ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಹುಟ್ಟು ಹಾಕಿದ ‘ಬುದ್ಧ ಧಮ್ಮ ಕ್ರಾಂತಿ’ ದೇಶದೆಲ್ಲೆಡೆ ತ್ವರಿತಗತಿಯಲ್ಲಿ ಹರಡಬೇಕು ಎಂದು ಅಂಬೇಡ್ಕರ್ ಅವರ ಮೊಮ್ಮಗ ಡಾ.ಭೀಮರಾವ್ ಯಶವಂತರಾವ್ ಅಂಬೇಡ್ಕರ್ ಕರೆಕೊಟ್ಟರು.
ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ನಗರದ ಲಲಿತಮಹಲ್ ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಬೃಹತ್ ಬೌದ್ಧ ಮಹಾಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸದ ಬಳಿಕ ಬುದ್ಧ ಧಮ್ಮ ಕ್ರಾಂತಿ ದೇಶದಲ್ಲಿ ಮತ್ತೊಮ್ಮೆ ಮೊಳಗಿತು. ಅವರನ್ನು ಅನುಸರಿಸಿ ಬಹಳಷ್ಟು ದಲಿತರು, ಶೋಷಿತರು, ಶೂದ್ರರು ಬುದ್ಧ ಧರ್ಮದ ದೀಕ್ಷೆ ಪಡೆದರು. ಅಂತೆಯೆ, ಇತ್ತೀಚಿನ ದಿನಗಳಲ್ಲಿ ಈ ಕ್ರಾಂತಿಗೆ ಮತ್ತೆ ವೇಗದ ಸ್ಪರ್ಶ ದೊರೆತಿದೆ. ಉತ್ತರಪ್ರದೇಶದಲ್ಲಿ 10 ಸಾವಿರ ಹಿಂದುಳಿದ ವರ್ಗದವರು ಬೌದ್ಧ ಧರ್ಮ ಸ್ವೀಕರಿಸುತ್ತಿದ್ದಾರೆ ಎಂದು ತಿಳಿಸಿದರು.
ಪ್ರತಿಯೊಬ್ಬ ವ್ಯಕ್ತಿ ತನಗೆ ಬೇಕಾದ ಧರ್ಮವನ್ನು ಸೇರುವ ಅಧಿಕಾರ ಸಂವಿಧಾನದತ್ತವಾಗಿದೆ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಈ ಹಕ್ಕು ಸೇರಿಸಿದ್ದಾರೆ. ಆದರೀಗ ಧಾರ್ಮಿಕ ಸ್ವಾತಂತ್ರೃ, ಧಾರ್ಮಿಕ ಆಚರಣೆ ಹಕ್ಕನ್ನು ದಮನ ಮಾಡಲಾಗುತ್ತಿದೆ. ಇದು ಸಂವಿಧಾನಬಾಹಿರ. ಇದಕ್ಕೆ ಅವಕಾಶ ಕೊಡಲ್ಲ ಎಂದು ಗುಡುಗಿದರು.
ಮೈಸೂರಿನ ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಭಾರತ ಬುದ್ಧನ ನಾಡು. ಆದ್ದರಿಂದ ನಾವುಗಳೆಲ್ಲ ಬೌದ್ಧರಾಗಬೇಕು. ನಮ್ಮ ಪೂರ್ವಜರು ಇದೇ ಧರ್ಮೀಯರಾಗಿದ್ದರು ಎಂದರು.
ಬೌದ್ಧ ಧರ್ಮ ಎಂದರೆ ಸತ್ಯ, ಸಮಾನತೆ, ಭಾತೃತ್ವ, ಮಾನವೀಯತೆ, ಜ್ಞಾನ, ಪ್ರಜ್ಞೆ, ವಿದ್ಯೆ. ಈ ಕಾರಣಕ್ಕೆ ಅಂಬೇಡ್ಕರ್ ಬೌದ್ಧ ಧರ್ಮದ ದೀಕ್ಷೆ ಪಡೆದರು. ಆದ್ದರಿಂದ ಘನತೆ, ಸ್ವಾಭಿಮಾನದ ಬದುಕಿಗಾಗಿ ಅವರ ಅನುಯಾಯಿಗಳು, ದಲಿತರು ಬೌದ್ಧ ಧರ್ಮದ ಕಡೆಗೆ ಮುಖ ಮಾಡಬೇಕು ಎಂದು ಸಲಹೆ ನೀಡಿದರು.
