ನ್ಯೂಸ್

ಬೆಂಗಳೂರಿನ ಚರಂಡಿ ನೀರಿನಿಂದ ಕ್ಯಾನ್ಸರ್​

ಶ್ರೀನಿವಾಸಪುರ: ಕೋಲಾರ ಜಿಲ್ಲೆಗೆ ಎತ್ತಿನಹೊಳೆ ಯೋಜನೆ ತರುತ್ತೇನೆ ಎಂದು ಇಲ್ಲಿಯವನೇ ಒಬ್ಬ ಮಹಾನುಭವ ಎತ್ತಿನಹೊಳೆ ನೀರಿನ ಬದಲಾಗಿ ಬೆಂಗಳೂರಿನ ಚರಂಡಿ ನೀರನ್ನು ತಂದು ನಿಮ್ಮನ್ನು ಕ್ಯಾನ್ಸರ್​ ಪೀಡಿತರನ್ನಾಗಿ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ರಮೇಶ್​ ಕುಮಾರ್​ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಜೆಡಿಎಸ್​ ಪಂಚರತ್ನ ಯಾತ್ರೆಯ ಐದನೇ ದಿನವಾದ ಮಂಗಳವಾರ ಶ್ರೀನಿವಾಸಪುರ ತಾಲೂಕಿಗೆ ಆಗಮಿಸಿದಾಗ ತಾಲೂಕಿನ ವಳಗೇರನಹಳ್ಳಿಯಲ್ಲಿ ಮಾತನಾಡಿ, ಬಿಪಿಎಲ್​ ಕಾರ್ಡ್​ ಹೊಂದಿರುವ ಕುಟುಂಬಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಕೆಲಸ ಮಾಡಲಾಗುವುದು ಎಂದರು.
ಕ್ಯಾಲನೂರಿನಿಂದ ಬರುವಾಗ ಭಂಗವಾದಿ ಗ್ರಾಮದಲ್ಲಿ 70 ಮಕ್ಕಳು ಶಾಲೆ ಬೇಕು ಎಂದು ಮನವಿ ಮಾಡಿದರು. ಶಾಲೆಗೆ ಹೋಗಿ ನೋಡಿದಾಗ 2 ವರ್ಷಗಳಿಂದ ಮರದ ಕೆಳಗೆ ಪಾಠ ಮಾಡುತ್ತಿದ್ದಾರೆ. ಶಾಲೆಯ ಕಟ್ಟಡ ಬೀಳುತ್ತಿದೆ. ಇದು ಈ ಭಾಗದ ಶಾಸಕರು ಮಾಡುವ ಕೆಲಸವಾ?. ಒಂದು ಶಾಲೆಯ ಸಮಸ್ಯೆ ಬಗೆಹರಿಸದೇ ಇರುವವರು ನಿಮ್ಮ ಸಮಸ್ಯೆ ಮತ್ತು ಕಷ್ಟ&ಸುಖವನ್ನು ನೋಡಲು ಅವರಿಂದ ಸಾಧ್ಯವೇ ಎಂದು ಟೀಕಿಸಿದರು.
ವಿಮೆ ಹಣ ಕೇಳಲು ಜಿಲ್ಲಾಧಿಕಾರಿ ಬಳಿ ಹೋದ ರೈತರಿಗೆ ಹೆಲ್ಮೆಟ್​ ಹಾಕಿಕೊಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿಗಳ ಕಡೆಯವರು ಬೆದರಿಕೆ ಹಾಕುತ್ತಾರೆ. ಇದು ಈ ಸರ್ಕಾರ ಮಾಡುವ ಕೆಲಸವಾಗಿದೆ. ನಾನು ಸವಾಲಾಗಿ ಸ್ವೀಕಾರ ಮಾಡಿ ಹೇಳುತ್ತಿದ್ದೇನೆ, ರೈತ ಕುಟುಂಬ ಸ್ವಾಭಿಮಾನಿಗಳಾಗಿ ಬದುಕಿ ಆರ್ಥಿಕ ಶಕ್ತಿ ಕೊಡುವ ಕೆಲಸ ನನ್ನ ಜೀವನದ ಹೋರಾಟವಾಗಿದೆ ಎಂದರು.
ಜೆಡಿಎಸ್​ಗೆ ಅವಕಾಶ ಮಾಡಿಕೊಡಿ:
ಒಂದು ಬಾರಿ ರಾಜ್ಯದಲ್ಲಿ ಜೆಡಿಎಸ್​ಗೆ ಅವಕಾಶ ಮಾಡಿಕೊಡಿ. ೇತ್ರದ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಅವರಿಗೆ ಜನತೆಯ ಆಶೀರ್ವಾದ ಇರಲಿ. ವೆಂಕಟಶಿವಾರೆಡ್ಡಿ ಕ್ರಿಮಿನಲ್​ ಅಲ್ಲ, ಮೋಸಗಾರನೂ ಅಲ್ಲ, ನೇರವಾದಿ. ಈ ೇತ್ರದಿಂದ ಆಯ್ಕೆ ಮಾಡಿದರೆ ಮುಂದಿನ ಜೆಡಿಎಸ್​ ಸರ್ಕಾರದಲ್ಲಿ ಮಂತ್ರಿ ಮಾಡುವ ಕೆಲಸ ನನ್ನದು ಎಂದರು.
ಜೆಡಿಎಸ್​ ಯುವ ಮುಖಂಡ ನಿಖಿಲ್​ ಕುಮಾರಸ್ವಾಮಿ, ಎಂಎಲ್​ಸಿ ಇಂಚರ ಗೋವಿಂದರಾಜು, ಮಾಜಿ ಎಂಎಲ್​ಸಿ ಆರ್​.ಚೌಡರೆಡ್ಡಿ, ಮುಖಂಡರಾದ ರಾಮಚಂದ್ರೇಗೌಡ, ಶ್ರೀನಿವಾಸ್​, ಗಣೇಶ್​, ಜಿಪಂ ಮಾಜಿ ಸದಸ್ಯ ಶ್ರೀನಿವಾಸ್​ ಇದ್ದರು.

