ನ್ಯೂಸ್

ಬೆಳೆಹಾನಿಗೆ ಸರ್ಕಾರದಿಂದ ಹೆಚ್ಚುವರಿ ಹಣ

ಕೋಲಾರ: ಸಿಎಂ ಬಸವರಾಜ ಬೊಮ್ಮಾಯಿ ಬೆಳೆಹಾನಿ ಕುರಿತ ಚಾರಿತ್ರಿಕ ಮಹತ್ವಪೂರ್ಣ ನಿರ್ಣಯ ಕೈಗೊಂಡು ರೈತರ ನೆರವಿಗೆ ಧಾವಿಸುವ ಮೂಲಕ ಬಿಜೆಪಿ ಸರ್ಕಾರ ರೈತಪರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಅತಿವೃಷ್ಟಿಗೆ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದನ್ನು ಮನಗಂಡ ಸರ್ಕಾರ 969 ಕೋಟಿ ರೂಪಾಯಿ ಪರಿಹಾರ ವಿತರಿಸಲು ಮುಂದಾಗಿರುವುದು ಸರ್ಕಾರದ ಇತಿಹಾಸದಲ್ಲೇ ಐತಿಹಾಸಿಕ ನಿರ್ಧಾರವಾಗಿದೆ. ಈ ಮೂಲಕ ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ಪ್ರಾಮಾಣಿಕ ಹೆಜ್ಜೆ ಇಡಲಾಗಿದೆ ಎಂದರು.

ಒಂದು ಹೆಕ್ಟೇರ್ ಒಣ ಬೇಸಾಯ ಬೆಳೆಹಾನಿಗೆ ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯಡಿ 6800 ರೂಪಾಯಿ ಮಾತ್ರ ಇದ್ದು ಪರಿಹಾರದ ಮೊತ್ತ ಕಡಿಮೆಯಾಗಿರುವುದನ್ನು ಮನಗಂಡ ಸಿಎಂ ಈ ಮೊತ್ತಕ್ಕೆ ಅಧಿಕವಾಗಿ 6800 ರೂ. ಕೊಡಲು ನಿರ್ಧರಿಸಿದ್ದಾರೆ. ಇದರಿಂದ ಹೆಕ್ಟೇರ್‌ಗೆ 13,600 ರೂ. ಬೆಳೆ ಪರಿಹಾರ ಸಿಗಲಿದೆ ಎಂದರು.

ನೀರಾವರಿ ಪ್ರದೇಶದ 1 ಹೆಕ್ಟೇರ್ ಬೆಳೆ ಹಾನಿಗೆ 13,500 ರೂ. ನಿಗದಿಯಾಗಿದ್ದು, ಇದಕ್ಕೆ ಹೆಚ್ಚುವರಿಯಾಗಿ 11,500 ರೂ. ಸೇರಿಸಿ 25,000 ಪರಿಹಾರ ನೀಡಲು ತೀರ್ಮಾನಿಸಿದ್ದಾರೆ. ಇದರಿಂದ ಒಟ್ಟು 12.69 ಲಕ್ಷ ಹೆಕ್ಟೇರ್ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ. ತೋಟಗಾರಿಕೆ ಬೆಳೆಗಳಿಗೆ ಹೆಕ್ಟೇರ್‌ಗೆ 18,000 ರೂ. ಪರಿಹಾರ ನೀಡಲಾಗುತ್ತದೆ. ಇದಕ್ಕೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ 10,000 ರೂ. ನೀಡಲು ನಿರ್ಧರಿಸಿದೆ ಎಂದರು.

ಎಸ್‌ಡಿಆರ್‌ಎಫ್‌ನಡಿ ನೀಡುವ ಪರಿಹಾರದ ಮೊತ್ತಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಹಣ ನೀಡಲು ನಿರ್ಧರಿಸಿರುವುದರಿಂದ ಸರ್ಕಾರಕ್ಕೆ 1,200 ಕೋಟಿ ರೂ. ಆರ್ಥಿಕ ಹೊರೆ ಬೀಳಲಿದೆ ಎಂದರು.

ವಿಧೇಯಕಕ್ಕೆ ಸ್ವಾಗತ: ರಾಜ್ಯದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು ಸದನದಲ್ಲಿ ಮಂಡಿಸುವ ಮೂಲಕ ಐತಿಹಾಸಿಕ ತೀರ್ಮಾನ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಇದು ಸ್ವಾಗತಾರ್ಹ ಎಂದರು. ಕೋರ್ ಕಮಿಟಿ ಸದಸ್ಯ ವಿಜಯಕುಮಾರ್, ಬಿಜೆಪಿ ನಗರಾಧ್ಯಕ್ಷ ತಿಮ್ಮರಾಯಪ್ಪ, ಗ್ರಾಮಾಂತರ ಅಧ್ಯಕ್ಷ ಸಿ.ಡಿ. ರಾಮಚಂದ್ರ, ಮಾಧ್ಯಮ ಸಂಚಾಲಕ ಕೆಂಬೋಡಿ ನಾರಾಯಣಸ್ವಾಮಿ ಹಾಜರಿದ್ದರು.

ರೈತರ ಮಕ್ಕಳಿಗೆ ಶಿಷ್ಯವೇತನ: ರೈತರ ಮಕ್ಕಳಿಗೆ ಶಿಷ್ಯವೇತನ ನೀಡಲು ಅಧಿಕೃತ ಆದೇಶ ಹೊರಡಿಸಿ ಅನುಷ್ಠಾನಕ್ಕೆ ತಂದಿದ್ದು, ಪಿಯುಸಿ, ಐಟಿಐ ಅಥವಾ ತತ್ಸಮಾನ ತರಗತಿಯಲ್ಲಿ ಓದುತ್ತಿರುವ ಬಾಲಕರಿಗೆ 2500 ರೂ., ಬಾಲಕಿಯರಿಗೆ 3000 ರೂ., ಪದವಿ, ಎಂಬಿಬಿಎಸ್, ಇಂಜಿನಿಯರಿಂಗ್ ಹಾಗೂ ಪದವಿಗೆ ಸಮಾನವಾದ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ತಲಾ 5000 ರೂ., ವಿದ್ಯಾರ್ಥಿನಿಯರಿಗೆ 5500 ರೂ., ಕಾನೂನು ಪದವಿ, ಅರೆ ವೈದ್ಯಕೀಯ ಬಿ. ಫಾರ್ಮಾ, ನರ್ಸಿಂಗ್ ಮತ್ತಿತರ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ 7500 ರೂ., ವಿದ್ಯಾರ್ಥಿನಿಯರಿಗೆ 8000, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 10,000 ರೂ. ಹಾಗೂ ವಿದ್ಯಾರ್ಥಿನಿಯರಿಗೆ 11,000 ರೂ. ಶಿಷ್ಯವೇತನ ಸಿಗಲಿದೆ ಎಂದು ಮುನಿವೆಂಕಟಪ್ಪ ಹೇಳಿದರು.