ನ್ಯೂಸ್

ಬುಲ್ಲಿ ಬಾಯ್ ಆ್ಯಪ್‌ ವಿವಾದ: ಮುಂಬೈನಲ್ಲಿ ಬೆಂಗಳೂರು ಯುವಕನ ಬಂಧನ

ದೇಶದಾದ್ಯಂತ ಬುಲ್ಲಿ ಬಾಯ್ ಆ್ಯಪ್‌ ವಿವಾದ ಸಂಚಲನ ಉಂಟು ಮಾಡುತ್ತಿರುವ ಬೆನ್ನಲ್ಲೇ ಮುಂಬೈ ಪೊಲೀಸರು ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್ (21) ಎಂಬಾತನನ್ನು ಬಂಧಿಸಿದ್ದಾರೆ. ಆತನನ್ನು ಜ.10ರವರೆಗೂ ಮುಂಬೈ ಸೈಬರ್ ಪೊಲೀಸರ ವಶಕ್ಕೆ ಮುಂಬೈನ ಸ್ಥಳೀಯ ಕೋರ್ಟ್ ಒಪ್ಪಿಸಿದೆ.

ಕುಮಾರಸ್ವಾಮಿ ಲೇಔಟ್​ನ ನಿವಾಸಿ ಹಾಗೂ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ 2ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯನ್ನು ಮುಂಬೈಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ಆತ ಬುಲ್ಲಿ ಬಾಯ್ಗೆ ಇರುವ ಐದು ಹಿಂಬಾಲಕರ ಪೈಕಿ ಒಬ್ಬನಾಗಿದ್ದಾನೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿಯನ್ನು ಗೌಪ್ಯವಾಗಿ ವಿಚಾರಣೆ ನಡೆಸಿ ಬುಲ್ಲಿ ಬಾಯ್ ಆಪ್​ನಲ್ಲಿ ಆತನ ಪಾತ್ರವೇನು? ಇದರ ಹಿಂದೆ ಇನ್ನೂ ಎಷ್ಟು ಜನ ಇದ್ದಾರೆ? ಇತರ ಆರೋಪಿಗಳ ಪರಿಚಯವಾಗಿರುವುದು ಹೇಗೆ? ಈ ಆಪ್ ಸೃಷ್ಟಿಸಿರುವುದರ ಹಿಂದಿರುವ ಉದ್ದೇಶವೇನು? ಎಂಬಿತ್ಯಾದಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಸ್ಥಳೀಯ ಪೊಲೀಸರಿಗೂ ಯಾವುದೇ ಮಾಹಿತಿ ನೀಡದೇ ವಿದ್ಯಾರ್ಥಿಯ ಮನೆಗೆ ಬಂದಿದ್ದ ಮುಂಬೈ ಪೊಲೀಸರು ಆತನನ್ನು ಕರೆದೊಯ್ದಿದ್ದಾರೆ. ಇದು ಸೂಕ್ಷ್ಮ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಗೌಪ್ಯತೆ ಕಾಪಾಡಿರಬಹುದು ಎನ್ನ ಲಾಗಿದೆ.

ವಿದ್ಯಾರ್ಥಿಯು ತನ್ನ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಬುಲ್ಲಿ ಬಾಯ್ ಆಪ್​ನ ಕಂಟೆಂಟ್, ಫೋಟೋಗಳನ್ನು ಶೇರ್

