ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಮಹಿಳಾ ಸರ್ಕಾರಿ ಕಾಲೇಜಿನ ಸ್ಪರ್ಧಿಗಳು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ೫ನೇ ವಾರ್ಷಿಕ ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟದ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆದರು.
ನಗರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶನಾಲಯ ಆಶ್ರಯದಲ್ಲಿ ಕೊನೆಗೊಂಡ ಅಥ್ಲೆಟಿಕ್ಸ್ನಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಈ ಸಾಧನೆ ಮಾಡಿದರು. ಎರಡನೇ ಸ್ಥಾನ ಬಂಗಾರಪೇಟೆ ಸರ್ಕಾರಿ ಕಾಲೇಜಿನ ಮಹಿಳೆಯರ ಪಾಲಾಯಿತು.
ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ರೋಹನ್ ವೆಂಕಟೇಶ್ ಕತ್ವ ಪುರುಷರ ವಿಭಾಗದ ೧೦೦ ಮೀಟರ್ ಓಟದಲ್ಲಿ ಕೂಟ ದಾಖಲೆಯೊಂದಿಗೆ ಮೊದಲ ಸ್ಥಾನ ಪಡೆದರು. ಅವರು ೧೦.೭೮ ಸೆಕೆಂಡ್ಗಳಲ್ಲಿ ಗುರು ಮುಟ್ಟಿ ವೇಗದ ಓಟಗಾರ ಎನಿಸಿಕೊಂಡರು.
೪೦೦ ಮೀಟರ್ ಓಟದಲ್ಲಿ ದೊಡ್ಡಬಳ್ಳಾಪುರದ ಸರ್ಕಾರಿ ಕಾಲೇಜಿನ ಸೈಯದ್ ಇರ್ಫಾನ್ ಕೂಟ ದಾಖಲೆ ನಿರ್ಮಿಸಿದರು. ಅವರು ೫೧ ಸೆಕೆಂಡ್ಗಳಲ್ಲಿ ಗುರಿ ಮುಟ್ಟಿ ಈ ಸಾಧನೆ ಮಾಡಿದರು. ೪೦೦ ಮೀಟರ್ ಹರ್ಡಲ್ಸ್ನಲ್ಲಿ ದೊಡ್ಡಬಳ್ಳಾಪುರದ ಸರ್ಕಾರಿ ಕಾಲೇಜಿನ ಅಕ್ಷಯ್ ೫೮.೮೦ ಸೆಕೆಂಡ್ನಲ್ಲಿ ಗುರಿ ತಲುಪಿ ಕೂಟ ದಾಖಲೆ ನಿರ್ಮಿಸಿದರು. ೪*೧೦೦ ಮೀ ಹಾಗೂ ೪*೪೦೦ ಮೀ ರಿಲೇಯಲ್ಲೂ ದೊಡ್ಡಬಳ್ಳಾಪುರ ಸರ್ಕಾರಿ ಕಾಲೇಜು ತಂಡದವರು ಕೂಟ ದಾಖಲೆಯೊಂದಿಗೆ ಮೊದಲ ಸ್ಥಾನ ಪಡೆದರು.
ಎರಡು ದಿನಗಳ ಕ್ರೀಡಾಕೂಟ ದಲ್ಲಿ ಉತ್ತರ ವಿವಿ ವ್ಯಾಪ್ತಿಯ ಸುಮಾರು ೮೮ ಕಾಲೇಜುಗಳಿಂದ ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು.
ಭುವನೇಶ್ವರದಲ್ಲಿ ನಡೆಯುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಬೆಂಗಳೂರು ಉತ್ತರ ವಿವಿ ತಂಡದ ಆಯ್ಕೆಯೂ ಇದೇ ಕ್ರೀಡಾಕೂಟದಲ್ಲಿ ನಡೆಯಿತು.
ಕ್ರೀಡಾಕೂಟದ ಸಮಾರೋಪದಲ್ಲಿ ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ.ಕುಮುದಾ ಡಿ., ಸಿಂಡಿಕೇಟ್ ಸದಸ್ಯರು, ಬಂಗಾರಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಬಿ.ಪಿ.ಸತೀಶ್ ಪಾಲ್ಗೊಂಡಿದ್ದರು.
ದೂಡ್ಡಬಳ್ಳಾಪುರ ಕಾಲೇಜು ಮೇಲುಗೈ:
ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ದೊಡ್ಡಬಳ್ಳಾಪುರ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಚಾಂಪಿಯನ್ಸ್ ಆದರು. ಎರಡನೇ ಸ್ಥಾನವನ್ನು ಮಾರತ್ತಹಳ್ಳಿಯ ನ್ಯೂ ಹೊರೈಜಾನ್ ತಂಡ ಪಡೆಯಿತು.
ಪುರುಷರ ವೈಯಕ್ತಿಕ ವಿಭಾಗದಲ್ಲಿ ದೊಡ್ಡಬಳ್ಳಾಪುರ ಸರ್ಕಾರಿ ಕಾಲೇಜಿನ ರೋಹನ್ ವೆಂಕಟೇಶ್ ಕತ್ವ ಅತ್ಯುತ್ತಮ ಅಥ್ಲೀಟ್ ಎನಿಸಿದರು.
ಮಹಿಳೆಯರ ವಿಭಾಗದಲ್ಲಿ ಕೋಲಾರದ ಮಹಿಳಾ ಸರ್ಕಾರಿ ಕಾಲೇಜಿನ ತನುಶ್ರೀ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿ ಪಡೆದರು. ಅವರು ೧೦೦ ಮೀ., ಹಾಫ್ ಮ್ಯಾರಥಾನ್ನಲ್ಲಿ ಮೊದಲ ಸ್ಥಾನ ಪಡೆದರು.
ಚಿತ್ರ ೦೧ ಕೆ.ಎಲ್.ಆರ್. ೦೧ ಕೋಲಾರ ಮಹಿಳಾ ಸರ್ಕಾರಿ ಕಾಲೇಜಿನ ಸ್ಪರ್ಧಿಗಳು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ೫ನೇ ವಾರ್ಷಿಕ ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟದ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಪಾರಿತೋಷಕ ಪಡೆದುಕೋಂಡರು.