ಜನತೆಗೆ ಕೊಟ್ಟ ಕೊಡುಗೆ
ಬೆಂಗಳೂರಿನ ಚರಂಡಿ ನೀರಿನಿಂದ ಈ ಭಾಗದಲ್ಲಿ ರೇಷ್ಮೆ ಬೆಳೆಯುವುದನ್ನು ನಿಲ್ಲಿಸಿದ್ದಾರೆ. ನೀವು ಬೆಳೆಯುವ ತರಕಾರಿಗಳಿಗೆ ಬೆಂಗಳೂರಿನಲ್ಲಿ ಬೆಲೆ ಇಲ್ಲದಂತಾಗಿದೆ. ಕೋಲಾರದ ಟೊಮ್ಯಾಟೊಗೆ ಮಾರುಕಟ್ಟೆಯಲ್ಲಿ 500 ರೂ ಇದ್ದರೆ 200ರೂ.ಗಳಿಗೆ ಕೇಳುವಂತಾಗಿದೆ. ಇದು ಇವರು ಜನತೆಗೆ ಕೊಟ್ಟ ಕೊಡುಗೆಯಾಗಿದೆ ಎಂದು ಶಾಸಕ ರಮೇಶ್​ ಕುಮಾರ್​ ವಿರುದ್ಧ ಟೀಕೆ ಮಾಡಿದರು.

