ನ್ಯೂಸ್

ಬೆಗ್ಲಿ ಬೆಣಜೇನಹಳ್ಳಿಯಲ್ಲಿ ಎಂಎಸ್‌ಐಎಲ್ ಮಳಿಗೆ ಮುಚ್ಚಲು ಆಗ್ರಹ/ಲೋಕಸಭಾ ಚುನಾವಣೆ ಬಹಿಷ್ಕಾರ/ಜಿಲ್ಲಾಡಳಿತಕ್ಕೆ ಗ್ರಾಮಸ್ಥರ ಎಚ್ಚರಿಕೆ

ವಿಜಯವಾಣಿ ಸುದ್ದಿಜಾಲ ಕೋಲಾರ
ತಾಲ್ಲೂಕಿನ ಬೆಗ್ಲಿ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಗ್ಲಿ ಬೆಣಜೇನಹಳ್ಳಿಯಲ್ಲಿ ಸ್ಥಾಪಿಸಿರುವ ಎಂಎಸ್‌ಐಎಲ್‌ನ ಮದ್ಯ ಮಾರಾಟ ಮಳಿಗೆಯನ್ನು ಗ್ರಾಮದ ಸರಹದ್ದಿನಿಂದ ಸ್ಥಳಾಂತರಿಸದಿದ್ದಲ್ಲಿ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಗ್ರಾಮದ ಗೌರಮ್ಮ ಕೋಂ ರಾಮಕೃಷ್ಣಪ್ಪ ಎಂಬುವವರ ಜಮೀನಿಯಲ್ಲಿ ಆಗಿರುವ ಎಂಎಸ್‌ಐಎಲ್ ಮಳಿಗೆ ಮುಚ್ಚಲು ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಗ್ರಾಮದ ಪರಿಸರ ಹಾಳಾಗಲಿದೆ, ಕೂಲಿ ಮಾಡಿ ಬಂದ ಹಣ ಮದ್ಯ ಸೇವನೆಗೆ ಬಳಸುವುದರಿಂದ ಆರ್ಥಿಕ ಹಿನ್ನಡೆ ಜತೆಗೆ ಕುಟುಂಬಗಳಲ್ಲಿ ವಿವಾದಗಳಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.

ಗ್ರಾಮದಲ್ಲಿ ಕಳೆದ ೨೦೨೧ ರಿಂದಲೂ ಗ್ರಾಮಸ್ಥರು ಎಂಎಸ್‌ಐಎಲ್ ಘಟಕ ಸ್ಥಾಪಿಸಲು ವಿರೋಧ ವ್ಯಕ್ತಪಡಿಸುತ್ತ ಬಂದಿದ್ದೇವೆ, ಈ ಸಂಬAಧ ಹಲವಾರು ಹೋರಾಟಗಳನ್ನು ಮಾಡಿದ್ದೇವೆ, ಧರಣಿ ನಡೆಸಿದ್ದೇವೆ, ಅಧಿಕಾರಿಗಳಿಗೆ ಘಟಕ ತೆರವುಗೊಳಿಸಲು ಆಗ್ರಹಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಗ್ರಾಮಸ್ಥರು ಹಲವಾರು ಬಾರಿ ತಕರಾರು ಅರ್ಜಿ ನೀಡಿದ್ದರೂ ರಾಜಕೀಯ ಒತ್ತಡಕ್ಕೆ ಬಲಿಯಾಗಿ ಇಲ್ಲಿ ಘಟಕ ತೆರೆದಿದ್ದು, ಇದರಿಂದ ಗ್ರಾಮದಲ್ಲಿ ಸೌಹಾರ್ದತೆಗೆ ಧಕ್ಕೆಯಾಗುತ್ತಿದೆ, ರಸ್ತೆ ಬದಿಯಲ್ಲೇ ಈ ಘಟಕ ಇರುವುದರಿಂದ ರಸ್ತೆಯಲ್ಲಿ ಓಡಾಡುವ ಮಹಿಳೆಯರು, ಮಕ್ಕಳು ಕುಡುಕರಿಂದ ತೊಂದರೆ ಅನುಭವಿಸಬೇಕಾಗಿದೆ ಎಂದು ತಿಳಿಸಿದರು.

ಈ ಭಾಗದಲ್ಲಿ ನಿತ್ಯ ಓಡಾಡುವ ಶಾಲಾ ಮಕ್ಕಳು ಭಯದ ವಾತಾವರಣದಲ್ಲಿ ಸಾಗಬೇಕಾಗಿದೆ, ಮದ್ಯವ್ಯಸನಿಗಳ ಕುಟುಂಬಗಳು ಬೀದಿಗೆ ಬೀಳುವ ಆತಂಕವಿದೆ ನಮ್ಮ ನಿರಂತರ ಹೋರಾಟದ ಫಲವಾಗಿ ಕಳೆದ ೨೦೨೩ ರಲ್ಲಿ ಮಳಿಗೆ ಮುಚ್ಚಲಾಗಿತ್ತು ಆದರೆ ಇದೀಗ ವಿಧಾನಸಭಾ ಚುನಾವಣೆಯ ನಂತರ ರಾಜಕೀಯ, ಹಣದ ಬಲ ತೋರಿಸಿ ಮತ್ತೆ ಆರಂಭಿಸಿ ರಾಜಾರೋಷವಾಗಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ದೂರಿದರು.

ಈ ಹಿಂದೆ ಅಬಕಾರಿ ಜಿಲ್ಲಾಧಿಕಾರಿಗಳಿಗೆ ಮಳಿಗೆ ತೆರವಿಗೆ ಮನವಿ ಸಲ್ಲಿಸಿದ್ದು ಅದಕ್ಕೆ ಅವರು ಒಪ್ಪಿಗೆ ನೀಡಿದ್ದರು ಆದರೆ ಇದೀಗ ಸದರಿ ಅಧಿಕಾರಿ ವರ್ಗಾವಣೆಯಾಗಿರುವುದರಿಂದ ಬೇರೊಬ್ಬ ಅಧಿಕಾರಿ ತೆರವಿಗೆ ಸ್ಪಂದಿಸಿಲ್ಲ ಎಂದು ಕಿಡಿಕಾರಿದರು.

ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಂಡು ಮಳಿಗೆ ರದ್ದುಗೊಳಿಸದಿದ್ದರೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿ.ಎಂ.ಮುನಿಯಪ್ಪ, ಎಂ.ಆರ್.ಚAದ್ರೇಗೌಡ, ಅವಿನಾಶ್, ವೆಂಕಟೇಶ್, ಗೋವಿಂದಪ್ಪ, ಗ್ರಾ.ಪಂ ಸದಸ್ಯ ಮಂಜುನಾಥ್, ಮುಖಂಡ ಸೋಮಶೇಖರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಚಿತ್ರ ೨೨ ಕೆ.ಎಲ್.ಆರ್. ೦೯ : ಕೋಲಾರ ತಾಲ್ಲೂಕಿನ ಬೆಗ್ಲಿ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಗ್ಲಿ ಬೆಣಜೇನಹಳ್ಳಿಯಲ್ಲಿ ಸ್ಥಾಪಿಸಿರುವ ಎಂಎಸ್‌ಐಎಲ್‌ನ ಮದ್ಯ ಮಾರಾಟ ಮಳಿಗೆಯನ್ನು ಗ್ರಾಮದ ಸರಹದ್ದಿನಿಂದ ಸ್ಥಳಾಂತರಿಸದಿದ್ದಲ್ಲಿ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.