ನ್ಯೂಸ್

ಬೆಂ.ವಿವಿ ಕುಲಪತಿ, ಕುಲಸಚಿವರ ಕಿತ್ತಾಟ

  • ರಾಜಭವನಕ್ಕೆ ದೂರು ಸಲ್ಲಿಸಿದ ಕುಲಸಚಿವೆ ಕೆ.ಜ್ಯೋತಿ
  • ನಿರ್ಣಯ ತೆಗೆದುಕೊಳ್ಳಲು ಬಿಡುವುದಿಲ್ಲವೆಂಬ ದೂರು
    ವಿಜಯವಾಣಿ ಸುದ್ದಿಜಾಲ ಬೆಂಗಳೂರು
    ಇಷ್ಟು ದಿನ ಶೀತಲ ಸಮರದಂತೆ ನಡೆಯುತ್ತಿದ್ದ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಮತ್ತು ಕುಲಸಚಿವರ ಕಿತ್ತಾಟ ಇದೀಗ ಬಹಿರಂಗಗೊಂಡಿದೆ.
    ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಅವರು ನನಗೆ ಸಂವಿಧಾನ ಬದ್ಧವಾಗಿ ಕೆಲಸ ಮಾಡಲು ಬಿಡದೆ, ಕೇವಲ ತಾವು ಹೇಳಿದ್ದನ್ನು ಮಾತ್ರ ಪಾಲಿಸಬೇಕೆಂದು ಹೇಳಿ ನನ್ನ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸುವಂತೆ ಆರೋಪಿಸಿ ಬೆಂ.ವಿವಿ ಕುಲಸಚಿವೆ ಕೆ.ಜ್ಯೋತಿ(ಐಎಎಸ್) ಅವರು ರಾಜಭವನ, ಸಿಎಂ, ಪೊಲೀಸ್ ಇನ್ಸ್‌ಪೆಕ್ಟರ್‌ತಗೆ ಪತ್ರ ಬರೆದಿದ್ದಾರೆ.
    ದೂರಿನ ಪತ್ರದಲ್ಲೇನಿದೆ?: ಕುಲಪತಿ ಅವರ ನಡವಳಿಕೆಯಿಂದ ನನ್ನ ಮತ್ತು ನನ್ನ ಕುಟುಂಬಕ್ಕೆ ಬೆದರಿಕೆಯೊಡ್ಡುವ ಪ್ರಯತ್ನಗಳು ನಡೆದಿವೆ. ವಿಶ್ವವಿದ್ಯಾಲಯ ಅಧಿನಿಯಮ ಮತ್ತು ಪರಿನಿಯಮಾವಳಿಯನ್ವಯ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸದಂತೆ ಕುಲಪತಿ ಅವರಿಗೆ ಕಠಿಣ ಸೂಚನೆ ನೀಡುವಂತೆ ಕೋರಿದ್ದಾರೆ. ಅಲ್ಲದೆ, ಈ ಪತ್ರದ ಪ್ರತಿಯನ್ನು ಕುಲಾಧಿಪತಿಗಳಾದ ರಾಜ್ಯಪಾಲರು, ಮುಖ್ಯಮಂತ್ರಿ, ಮುಖ್ಯಕಾರ್ಯದರ್ಶಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರಿಗೂ ಸಲ್ಲಿಸಿದ್ದಾರೆ. ಅಲ್ಲದೆ, ಜ್ಞಾನಭಾರತಿ ಪೊಲೀಸ್ ಠಾಣೆಗೂ ದೂರಿನ ಪ್ರತಿ ನೀಡಿ ಕುಲಪತಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
    ಕುಲಪತಿ ಅವರು ವಿಶ್ವವಿದ್ಯಾಲಯದ ಅಧಿನಿಯಮಗಳ ವಿರುದ್ಧವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ವಿವಿಯ ಆಡಳಿತದಲ್ಲಿ ಕುಲಸಚಿವರಿಗೆ ಅಧಿಕಾರವಿಲ್ಲ, ಕೇವಲ ಕುಲಪತಿ ಆದೇಶ ಪಾಲಿಸಬೇಕೆಂದು ಹೇಳುವ ಮೂಲಕ ಕುಲಸಚಿವರ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದಾರೆ. ಸಿಬ್ಬಂದಿಗಳ ಕರ್ತವ್ಯ ಲೋಪಗಳಿಗೆ ನೀಡುವ ನೋಟಿಸ್‌ಗಳನ್ನು ವಾಪಸ್ ಪಡೆದು ಕುಲಸಚಿವ ಹುದ್ದೆಯ ಘನತೆಗೆ ಧಕ್ಕೆ ತರುತ್ತಿದ್ದಾರೆ. ವಿವಿಯ ಶಿಕ್ಷಕೇತರ ನೌಕರರ ಸಂಘ/ ಅನುಸೂಚಿತ ಜಾತಿ, ಪಂಗಡಗಳ ಶಿಕ್ಷಕೇತರ ಸಂಘಗಳ ಹೆಸರು ಬಳಕೆ ಮಾಡುತ್ತಾ ನನಗೆ ಬೆದರಿಕೆ ಒಡ್ಡುವಂತಹ ಸೂಚನೆಗಳನ್ನು ಸಿಬ್ಬಂದಿಗಳ ಮೂಲಕ ತಿಳಿಸಿ ಭಯದ ವಾತಾವರಣ ಸೃಷ್ಟಿಗೆ ಪ್ರಯತ್ನಿಸಿದ್ದಾರೆ. ಕುಲಪತಿಗಳ ನಡವಳಿಕೆಯಿಂದ ನನ್ನ ಮತ್ತು ನನ್ನ ಕುಟುಂಬದ ರಕ್ಷಣೆಗೆ ಧಕ್ಕೆ ಬರಬಹುದೆಂಬ ಭಾವನೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನಕ್ಕೆ ಈ ವಿಷಯ ತರುತ್ತಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
    ಕುಲಸಚಿವರು ಕೂಡ ಬೆಂ.ವಿವಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಮೇಲೆ ತಮ್ಮ ಅಧಿಕಾರ ದರ್ಪ ತೋರಿಸುತ್ತಾರೆ ಎಂಬ ಆರೋಪವೂ ಕೇಳಿ ಬಂದಿದೆ. ವಿವಿಯ ಅರಣ್ಯ ಸಂಪತ್ತು ಕೊಳ್ಳುಬಾಕರ ಕೈಗೆ ಹೋಗುತ್ತಿದೆ. ರಕ್ಷಣೆ ಮಾಡುವಂತೆ ಮನವಿ ಮಾಡಿದ್ದ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಇತರರಿಗೆ ತಿಳುವಳಿಕೆ ಪತ್ರವನ್ನು ನೀಡಿದ್ದಾರೆಂದು ತಿಳಿದು ಬಂದಿದೆ.

ಕೆ.ಆರ್.ವೇಣುಗೋಪಾಲ್, ಕುಲಪತಿ, ಬೆಂ.ವಿವಿ

ನಾನೇನು ಬೆದರಿಕೆ ಹಾಕಿಲ್ಲ. ಸಿಂಡಿಕೇಟ್ ತೆಗೆದುಕೊಳ್ಳುವ ತೀರ್ಮಾನಗಳನ್ನು ಅವರು ಹೇಗೆ ತೆಗೆದುಕೊಳ್ಳಲು ಸಾಧ್ಯ ಹೇಳಿ. ಇದು ಸಾಧ್ಯವಿಲ್ಲ ಎಂದಿದ್ದಕ್ಕೆ ಈ ರೀತಿ ದೂರು ನೀಡಿದ್ದಾರೆ.

ಕೋಟ್…