24 ಗಂಟೆಗಳಲ್ಲಿ ಸಾಲ ಮನ್ನಾ

ಕಳೆದ ಬಾರಿ ಡಿಸಿಸಿ ಬ್ಯಾಂಕ್​ ಮಹಿಳೆಯರಿಗೆ ನೀಡಿದ ಸಾಲದಿಂದ ಕೋಲಾರ ಜಿಲ್ಲೆಯಲ್ಲಿ 3 ಶಾಸಕರು ಗೆಲ್ಲುವಂತಾಗಿದೆ. ಈ ಬಾರಿ ಅವರು ನೀಡಿದ ಸಾಲವನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ಮನ್ನಾ ಮಾಡಲಾಗುವುದು. ಸಾಲ ನೀಡಿ ಮತ ಹಾಕಿಸಿಕೊಂಡು ಗೆದ್ದರೂ ಈ ಬಾರಿ ಸಾಲಮನ್ನಾ ಮಾಡುವುದಾಗಿ ಹೇಳುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ, ಅವರಿಗೆ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇಲ್ಲ. ಬಡಜನರ ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ಹಾಗೂ ರಾಷ್ಟ್ರೀಯ ಪಕ್ಷಗಳ ದುರಾಡಳಿತ ಕೊನೆಗಾಣಿಸಲು ಮತ್ತೆ ಮುಖ್ಯಮಂತ್ರಿಯಾಗಬೇಕಿದೆ.
ಜಿ.ಕೆ.ವೆಂಕಟಶಿವಾರೆಡ್ಡಿ, ಮಾಜಿ ಶಾಸಕ

ಕನ್ನಡಿಗರ ಹಿತ ಕಾಯುವ ಸರ್ಕಾರ ರಚನೆ ಸಂಕಲ್ಪ
ಪಂಚರತ್ನ ರಥಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅಭಿಮತ

ಕೋಲಾರ: ಕನ್ನಡಿಗರ ಹಿತರಕ್ಷಿಸುವ ಜನತಾ ಸರ್ಕಾರ ಅಸ್ತಿತ್ವಕ್ಕೆ ಬರಬೇಕೆಂಬ ಆಶಯ ಮತ್ತು ಸಂಕಲ್ಪದೊಂದಿಗೆ ಪಂಚರತ್ನ ರಥಯಾತ್ರೆ ನಡೆಸುತ್ತಿರುವುದಾಗಿ ಜೆಡಿಎಸ್​ ನಾಯಕ ಎಚ್​.ಡಿ.ಕುಮಾರಸ್ವಾಮಿ ತಿಳಿಸಿದರು.

ಕೋಲಾರ ಕ್ಷೇತ್ರದ ರಥಯಾತ್ರೆ ವೇಳೆ ಲಕ್ಷಕ್ಕೂ ಅಧಿಕ ಜನರನ್ನು ಭೇಟಿ ಮಾಡಿದ್ದೇನೆ. ರಾತ್ರಿ 1ಗಂಟೆವರೆಗೆ ಜನ ಅಭಿಮಾನ ತೋರಿ ಕಾದು ನಿಂತಿದ್ದರು. ಜೆಡಿಎಸ್​ ಸರ್ಕಾರ ರಚನೆ ಆಗಬೇಕೆಂಬುದು ಪ್ರತಿಯೊಬ್ಬರ ಭಾವನೆಯಾಗಿದೆ. ಜಿಲ್ಲೆಯ ಜನರ ಉತ್ಸಾಹ ನೋಡಿದರೆ ಈ ಭಾಗದಲ್ಲಿ ರಾಷ್ಟ್ರೀಯ ಪಕ್ಷದವರು ನಡೆದುಕೊಂಡಿರುವ ರೀತಿ ಮತ್ತು ಇಲ್ಲಿ ನಡೆದಿರುವ ಕೆಲ ಘಟನೆಗಳು ಕಾರಣವಿರಬಹುದು ಎನಿಸುತ್ತಿದೆ ಎಂದರು.
ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳ 11 ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದೆ.

