ಬಾಳೆಹೊನ್ನೂರು: ಕೊಪ್ಪ ಮತ್ತು ಶೃಂಗೇರಿ ತಾಲೂಕಿನ ಗಡಿ ಭಾಗವಾದ ಗಡಿಕಲ್ ಹೊಸಮನೆಯಿಂದ, ಅತ್ತಿಕುಳಿ, ತೋಟದಮನೆ, ಕಾರೇಮನೆ, ಹುಲ್ತಾಳ್, ಗಂಗಮೂಲ, ಹಾಗಲಗಂಚಿ ಮೂಲಕ ಹಾದು ಹೋಗಿ ಹಂಚಿನಕೊಡುಗೆವರೆಗೆ ಒಟ್ಟು 8 ಕಿ.ಮೀ. ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನಶಕ್ತಿ ಸಂಘಟನೆಯ ಸದಸ್ಯರು ಶಾಸಕ ಟಿ.ಡಿ.ರಾಜೇಗೌಡರಿಗೆ ಮನವಿ ಸಲ್ಲಿಸಿದರು. ಖಾಂಡ್ಯ ಪ್ಲಾಂಟರ್ಸ್ ಕ್ಲಬ್‌ನಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಶೃಂಗೇರಿ ಕ್ಷೇತ್ರದ ವಿವಿಧ ಸಮಸ್ಯೆಗಳ ಕುರಿತು ಶಾಸಕ ಟಿ.ಡಿ.ರಾಜೇಗೌಡಗೆ ಮನವಿ ಸಲ್ಲಿಸಿ ಜನಶಕ್ತಿ ಸಂಘಟನೆ ಮುಖಂಡ ವೆಂಕಟೇಶ್ ಹಾಗಲಗಂಚಿ ಮಾತನಾಡಿ, ನಾವು ಪ್ರಸ್ತಾಪಿಸಿರುವ ಹಲವು ಸಮಸ್ಯೆಗಳಿಗೆ ಈವರೆಗೆ ಪರಿಹಾರ ದೊರೆತ್ತಿಲ್ಲ. ಇನ್ನು ಮುಂದೆ ಬೇಡಿಕೆ ಈಡೇರದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು. ವಸತಿ ಮತ್ತು ಭೂಮಿ ಮಲೆನಾಡಿನ ಪ್ರಮುಖ ಸಮಸ್ಯೆ ಆಗಿರುವುದರಿಂದ ಅಸಸ್ಮೆಂಟ್ ಮತ್ತು ಹಕ್ಕುಪತ್ರ ಕೊಡುವುದಕ್ಕೆ ಅರಣ್ಯ ವ್ಯಾಖ್ಯಾನ ಸಮಸ್ಯೆ ಆಗಿರುವುದರಿಂದ ಕೂಡಲೇ ಶಾಸಕರ ನೇತೃತ್ವದಲ್ಲಿ ಎಸ್‌ಎ್ಒ, ಜಿಲ್ಲಾಧಿಕಾರಿ ಹಾಗೂ ಐಟಿಡಿಪಿ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮೇಗೂರು, ತೆಕ್ಕೂರು, ಬುಕ್ಕಡಿಬೈಲ್, ಕೆರೆಕಟ್ಟೆ ಮತ್ತು ಶೃಂಗೇರಿಯಿಂದ ಎತ್ನಟ್ಟಿ ಮಾರ್ಗವಾಗಿ ಕೊಪ್ಪಕ್ಕೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ , ಕರ್ನಾಟಕ ಅರಣ್ಯ ಕಾಯ್ದೆ 1964 (ಎ) ಪ್ರಕಾರ ಸಾಗುವಳಿದಾರರಿಗೆ ಎಸಿಎ್ ಕೋರ್ಟ್ ಏಕಮುಖವಾಗಿ ಒತ್ತುವರಿ ತೆರವು ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಲೆನಾಡಿನ ಎಲ್ಲ ಅವಿಭಕ್ತ ಕುಟುಂಬಗಳ ಹಿಡುವಳಿ ಭೂಮಿಯನ್ನು ಸರ್ಕಾರವೇ ಕುಟುಂಬದ ಎಲ್ಲ ಸದಸ್ಯರಿಗೂ ಖಾತೆ ಮಾಡಿಕೊಡುವ ವ್ಯವಸ್ಥೆ ಹಳ್ಳಿಗಳಲ್ಲಿ ಕೈಗೆತ್ತಿಕೊಳ್ಳಬೇಕು. ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವಾಲ್ಮೀಕಿ ಆಶ್ರಮ ಶಾಲೆಗಳು, ಅಂಬೇಡ್ಕರ್, ಮುರಾರ್ಜಿ ವಸತಿ ಶಾಲೆಗಳಲ್ಲಿರುವ ಅವ್ಯವಸ್ಥೆ ಸರಿಪಡಿಸಬೇಕು, ಮುತ್ತಿನಕೊಪ್ಪ ಗ್ರಾಪಂನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಸ್ಥಳಾವಕಾಶ ಕಲ್ಪಿಸಬೇಕು. ಕೊರಲ್ಕೊಪ್ಪ ರಸ್ತೆ ಅಭಿವೃದ್ಧಿಗೆ ಕೂಡಲೇ ಹಣ ಬಿಡುಗಡೆಗೊಳಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಜನಶಕ್ತಿ ಸಂಘಟನೆಯ ಕೃಷ್ಣ ಕೊರಲ್‌ಕೊಪ್ಪ, ಸುರೇಶ್ ಗಡಿಕಲ್, ಜೀವಿತ್, ಅನಂತಕುಮಾರ್, ಸುದೀಪ್, ಪ್ರದೀಪ್, ವಾಸು ಯಡಗುಂದ ಮತ್ತಿತರರಿದ್ದರು.