ವಿಜಯವಾಣಿ ಸುದ್ದಿಜಾಲ ಕೋಲಾರ
ರಾಜ್ಯದಲ್ಲಿನ ಅತಿಥಿ ಉಪನ್ಯಾಸಕರನ್ನು ಖಾಯಂ ಸೇರಿದಂತೆ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರವು ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಧರಣಿಯು ೪ನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರವು ನಗರದ ಹೊರವಲಯದ ಜಿಲ್ಲಾಧಿಕಾರಿ ಕಛೇರಿ ಮುಂದೆ ಧರಣಿ ನಡೆಸಿ ಜಿಲ್ಲಾಧಿಕಾರಿ ಅಕ್ರಂ ಪಾಷ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅತಿಥಿ ಉಪನ್ಯಾಸಕರ ಒಕ್ಕೂಟದ ಗೌರವ ಅಧ್ಯಕ್ಷ ಚಂಜಿಮಲೆ ಶ್ರೀನಿವಾಸ್ ಮಾತನಾಡಿ, ವಿಧ್ಯಾರ್ಥಿಗಳ ಹಿತದೃಷ್ಟಿಯಿಂದ ಅತಿಥಿ ಉಪನ್ಯಾಸಕರಿಗೆ ಮುಂದೆ ಭವಿಷ್ಯವಿಲ್ಲದಿದ್ದರೂ ವಿಧ್ಯಾರ್ಥಿಗಳ ಹಿತದೃಷ್ಟಿಯಿಂದ ಕಡಿಮೆ ಸಂಬಳಕ್ಕೆ ತರಗತಿಗಳಲ್ಲಿ ಪಾಠಗಳನ್ನು ಮಾಡಿಕೊಂಡು ಬಂದಿದ್ದೇವೆ. ಸುಮಾರು ವರ್ಷಗಳಿಂದ ಆಳುವ ಸರ್ಕಾರಗಳನ್ನು ಮತ್ತು ವಿರೋಧ ಪಕ್ಷದದವರನ್ನು ನಮ್ಮ ಬೇಡಿಕೆಗಳನ್ನು ಈಡೇರಿಸಲು ಮನವರಿಕೆ ಮಾಡಿಕೊಟ್ಟಿದ್ದರೂ ಇದುವರೆಗೂ ನಮ್ಮ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಸರ್ಕಾರಗಳಿಗೆ ನಮ್ಮ ಬಗ್ಗೆ ಮುತುವರ್ಜಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ರಾಜ್ಯ ಅಧ್ಯಕ್ಷ ನಾಗನಾಳ ಮುನಿಯಪ್ಪ ಮಾತನಾಡಿ, ಈಗಾಗಲೇ ಹಿಂದೆ ಇದ್ದ ಬಿಜೆಪಿ ಸರ್ಕಾರ ಹಾಗೂ ಈಗಿನ ಕಾಂಗ್ರೇಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಉನ್ನತ ಶಿಕ್ಷಣ ಸಚಿವರಿಗ ಬೇಡಿಕೆಗಳ ಈಡೇರಿಕೆಗಾಗಿ ಸಾಕಷ್ಟು ಬಾರಿ ಮನವಿಗಳನ್ನು ನೀಡಿದ್ದರೂ ಯಾವುದೇ ಕ್ರಮವಹಿಸಿಲ್ಲ. ಸರ್ಕಾರ ಕೂಡಲೇ ಸ್ವಂದಿಸದೇ ಹೋದರೆ ಬುಧವಾರ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದ್ದು, ಅಲ್ಲಿಯೂ ಕ್ರಮ ವಹಿಸದೇ ಹೋದರೆ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ, ನಾನು ಕೂಡ ೧೯೯೫ ರಲ್ಲಿ ಮೂರು ವರ್ಷಗಳ ಕಾಲ ನಿಮ್ಮಂತೆ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದೇನೆ. ನಿಮ್ಮ ನೋವುಗಳು ನಮಗೂ ಗೊತ್ತಿದೆ. ಅವಕಾಶ ಸಿಕ್ಕರೆ ನಿಮ್ಮಗಳ ಧ್ವನಿಯಾಗಿ ಸಂಬAಧಿಸಿದವರೊAದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.
ಧರಣಿಯಲ್ಲಿ ಸರ್ಕಾರಿ ಪದವಿ ಕಾಲೇಜುಗಳ ಮಹಿಳಾ ಘಟಕದ ರಾಜ್ಯ ಸಂಚಾಲಕಿ ಸಿಎಂ ನಾಗಮಣಿ, ಜಿಲ್ಲಾಧ್ಯಕ್ಷ ಎ.ಬಿ.ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿನಾರಾಯಣ್, ಸಹ ಕಾರ್ಯದರ್ಶಿ ಕೆ.ಎನ್.ನಾಗರಾಜ್, ಜಿಲ್ಲಾ ಮುಖಂಡರಾದ ಬಾಲಾಜಿ, ಲಕ್ಷ್ಮೀ, ಶಿವಣ್ಣ, ಸಿದ್ದರಾಜು, ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ ೨೭ ಕೆ.ಎಲ್.ಆರ್. ೦೧ : ಅಥಿತಿ ಉಪನ್ಯಾಸಕರನ್ನು ಖಾಯಂಗೊಳಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತಿರುವ ಅಥಿತಿ ಉಪನ್ಯಾಸಕರು.