ನ್ಯೂಸ್

ಬೆಳಗಾವಿ ಕೀರ್ತಿ ಹೆಚ್ಚಿಸಿದ ಡಾ.ಕೋರೆ

ಬೆಳಗಾವಿ: ಕೆಎಲ್​ಇ ಸಂಸ್ಥೆ ಮೂಲಕ ಬೆಳಗಾವಿ ಕೀರ್ತಿ ಹೆಚ್ಚಿಸಿದ ಶ್ರೇಯಸ್ಸು ಡಾ.ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ ಎಂದು ಕೆಎಲ್​ಇ ಶತಮಾನೋತ್ಸವ ಚಾರಿಟಬಲ್​ ಆಸ್ಪತ್ರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ದೇಸಾಯಿ ಹೇಳಿದರು.

ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ 78ನೇ ಜನ್ಮದಿನ ಪ್ರಯುಕ್ತ ಶುಕ್ರವಾರ ಕೆಎಲ್​ಇ ಶತಮಾನೋತ್ಸವ ಚಾರಿಟಬಲ್​ ಆಸ್ಪತ್ರೆಯಲ್ಲಿ ನಡೆದ ಬೃಹತ್​ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಡಾ.ಪ್ರಭಾಕರ ಕೋರೆ ಅವರು ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದಾಗಿನಿಂದ ಇಲ್ಲಿಯವರೆಗೆ ಸಂಸ್ಥೆಯ ಕೀರ್ತಿ ಜಗತ್ತಿನಾದ್ಯಂತ ಉತ್ತುಂಗಕ್ಕೇರುತ್ತಿದೆ ಎಂದರು.

ಆಸ್ಪತ್ರೆಯ ವೈದ್ಯಕಿಯ ನಿರೀಕ್ಷಕ ಡಾ.ಆರ್​.ಜಿ.ನೆಲವಿಗಿ ಮಾತನಾಡಿ, ಡಾ.ಕೋರೆ ಅವರದ್ದು ಅಸಾಮಾನ್ಯ ವ್ಯಕ್ತಿತ್ವ. ಅವರ ದೂರದೃಷ್ಟಿ, ಮುತ್ಸದ್ಧಿತನ ಸಂಸ್ಥೆಯ ಏಳಿಗೆಗೆ ಕಾರಣವಾಗಿವೆ ಎಂದರು.

ಶಿಬಿರದಲ್ಲಿ 540 ನಾಗರಿಕರಿಗೆ ನೋಂದಣಿ ಮಾಡಿಕೊಂಡು. ಮಧುಮೇಹ, ಇಸಿಜಿ, ಎಲುಬಿನ ಸಾಂಧ್ರತೆಯ ಉಚಿತ ತಪಾಸಣೆ ಮಾಡಲಾಯಿತು. ಆಯ್ದ ಮಹಿಳಾ ರೋಗಿಗಳಿಗೆ ಗರ್ಭಾಶಯ ಕ್ಯಾನ್ಸರ್​ ತಪಾಸಣೆ ಮಾಡಲಾಯಿತು. ವಡಗಾವಿ, ಅನಗೋಳ, ಯಳ್ಳೂರ, ಸುಳಗಾ, ಬಸ್ತವಾಡ, ಬೈಲೂರ, ಗರ್ಲಗುಂಜಿ, ನಿಟ್ಟೂರ, ಬರಗಾವ, ತೋಪಿನಕಟ್ಟಿ, ಹಲಗಾ, ಸಂತಿಬಸ್ತವಾಡ, ಉಚವಡೆ ಹಾಗೂ ಸುತ್ತಮುತ್ತಲ ಹಳ್ಳಿಗಳ ಗ್ರಾಪಂ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.