ್ಗವಾಗಿ ಹ್ಯಾಂಡ್‌ಪೋಸ್ಟ್ ಮೂಲಕ ಕಬಿನಿ ಜಲಾಶಯದ ಮುಂಭಾಗದಿಂದ ತಲುಪಬಹುದು. ಜತೆಗೆ ನಂಜನಗೂಡಿನಿಂದ ಸರಗೂರು ಮಾರ್ಗವಾಗಿ ಇಲ್ಲಿಗೆ ತಲುಪಬಹುದು.

ಕಬಿನಿ ಹಿನ್ನೀರಿನಲ್ಲಿ ದೇವಸ್ಥಾನ ಇರುವುದು ವಿಶೇಷ. ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಸ್ಥಳ ಇದಾಗಿದೆ. ದೇವಸ್ಥಾನದ ಸುತ್ತ ನೀರು ಇದ್ದು, ಕಬಿನಿ ಜಲಾಶಯ ಭರ್ತಿಯಾದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗುವಷ್ಟು ಜಾಗ ಬಿಟ್ಟು ಇನ್ನುಳಿದ ಸ್ಥಳ ನೀರಿನಿಂದ ಆವೃತವಾಗಿರುತ್ತದೆ. ಹಾಗಾಗಿ ಇದೊಂದು ವಿಶೇಷ ದೇವಸ್ಥಾನವಾಗಿದೆ.

ದೇವಸ್ಥಾನದ ಟ್ರಸ್ಟಿಗಳು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸಲು ಸದಾ ಸಿದ್ಧರಾಗಿರುತ್ತಾರೆ. ಅರ್ಚಕರು ವಂಶಪಾರಂಪರ್ಯವಾಗಿ ಈ ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು ಬಂದಿದ್ದಾರೆ. ಮಳೆಗಾಲದಲ್ಲಿ ಇಲ್ಲಿಗೆ ದೇವಸ್ಥಾನಕ್ಕೆ ಬರಲು ದೇವಸ್ಥಾನ ಸಮಿತಿ ವತಿ ಬೋಟ್ ವ್ಯವಸ್ಥೆ ಮಾಡಿದ್ದಾರೆ.

ದೇವಸ್ಥಾನದ ಹಿನ್ನೆಲೆ: ಮಲೆ ಮಹದೇಶ್ವರರು ಭೀಮನಕೊಲ್ಲಿ ಗ್ರಾಮಕ್ಕೆ ಬಂದಿದ್ದರು ಎಂಬ ಪ್ರತೀತಿ ಇದೆ. 300-400 ವರ್ಷಗಳ ಹಿಂದೆ ಭೀಮನಕೊಲ್ಲಿ ಗ್ರಾಮದ ಹಲಗಮ್ಮ, ಹಲಗಪ್ಪ ದಂಪತಿ ಪ್ರತಿವರ್ಷ ಮಹದೇಶ್ವರ ಬೆಟ್ಟಕ್ಕೆ ಬುತ್ತಿ ಕಟ್ಟಿಕೊಂಡು, ವಾರಗಟ್ಟಲೆ ಬರಿಗಾಲಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅಲ್ಲಿ ಇದ್ದ ಕನ್ಬಮಲ್ಲಯ್ಯ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದರು.

ಪೂಜೆಗೂ ಮೊದಲು ಹಲಗಮ್ಮ ದಂಪತಿ ಬೆಟ್ಟದಲ್ಲಿ ಇರುವ ಕೊಳದಲ್ಲಿ ಸ್ನಾನ ಮಾಡುವುದು ಪದ್ಧತಿ. ಸ್ನಾನ ಮಾಡುವ ಸಂದರ್ಭದಲ್ಲಿ ಹಲಗಮ್ಮ, ಕೊಳದಲ್ಲಿ ಇದ್ದ ಐದಾರು ಚಿಟ್ಟೆ ಕಲ್ಲುಗಳನ್ನು ಜತೆಯಲ್ಲಿ ತೆಗೆದುಕೊಂಡು ಬರುತ್ತಾರೆ. ಈ ವಿಚಾರವನ್ನು ಬೆಟ್ಟದಲ್ಲಿ ಗಂಡ ಹಲಗಪ್ಪನಿಗೆ ತಿಳಿಸುವುದಿಲ್ಲ. ಮನೆಗೆ ಬಂದಾಗ ಹಲಗಮ್ಮ ಚಿಟ್ಟೆ ಕಲ್ಲುಗಳನ್ನು ತಂದ ವಿಚಾರವನ್ನು ಗಂಡನಿಗೆ ತಿಳಿಸುತ್ತಾರೆ. ಆಗ ಹಲಗಪ್ಪ ಬೆಟ್ಟದಿಂದ ಯಾವುದೇ ವಸ್ತುಗಳನ್ನು ತರಬಾರದು ಎಂದು ಚಿಟ್ಟೆ ಕಲ್ಲುಗಳನ್ನು ಹೊರಗಡೆ ಬಿಸಾಕಿ ಬರುತ್ತಾರೆ.