ಮಾಡುತ್ತಿದ್ದ. ಆತನ ಟ್ವಿಟ್ಟರ್ ಖಾತೆಯ ಐಪಿ ಅಡ್ರೆಸ್ ಮೂಲಕ ಮುಂಬೈ ಪೊಲೀಸರು ಆತನ ಮನೆಯ ವಿಳಾಸ ಪತ್ತೆಹಚ್ಚಿದ್ದರು. ಸಮಗ್ರ ತನಿಖೆಯ ನಂತರ ಪ್ರಕರಣದ ಜಾಡನ್ನು ಹಿಡಿದು ಮೂಲದವರೆಗೆ ಹೋಗಿ ಇದರಲ್ಲಿ ಭಾಗಿಯಾದ ಎಲ್ಲರನ್ನೂ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಏನಿದು ಬುಲ್ಲಿಬಾಯ್ ಅ್ಯಪ್‌?: ಬುಲ್ಲಿ ಬಾಯ್ ಎಂಬುದು ಮೊಬೈಲ್ ಅಪ್ಲಿಕೇಷನ್ ಆಗಿದ್ದು, ಈ ಅಪ್ಲಿಕೇಷನ್ ಗೂಗಲ್ ಪ್ಲೇಸ್ಟೋರ್ ರೀತಿಯ ಮತ್ತೊಂದು ಪ್ಲಾಟ್​ಫಾರ್ಮ ಆದ ಗಿಟ್​ಹಬ್​ನಲ್ಲಿ ದೊರೆಯುತ್ತದೆ. ಈ ಅಪ್ಲಿಕೇಷನ್​ನಲ್ಲಿ ಮುಸ್ಲಿಂ ಮಹಿಳೆಯರ ತಿರುಚಲಾದ ಫೋಟೋಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ ಎಂದು ಪತ್ರಕರ್ತೆಯೊಬ್ಬರು ಟ್ವಿಟರ್​ನಲ್ಲಿ ವಿಷಯ ಹಂಚಿಕೊಂಡಿದ್ದರು. ವಿವಿಧ ಸಾಮಾಜಿಕ ಜಾಲತಾಣಗಳಿಗೆ ಭೇಟಿ ನೀಡಿ ಮುಸ್ಲಿಂ ಮಹಿಳೆಯರ ಸಾಮಾಜಿಕ ಜಾಲತಾಣ ಖಾತೆಗಳಿಂದ ಅವರ ಭಾವಚಿತ್ರಗಳನ್ನು ಸಂಗ್ರಹಿಸಿ ಇದರಲ್ಲಿ ಅಪ್ಲೋಡ್ ಮಾಡಲಾಗಿದೆ. ಸಾರ್ವಜನಿಕರನ್ನು ಇಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಉತ್ತೇಜಿಸಲಾಗಿದೆ. ಬುಲ್ಲಿ ಬಾಯ್ ಮೊಬೈಲ್ ಆಪ್​ನಲ್ಲಿ ಮುಸ್ಲಿಂ ವೈದ್ಯರ, ಮಹಿಳೆಯರ ಫೋಟೋಗಳನ್ನು ಅಪ್​ಲೋಡ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.

ಉತ್ತರಾಖಂಡ ಮಹಿಳೆ ಪ್ರಮುಖ ಆರೋಪಿ?

ಬುಲ್ಲಿ ಬಾಯ್ ಆಪ್ ಕೇಸ್​ನ ಪ್ರಮುಖ ಆರೋಪಿ ಎನ್ನಲಾದ ಉತ್ತರಾ ಖಂಡದ ಮಹಿಳೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಟ್ರಾನ್ಸಿಟ್ ರಿಮಾಂಡ್​ಗೆ ಅಲ್ಲಿನ ಸ್ಥಳೀಯ ಕೋರ್ಟ್ ಒಪ್ಪಿಸಿದೆ. ಮುಂಬೈ ಸೈಬರ್ ಪೊಲೀಸರ ತಂಡ ಈಕೆಯನ್ನು ಮುಂಬೈಗೆ ಕರೆತರುತ್ತಿದ್ದು, ಮತ್ತೆ

ಕೋರ್ಟ್​ಗೆ ಹಾಜರುಪಡಿಸಲಿದೆ. ಮಹಿಳೆಯ ಕುರಿತ ಹೆಚ್ಚಿನ ಮಾಹಿತಿ ಯನ್ನು ಪೊಲೀಸರು ಬಹಿರಂಗಪಡಿಸಿಲ್ಲ.