ನಾನು ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ಸೋಮವಾರ ಕೋಲಾರದಲ್ಲಿ ವಿದ್ಯಾರ್ಥಿನಿಯರು ಆಶಯ ವ್ಯಕ್ತಪಡಿಸಿದರು. ಮಂಗಳಾರತಿ ತಟ್ಟೆಗೆ ಹಣ ಹಾಕಿದರೂ ತೆಗೆದುಕೊಳ್ಳಲಿಲ್ಲ. ಉತ್ತಮ ಶಾಲೆ, ಶಿಕ್ಷಣ ಬೇಕೆಂದು ಕೋರಿದರು. ಯಾತ್ರೆ ಸಂದರ್ಭದಲ್ಲಿ ಆಕಸ್ಮಿಕವಾಗಿ ನಡೆದ ಇಂತಹ ಅದೆಷ್ಟೋ ಘಟನೆಗಳು ಉತ್ತಮ ಸರ್ಕಾರ ಕೊಡಬೇಕೆಂಬ ನನ್ನ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದರು.
ಡಿ.7ರಂದು ಕೆಜಿಎಫ್​ ಕ್ಷೇತ್ರದಲ್ಲಿ ಸಮಾವೇಶ ಆಯೋಜಿಸಲಾಗಿದೆ. ಆ ಕ್ಷೇತ್ರದ ರಮೇಶ್​ ಬಾಬು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಜೆಡಿಎಸ್​ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಕೋಲಾರ ಅಭ್ಯರ್ಥಿ ಸಿಎಂಆರ್​ ಶ್ರೀನಾಥ್​ ಇತರರು ಇದ್ದರು.

ಮುಸ್ಲಿಂ ಸಿಎಂ, ದಲಿತ, ಮಹಿಳೆಗೆ ಡಿಸಿಎಂ
ಕೋಲಾರ: ಜೆಡಿಎಸ್​ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಮುಖ್ಯಮಂತ್ರಿ ಪಟ್ಟ ನೀಡುವ ಮುಕ್ತ ಅವಕಾಶ ಪಕ್ಷದಲ್ಲಿದೆ ಎಂದು ಎಚ್​.ಡಿ.ಕುಮಾರಸ್ವಾಮಿ ಹೇಳಿದರು.

ಕ್ಯಾಲನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ದೆಹಲಿಗೆ ಹೋದರೆ ತಾವೇ ಮುಖ್ಯಮಂತ್ರಿ ಆಗಬಹುದೆಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಈ ರೀತಿ ಚರ್ಚೆ ಮಾಡಲು ಅವಕಾಶ ಇರುವುದು ನಮ್ಮ ಪಕ್ಷದಲ್ಲಿ ಮಾತ್ರ ಎಂದರು.
ಮುಸ್ಲಿಮರೂ ನಮ್ಮವರೇ. ಅವರೂ ಕರ್ನಾಟಕದ ಪ್ರಜೆಗಳು, ಕನ್ನಡಿಗರು. ಹೀಗಾಗಿ, ಅವರನ್ನು ಮುಖ್ಯಮಂತ್ರಿ ಮಾಡಬಾರದು ಎಂದೇನೂ ಇಲ್ಲ. ಒಬ್ಬ ವ್ಯಕ್ತಿಗೆ ಅವಕಾಶ ನೀಡುವ ಪ್ರಶ್ನೆ ಇದಲ್ಲ. ನನಗೆ ಆ ಸಮುದಾಯಗಳ ಸಮಸ್ಯೆಗೆ ಪರಿಹಾರ ಬೇಕು ಎಂದರು.

ದಲಿತರು, ಮಹಿಳೆಯರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಸಿದ್ಧನಿದ್ದೇನೆ. ಇದು ಸ್ವಯಂಪ್ರೇರಣೆಯಿಂದ ಮಾಡಿದ ಘೋಷಣೆ ಅಲ್ಲ. ಪಂಚರತ್ನ ಯಾತ್ರೆ ಸಂದರ್ಭದಲ್ಲಿ ದಲಿತ ಯುವಕನೊಬ್ಬ ಎದುರಿಸಿದ ಸಮಸ್ಯೆ ಹೇಳಿಕೊಂಡ. ಎಲ್ಲ ಪಕ್ಷಗಳು ದಲಿತರನ್ನು ಅಸಡ್ಡೆಯಿಂದ ನೋಡುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದ. ದಲಿತರ ಮತ ಪಡೆಯಲು ಈ ಘೋಷಣೆ ಮಾಡಿಲ್ಲ. ಹಾಗೆಯೇ ಮಹಿಳೆಯರ ಕಷ್ಟಗಳನ್ನು ಯಾವುದೇ ಸರ್ಕಾರ ಆಲಿಸುತ್ತಿಲ್ಲ. ಮಹಿಳೆಯರ ರಕ್ಷಣೆಗಾಗಿ ಉಪಮುಖ್ಯಮಂತ್ರಿ ಅವಶ್ಯ ಎಂದಾದರೆ ಅದಕ್ಕೂ ಸಿದ್ಧ ಎಂದು ಹೇಳಿದರು.