ನಂತರದ ದಿನಗಳಲ್ಲಿ ಹಲಗಪ್ಪ, ಹಲಗಮ್ಮ ದಂಪತಿಗೆ ಸೇರಿದ ಹಾಲು ಕರೆಯುವ ಹಸು ನಿತ್ಯ ಹಾಲು ಕೊಡುವುದನ್ನು ಬಿಡುತ್ತದೆ. ಮನೆಯಲ್ಲಿ ಇದ್ದಾಗ ಹಸು ಕೆಚ್ಚಲಿನಲ್ಲಿ ಹಾಲು ತುಂಬಿರುತ್ತದೆ. ಆದರೆ ಮೇಯಲು ಕಾಡಿಗೆ ಹೋಗಿ ಮನೆಗೆ ಬಂದಾಗ ಹಸುವಿನ ಕೆಚ್ಚಲಿನಲ್ಲಿ ಹಾಲು ಇರುವುದಿಲ್ಲ. ಇದರಿಂದ ಅನುಮಾನಗೊಂಡ ಹಲಗಪ್ಪ, ಹಸುವನ್ನು ಹಿಂಬಾಲಿಸಿ ಹೋಗಿ ನೋಡಿದಾಗ ಹಸು ಒಂದು ಕಲ್ಲಿನ ಹತ್ತಿರ ಹೋಗಿ ಹಾಲನ್ನು ಕರೆಯುತ್ತಿರುತ್ತದೆ. ಹತ್ತಿರಕ್ಕೆ ಹೋಗಿ ನೋಡಿದಾಗ ಕಲ್ಲುಮೂರ್ತಿ ಉದ್ಭವ ಆಗಿರುತ್ತದೆ. ಆಗ ಹಲಗಪ್ಪನಿಗೆ ನೆನಪಗಾಗುತ್ತದೆ ಬೆಟ್ಟದಿಂದ ತಂದ ಚಿಟ್ಟೆ ಕಲ್ಲೇ ಈ ಉದ್ಭವ ಮೂರ್ತಿ ಎಂದು.
ಆಗ ಹಲಗಪ್ಪ ದಂಪತಿ ಉದ್ಭವವಾದ ಸ್ಥಳದಲ್ಲಿ ಚಿಕ್ಕದಾಗಿ ದೇವಸ್ಥಾನ ಕಟ್ಟಿಸುತ್ತಾರೆ. ನಂತರ ಸುತ್ತಮುತ್ತಲಿನ ಜನರು ಇಲ್ಲಿಗೆ ಬಂದು ಪೂಜೆ ಮಾಡುತ್ತಾರೆ. ನಂತರ ಸುತ್ತಮುತ್ತಲಿನ ಮೂವತ್ತಮೂರು ಗ್ರಾಮಗಳು ಸೇರಿ ದೊಡ್ಡ ಜಾತ್ರೆ ಮಾಡಿಕೊಂಡು ಬಂದಿರುತ್ತಾರೆ.

ಕಬಿನಿ ಜಲಾಶಯ ನಿರ್ಮಾಣಕ್ಕೂ ಮುನ್ನ ಭೀಮನಕೊಲ್ಲಿ ಗ್ರಾಮದಲ್ಲಿ ದೊಡ್ಡ ಜಾತ್ರೆ ನಡೆಯುತ್ತಿತ್ತು. ಕಬಿನಿ ಅಣೆಕಟ್ಟು ಕಟ್ಟಿದ ಮೇಲೆ ಮೂವತ್ತಮೂರು ಹಳ್ಳಿಗಳು ನೀರಿನಲ್ಲಿ ಮುಳುಗಡೆ ಆದವು. ನಂತರ ದೇವಸ್ಥಾನದಲ್ಲಿ ಪೂಜೆ ಮಾತ್ರ ನಡೆದು ಜಾತ್ರೆ ನಿಂತು ಹೋಯಿತು. ಆದರೆ, ನೀರಿನ ಮಧ್ಯೆ ಇದ್ದರೂ ದೇವಸ್ಥಾನ ಮುಳುಗಡೆ ಆಗುವುದಿಲ್ಲ ಎಂಬುದೇ ಪವಾಡ.

