ಎಚ್.ಡಿ.ಕೋಟೆ ತಾಲೂಕಿನ ತೊರವಳ್ಳಿ ಸೇತುವೆ ಮುಳುಗಡೆಯಾಗಿರುವುದು. 
ನ್ಯೂಸ್

ಬೆಳಗನಹಳ್ಳಿ-ಎಚ್.ಡಿ.ಕೋಟೆ ಸಂಪರ್ಕ ಸೇತುವೆ ಮುಳುಗಡೆ

ಎಚ್.ಡಿ.ಕೋಟೆ: ತಾಲೂಕಿನ ಹೆಬ್ಬಳ್ಳ ಜಲಾಶಯಕ್ಕೆ ಹನಗೋಡು ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಜಲಾಶಯದಿಂದ ನದಿಗೆ ನೀರು ಹರಿಸುತ್ತಿದ್ದು, ಬುಧವಾರ ಬೆಳಗನಹಳ್ಳಿಯಿಂದ ಎಚ್.ಡಿ.ಕೋಟೆಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ.


ಇದರಿಂದ ಬೆಳಗನಹಳ್ಳಿ, ಹೊಸತೊರವಳ್ಳಿ ಗ್ರಾಮಸ್ಥರು ಎಚ್.ಡಿ.ಕೋಟೆಗೆ ತೆರಳಲು ಹರಸಾಹಸಪಡುವ ಸ್ಥಿತಿ ಎದುರಾಗಿದೆ. ಪ್ರಸ್ತುತ ವರ್ಷದಲ್ಲಿ ಏಳನೇ ಬಾರಿ ಈ ಸೇತುವೆ ಮುಳುಗಡೆಯಾಗಿದೆ. ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸಲು ತೊಂದರೆ ಉಂಟಾಗುತ್ತಿದ್ದು, ಆದಷ್ಟು ಬೇಗ ಎತ್ತರವಾದ ಸೇತುವೆ ನಿರ್ಮಿಸಬೇಕು ಎಂದು ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ತಿರುಗಿ ನೋಡಿಲ್ಲ ಎಂದು ಬೆಳಗನಹಳ್ಳಿ, ತೊರವಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸೇತುವೆ ಮೇಲೆ 2ರಿಂದ 3 ಅಡಿ ನೀರು ಹರಿಯುತ್ತಿದ್ದರೂ ವಾಹನ ಸವಾರರು ಅದನ್ನು ಲೆಕ್ಕಿಸದೆ ಸಂಚರಿಸಿದರು. ಮಂಗಳವಾರ ಸಂಜೆಯೂ ಎಚ್.ಡಿ.ಕೋಟೆ ತಾಲೂಕಿನ ವಿವಿಧೆಡೆ ವರ್ಷಧಾರೆಯಾಗಿದ್ದು, ನೀರಿನ ಹರಿವು ಹೆಚ್ಚಾಗಿದೆ.


ಆರು ತಿಂಗಳಿಂದಲೂ ನದಿಗೆ ನೀರು: ಹೆಬ್ಬಳ್ಳ ಜಲಾಶಯವು ಮೇ 18ರಂದು ಭರ್ತಿ ಆಗಿತ್ತು. ಅಂದು ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದ್ದರಿಂದ ಒಮ್ಮೆಲೇ ತುಂಬಿ, ಅದೇ ದಿನ ಸೇತುವೆ ಮೇಲೆ ನೀರು ಹರಿಯಲಾರಂಭಿಸಿ ಎರಡು ದಿನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಅಂದಿನಿಂದ ಇಂದಿನವರೆಗೂ ಜಲಾಶಯದಿಂದ ನೀರು ಹರಿಯುತ್ತಲೇ ಇದೆ. ಇದೇ ಮೊದಲ ಬಾರಿಗೆ ಇಷ್ಟು ಸುದೀರ್ಘ ಅವಧಿ ನೀರು ಹರಿದಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.


ಬೀರೇಶ್ವರ ದೇವಾಲಯದ ಸೇತುವೆಯೂ ಮುಳುಗಡೆಯಾಗಿದೆ. ಈ ಸೇತುವೆಯ ಮೇಲೂ ಪ್ರಯಾಣಿಕರು ಪ್ರಾಣದ ಹಂಗು ತೊರೆದು ಸಂಚರಿಸುತ್ತಿದ್ದಾರೆ. ಎರಡು ದಿನದ ವರ್ಷಧಾರೆಗೆ ಹಲವು ರೈತರ ಜಮೀನಿಗೂ ನೀರು ನುಗ್ಗಿದ್ದು, ಬೆಳೆ ಹಾನಿಯಾಗಿದೆ.

ಎಚ್.ಡಿ.ಕೋಟೆ ತಾಲೂಕಿನ ತೊರವಳ್ಳಿ ಸೇತುವೆ ಮುಳುಗಡೆಯಾಗಿರುವುದು.