ಚಳ್ಳಕೆರೆ: ತಾಲೂಕಿನಲ್ಲಿ ಅತಿವೃಷ್ಟಿಯಿಂದ ಶೇಂಗಾ, ತೊಗರಿ ಇತರೆ ಬೆಳೆ ನಷ್ಟ ಮಾಡಿಕೊಂಡಿರುವ ರೈತರಿಗೆ ಆಡಳಿತ ಸರ್ಕಾರಗಳು ಈ ಕೂಡಲೇ ಪರಿಹಾರ ಮತ್ತು ಬೆಳೆವಿಮೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಪದಾಧಿಕಾರಿಗಳು ಬುಧವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ರೇಹಾನ್ ಪಾಷಾ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ರೈತ ವಿರೋಧಿಯಾಗಿ ಆಡಳಿತ ಮಾಡುತ್ತಿರುವ ಸರ್ಕಾರಗಳಿಂದ ನ್ಯಾಯ ಸಿಗುತ್ತಿಲ್ಲ. ಅತಿವೃಷ್ಟಿ ಪರಿಸ್ಥಿತಿಯಲ್ಲೂ ಸ್ವಲ್ಪ ಪ್ರಮಾಣದ ರೈತರು ಬೆಳೆದಿರುವ ಶೇಂಗಾ ಬೆಳೆಗೆ ಸರಿಯಾದ ಬೆಲೆ ಸಿಗದೇ ಇರುವುದು ಬೇಸರ ತರಿಸಿದೆ ಎಂದರು.
ಒಂಬತ್ತು ಸಾವಿರಕ್ಕೆ ಶೇಂಗಾ ಖರೀದಿ ಮಾಡಿಕೊಂಡು ಬಿತ್ತನೆ ಮಾಡಲಾಗಿದೆ. ಈಗ ಕ್ವಿಂಟಲ್‌ಗೆ 4 ಸಾವಿರದಂತೆ ಖರೀದಿ ಮಾಡಲಾಗುತ್ತಿದೆ. 2023ರಲ್ಲಿ 6 ಸಾವಿರ ರೈತರಿಗೆ ಬೆಳೆ ಪರಿಹಾರದಲ್ಲಿ ಮೋಸ ಮಾಡಲಾಗಿದೆ. ರೈತ ವಿರೋಧಿಯಾಗಿರುವ ವಿದ್ಯುತ್ ಕಾಯ್ದೆ ರದ್ದುಪಡಿಸಬೇಕು ಎಂದು ತಿಳಿಸಿದರು.
ಕಳೆದ 40 ವರ್ಷಗಳಿಂದ ಅರ್ಜಿ ಹಾಕಿ ಕಾಯುತ್ತಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಮಾಡಬೇಕು. ರಾಜ್ಯಾದ್ಯಂತ ರೈತರ ಭೂಮಿ ಕಬಳಿಸುತ್ತಿರುವ ವಕ್ಫ್ ಕಾಯ್ದೆ ರದ್ದುಪಡಿಸಬೇಕು.
25 ವರ್ಷಗಳಿಂದ ಪೂರ್ಣಗೊಳ್ಳದ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಬೇಕು. ರೈತರ ಬೇಡಿಕೆಗಳು ಈಡೇರದಿದ್ದಲ್ಲಿ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಸಿ.ಶಂಕರಮೂರ್ತಿ, ಆರ್.ಬಸವರಾಜ್, ಎನ್.ಎ.ವೆಂಕಟೇಶ್, ಕೆ.ಜಯಣ್ಣ, ಮೈರಾಡ ಚಂದ್ರಣ್ಣ, ಸಣ್ಣಪಾಲಯ್ಯ, ಚನ್ನಕೇಶವಮೂರ್ತಿ, ಕೆ.ಬಿ.ಪಾಲಯ್ಯ, ಈರಣ್ಣ, ಎ.ಅಜ್ಜಪ್ಪ, ಪಿ.ಬೊಮ್ಮಯ್ಯ ಇದ್ದರು.