ಪವಾಡ ದೇವರು: ಹಿಂದಿನ ಕಾಲದಲ್ಲಿ ಗ್ರಾಮಗಳಲ್ಲಿ ದನಕರುಗಳಿಗೆ ಕಾಲುಬಾಯಿ ಜ್ವರ ಸೇರಿದಂತೆ ಮಾರಣಾಂತಿಕ ಕಾಯಿಲೆ ಬರುತ್ತಿದ್ದ ಸಂದರ್ಭದಲ್ಲಿ ಜನರು ಭೀಮನಕೊಲ್ಲಿ ಮಹದೇಶ್ವರಸ್ವಾಮಿಗೆ ಹರಕೆ ಹೊತ್ತುಕೊಳ್ಳುತ್ತಿದ್ದರು. ಆಗ ಜನರ ಹರಕೆಯಂತೆ ದನಕರುಗಳಿಗೆ ಬಂದ ಕಾಯಿಲೆ ವಾಸಿಯಾಗಿ ಪಾರಾಗುತ್ತಿದ್ದರು. ದೈವ ಸಂಕಲ್ಪ ಹರಕೆ ಹೊತ್ತುಕೊಂಡ ಭಕ್ತಾದಿಗಳು ಹರಕೆ ತೀರಿಸುತ್ತಿದ್ದರು. ಜಾತ್ರೆ ಸಂದರ್ಭದಲ್ಲಿ ದೀವಟಿಗೆ ಸಲಾಂ ಪೂಜೆ ಮಾಡುತ್ತಿದ್ದರು. ಆ ವೇಳೆ ಭಕ್ತಾದಿಗಳು ಹಸು, ಕರು, ಹೋರಿ ಹರಕೆ ಬಿಡುತ್ತಿದ್ದರು. ಜಾತ್ರೆ ಸಂದರ್ಭದಲ್ಲಿ ಅವುಗಳನ್ನು ತಂದು ಬಿಡುತ್ತಿದ್ದರು. ಈಗಲೂ ಭಕ್ತರು ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಸರ್ಕಾರದ ಸಹಕಾರದಲ್ಲಿ ಅನುದಾನ ಬಿಡುಗಡೆ ಮಾಡಿಸಿ ದೇವಸ್ಥಾನದ ಜೀರ್ಣೋದ್ಧಾರ, ಸಮುದಾಯ ಭವನ, ಭಕ್ತರು ಉಳಿದುಕೊಳ್ಳಲು ವಸತಿಗೃಹ ಸೇರಿದಂತೆ ದೇವಸ್ಥಾನದಲ್ಲಿ ಮೂಲ ಸೌಕರ್ಯ ಒದಗಿಸಲು ದೇವಸ್ಥಾನ ಸಮಿತಿ ಕೆಲಸ ಮಾಡುತ್ತಿದೆ.

ಸುತ್ತೂರು ಶ್ರೀಗಳ ಭೇಟಿ: ಸುತ್ತೂರು ಮಠದ ಶ್ರೀಗಳಾದ ಲಿಂಗೈಕ್ಯ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಭೀಮನಕೊಲ್ಲಿ ಗ್ರಾಮದಲ್ಲಿ ನಡೆಯುವ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಭೇಟಿ ನೀಡಿ ಭಕ್ತರಿಗೆ ಆಶೀರ್ವಾದ ಮಾಡುತ್ತಿದ್ದರು. ಅದನ್ನು ಈಗಿನ ಶ್ರೀಗಳು ಮುಂದುವರಿಸಿಕೊಂಡು ಬಂದಿದ್ದು, ಜಾತ್ರಾ ಸಂದರ್ಭದಲ್ಲಿ ಬಂದು ಜನರಿಗೆ ಆಶೀರ್ವಾದ ನೀಡುತ್ತಿದ್ದಾರೆ.

ಇದೊಂದು ದೈವ ಶಕ್ತಿ ಇರುವ ದೇವಸ್ಥಾನ. ರಾಜ್ಯದ ಮೂಲೆಮೂಲೆಗಳಿಂದ ಭಕ್ತರನ್ನು ಹೊಂದಿರುವ ಪ್ರಸಿದ್ಧ ದೇವಾಲಯ. ಮಲೆ ಮಹದೇಶ್ವರಸ್ವಾಮಿಗಳು ಇಲ್ಲಿಗೆ ಬಂದು ಹೋಗಿದ್ದಾರೆ ಎಂದು ಜನರು ನಂಬಿದ್ದಾರೆ. ಜನರ ಭಾವನೆಗಳಿಗೆ ಧಕ್ಕೆ ಆಗದಂತೆ ಪೂಜೆ ಮಾಡಿಕೊಂಡು ಬಂದಿದ್ದೇವೆ. ಅಮಾವಾಸ್ಯೆ ಪೂಜೆ, ರಥೋತ್ಸವ ಹಾಗೂ ಜಾತ್ರೆ ಸಂದರ್ಭದಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ನೀಡಲಾಗಿದೆ.
ಎಂ.ಎನ್.ಜಗದೀಶ್ ಕಾರ್ಯದರ್ಶಿ ದೇವಸ್ಥಾನ ಸಮಿತಿ ಭೀಮನಕೊಲ್ಲಿ ಮಹದೇಶ್ವರ ಸ್ವಾಮಿ ದೇವಸ್ಥಾನ.