6 ತಿಂಗಳ ಹಿಂದೆಯೇ ಅಭ್ಯರ್ಥಿ ಅಂತಿಮ

ಕೋಲಾರ ತಾಲೂಕಿನ ಕ್ಯಾಲನೂರಿನಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ಸಭೆಯಲ್ಲಿ ಮುಖಂಡರು ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಅವರನ್ನು ಸನ್ಮಾನಿಸಿದರು.


ಕ್ಯಾಲನೂರು: ಕೋಲಾರಕ್ಕೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಯಾರೇ ಬಂದರೂ ಜೆಡಿಎಸ್​ನಿಂದ ಸಿಎಂಆರ್​ ಶ್ರೀನಾಥ್​ ಅವರನ್ನು 6 ತಿಂಗಳ ಹಿಂದೆಯೇ ಅಂತಿಮಗೊಳಿಸಲಾಗಿದೆ ಎಂದು ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಹೇಳಿದರು.
ಕ್ಯಾಲನೂರಿನಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್​ನ ಡಾ.ಪರಮೇಶ್ವರ ಮತ್ತು ಈಗಿನ ಬಿಜೆಪಿಯ ಕಾರಜೋಳ ಅವರ ಹೆಸರು ಡಿಸಿಎಂ ಸ್ಥಾನದಲ್ಲಿದ್ದರೂ ಯಾವುದೇ ನಿರ್ಧಾರ ಕೈಗೊಳ್ಳದಂತೆ ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡುತ್ತಾರೆ. ಆದರೆ ನಮ್ಮ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳು ಹೆಬ್ಬೆಟ್ಟು ಗಿರಾಕಿ ಆಗಿರುವುದಿಲ್ಲ ಎಂದರು. ಮಧ್ಯರಾತ್ರಿ 12.30ರವೆರೆಗೂ ಮಾಜಿ ಸಿಎಂ ಬರುವಿಕೆಗೆ 7ಸಾವಿರ ಜನ ಕಾದಿದ್ದರು.
ಕೋಲಾರ ಅಭ್ಯರ್ಥಿ ಸಿಎಂಆರ್​ ಶ್ರೀನಾಥ್​, ಜಿಡಿಎಸ್​ ತಾಲೂಕು ಅಧ್ಯ ಕುರ್ಕಿ, ರಾಜೇಶ್ವರಿ, ವಕಲೇರಿ ರಾಮಣ್ಣ, ಜಿಮರ್​ ಅಹಮದ್​ ಉಪಾಧ್ಯ ಸುರೇಶ್​, ಮುಖಂಡರಾದ ಲೋಕೇಶ್​ ಮರಿಯಪ್ಪ, ಗೋಜೆಗೌಡ, ರಮೇಶ ಗೌಡ, ತೋಪಲಿ ಚೌಡರಡ್ಡಿ, ಲೇಔಟ್​ ಹರೇಶ ಗೌಡ, ಕಡಗೋಟ್ಟರು ವಿಜಯಕುಮಾರ್​, ನೂರು, ಸೀರಜ್​, ಲೋಕೇಶ್​, ನವೀನ್​, ಹರೇಶ್​, ಪ್ರಕಾಶ್​, ನಾಗೇಶ್​, ರಾಮಂಜನೇಯಪ್ಪ, ಜಾನ್​, ಜಾವಿದ್​ ಇತರರಿದ್ದರು.

ಮಾಲೂರು ತಾಲೂಕಿನ ಶಿವಾರಪಟ್ಟಣದಲ್ಲಿ ಸೋಮವಾರ ಬೆಳಗ್ಗೆ ಗ್ರಾಮವಾಸ್ತವ್ಯ ಹೂಡಿದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ವಿಜಯವಾಣಿ ದಿನಪತ್ರಿಕೆ ಓದಿದರು.