ಬೆಲೆ ಏರಿಕೆ ವಿರುದ್ಧ ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ನಾಟಕದ ಯಾತ್ರೆಯಾಗಿದ್ದು, 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ 143 ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದರು.
2014ರಲ್ಲಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡಿಸೇಲ್ ಏರಿಕೆಯಾಗಿದ್ದರೂ ಲೀಟರ್ ಪೆಟ್ರೋಲ್ 70, ಡಿಸೇಲ್ 50 ರೂ.ಗೆ ಸಿಗುತ್ತಿತ್ತು. ಗ್ಯಾಸ್ ಬೆಲೆ 450 ರೂ. ಇತ್ತು. ಇವತ್ತು ತೈಲಬೆಲೆ ಕಡಿಮೆಯಿದ್ದರೂ ಲೀಟರ್‌ಪೆಟ್ರೋಲ್ 103, ಡಿಸೇಲ್ 92 ರೂ. ತಲುಪಿದೆ ಎಂದರು. ಅಗತ್ಯ ವಸ್ತುಗಳ ಬೆಲೆಯೂ ಶೇ. 400ರಷ್ಟು ಹೆಚ್ಚಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜತೆಗೆ 2014ಕ್ಕೂ ಮೊದಲು ಮತ್ತು ಅನಂತರ ಯಾವ್ಯಾವ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂಬುದನ್ನು ಪಟ್ಟಿ ಸಮೇತ ವಿವರಿಸಿದರು.
ತೈಲ ಬೆಲೆ ಏರಿಕೆಯಿಂದ ಕೇಂದ್ರದ ಎನ್‌ಡಿಎ ಸರ್ಕಾರ ತನ್ನ ಅವಧಿಯಲ್ಲಿ ಲಕ್ಷಾಂತರ ಕೋಟಿ ಹಣವನ್ನು ಲೂಟಿ ಮಾಡಿದೆ. ರಾಜ್ಯದಲ್ಲಿ ಜನಾಕ್ರೋಶ ಯಾತ್ರೆ ಆರಂಭವಾದ ದಿನವೇ 50 ರೂ. ಗ್ಯಾಸ್ ದರ ಏರಿಕೆಯಾಗಿದೆ. ಟೋಲ್ ದರ ಏರಿಕೆ ಮಾಡಲಾಗಿದೆ ಎಂದರು.
ಬಿಜೆಪಿಯವರು ರೈತ ವಿರೋಧಿಗಳಾದ ಕಾರಣಕ್ಕೆ ಹಾಲಿನ ದರ ಏರಿಕೆಯನ್ನು ವಿರೋಧಿಸುತ್ತಿದ್ದಾರೆ. 10 ವರ್ಷಗಳ ಹಿಂದೆ ಚಿನ್ನ, ಬೆಳ್ಳಿ, ಕಬ್ಬಿಣ, ಇನ್ನೋವ ಕಾರು, ಅಡುಗೆ ಎಣ್ಣೆ ಎಷ್ಟಿತ್ತು. ಈಗ ಎಷ್ಟಾಗಿದೆ. ಲೆಕ್ಕ ಹಾಕುವಂತೆ ಒತ್ತಾಯಿಸಿದರು. ಹೆಣ ಸುಡುವುದಕ್ಕೂ ಜಿಎಸ್‌ಟಿ ಹಾಕಿದ ಕೀರ್ತಿ ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ಸಲ್ಲಬೇಕು ಎಂದು ಟೀಕಿಸಿದರು.