ಹನೂರು: ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಬೇಡಗಂಪಣ ಸಮುದಾಯಕ್ಕೆ ಮೂಲ ಸೌಕರ್ಯದ ಜತೆಗೆ ಸರ್ಕಾರದ ಸವಲತ್ತುಗಳು ಸಿಗುತ್ತಿಲ್ಲ ಎಂದು ರೈತ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದರು.
ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವದ ವಿಚಾರಸಂಕಿರಣದಲ್ಲಿ ಬೇಡಗಂಪಣರ ಸಂಸ್ಕೃತಿ ಮತ್ತು ಸವಾಲುಗಳು ಕುರಿತು ವಿಷಯ ಮಂಡಿಸಿ ಮಾತನಾಡಿದರು.
ಮ.ಬೆಟ್ಟದ ವ್ಯಾಪ್ತಿಯಲ್ಲಿ ಸುಮಾರು 20 ಗ್ರಾಮಗಳಿದ್ದು, ಇಲ್ಲಿನ ಜನರು ಅರಣ್ಯದಂಚಿನಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿ ಮಹದೇಶ್ವರರ ಪೂಜಾ ಕಾಯಕ ಮಾಡಿಕೊಂಡು ಬರುತ್ತಿರುವ ಹಾಗೂ ವಿಶಿಷ್ಟ ಸಂಸ್ಕೃತಿ ಹೊಂದಿರುವ ಬೇಡಗಂಪಣ ಸಮುದಾಯ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ರಸ್ತೆ, ವಿದ್ಯುತ್, ಆಸ್ಪತ್ರೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ಕುಡಿಯುವ ನೀರಿನ ಸಮಸ್ಯೆ ಆಗಾಗ್ಗೆ ತಲೆದೋರುತ್ತಲೇ ಇರುತ್ತದೆ. ಸಾವಯವ ಕೃಷಿ ಅವಲಂಬಿಸಿರುವ ಈ ಸಮುದಾಯಕ್ಕೆ ಸರ್ಕಾರದಿಂದ ಸವಲತ್ತುಗಳು ಸಿಗುತ್ತಿಲ್ಲ. ಇತ್ತ ಅರಣ್ಯ ಪ್ರದೇಶದಲ್ಲಿ ದನ-ಕರುಗಳನ್ನು ಮೇಯಿಸಲು ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ. ಆದ್ದರಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಇನ್ನಾದರೂ ಇತ್ತ ಗಮನಹರಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಶಿವರಾಜು ಮಲೆಮಹದೇಶ್ವರರ ಗುಡ್ಡರ ಸಂಸ್ಕೃತಿ ಕುರಿತು ವಿಷಯ ಮಂಡಿಸಿದರು. ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಅಜ್ಜೀಪುರ ಮಠದ ನಂದೀಶ ಶಿವಾಚಾರ್ಯ ಸ್ವಾಮೀಜಿ, ಸಾಹಿತಿ ಶಿವಣ್ಣ ಇಂದ್ವಾಡಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹ.ಮಾ. ಗುರುಸ್ವಾಮಿ, ತಾಲೂಕು ಕಸಾಪ ಅಧ್ಯಕ್ಷ ಮಲ್ಲೇಶ್ ಮಾಲಿಂಕಟ್ಟೆ, ಸಂಶೋಧಕ ಚಿಕ್ಕಲ್ಲೂರು ಮಹೇಶ್ ಹಾಗೂ ಇನ್ನಿತರರು ಇದ್ದರು.
ಸಾಧಕರಿಗೆ ಸನ್ಮಾನ: ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಬಳಿಕ ಕಲಾ ತಂಡದ ಸದಸ್ಯರಿಂದ ವಚನ ಗಾಯನ, ನೃತ್ಯ, ಭಕ್ತಿಗೀತೆ, ಭಜನೆ, ತತ್ವಪದ ಗಾಯನ, ಮಹದೇಶ್ವರರ ಕಾವ್ಯ ಗಾಯನ ಹಾಗೂ ಗೀತ ಗಾಯನ ಕಾರ್ಯಕ್ರಮ ನಡೆಯಿತು.