ಬೀದರ್‌ನ ಧಮ್ಮಾನಂದ ಭಂತೇಜಿ, ಕೊಳ್ಳೇಗಾಲ ಜೇತವನದ ಮನೋರಖ್ಖಿತ ಭಂತೇಜಿ, ವೀರ್ಯಶೀಲಾ ಭಂತೇಜಿ, ಹೊರಜ್ಯೋತಿ ಭಂತೇಜಿ, ಬೋಧಿರತ್ನ ಭಂತೇಜಿ, ಅಷ್ಟಾಂಗ ಧ್ಯಾನ ಕೇಂದ್ರದ ಬೋಧಿದತ್ತ ಭಂತೇಜಿ, ಬುದ್ಧ ಪ್ರಕಾಶ ಭಂತೇಜಿ, ಸುಗತ ಪಾಲ ಭಂತೇಜಿ, ನ್ಯಾನಲೋಕ ಭಂತೇಜಿ, ಧಮ್ಮವೀರ ಭಂತೇಜಿ, ಭಾರತೀಯ ಭೌದ್ದ ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಡಿ.ಜಗನ್ನಾಥ್, ಮಾಜಿ ಮೇಯರ್ ಪುರುಷೋತ್ತಮ್, ಪದಾಧಿಕಾರಿಗಳಾದ ಎಸ್.ಕೆ.ಭಂಡೇರಿ, ಹೊರವಾಡೆ, ಡಾ.ಜಯಪ್ರಕಾಶ್, ಮಲ್ಲಿಕಾರ್ಜುನ ಬಾಲ್ಕಿ, ಎಂ.ಸಿ.ಶಿವರಾಜು ಮುಂತಾದವರು ಹಾಜರಿದ್ದರು.
ಧಮ್ಮ ನಡಿಗೆ:
ಸಮಾವೇಶಕ್ಕೂ ಮುನ್ನ ಪುರಭವನ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ‘ಧಮ್ಮ ನಡಿಗೆ’ ಆರಂಭಿಸಲಾಯಿತು. ಅಲ್ಲಿಂದ ಸಾವಿರಾರು ಜನರೊಂದಿಗೆ ಹೊರಟ ಮೆರವಣಿಗೆ ನಂತರ ಸಭಾ ಕಾರ್ಯಕ್ರಮ ನಿಗದಿಯಾಗಿದ್ದ ಲಲಿತಮಹಲ್ ಅರಮನೆ ಮೈದಾನದಲ್ಲಿ ಸಮಾವೇಶಗೊಂಡಿತು.
ಸಮಾವೇಶದಲ್ಲಿ ಕೈಗೊಂಡ 10 ನಿರ್ಣಯಗಳು
ಬುದ್ಧ ಪೂರ್ಣಿಮೆ ಸರ್ಕಾರದಿಂದ ಆಚರಣೆ, ಬೌದ್ಧ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದು ಸೇರಿದಂತೆ 10 ನಿರ್ಣಯಗಳನ್ನು ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಯಿತು.
ರಾಜ್ಯಾದ್ಯಂತ ಬುದ್ಧ ವಿಹಾರಗಳ ನಿರ್ಮಾಣ-ನಿರ್ವಹಣೆ, ಪ್ರತಿ ಜಿಲ್ಲಾ ಕೇಂದ್ರದಲ್ಲಿ 25 ಎಕರೆ, ತಾಲೂಕು ಕೇಂದ್ರಗಳಲ್ಲಿ 5 ಎಕರೆ, ಹಳ್ಳಿಗಳಲ್ಲಿ ಒಂದು ಎಕರೆ ನೀಡಿ ಬುದ್ಧ ವಿಹಾರ, ಧ್ಯಾನ ಕೇಂದ್ರ, ಶಾಲಾ ಕಾಲೇಜು ಮಂಜೂರು ಮಾಡಬೇಕು. ಬೌದ್ಧರು ನಡೆಸುವ ಶಾಲಾ ಕಾಲೇಜುಗಳು, ಅನಾಥಾಶ್ರಮಗಳು, ಆಸ್ಪತ್ರೆಗಳು, ವೃದ್ಧಾಶ್ರಮಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಬೇಕು. ಬೌದ್ಧ ಸಾಹಿತ್ಯದ ತ್ರಿಪಿಠಕಗಳು, ಅದಕ್ಕೆ ಸಂಬಂಧಪಟ್ಟ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಾಶನ ಮಾಡಲು ಅನುದಾನ ನೀಡಬೇಕು. ಬೌದ್ಧಯಾತ್ರಾ ಸ್ಥಳಗಳಿಗೆ ಪ್ರವಾಸ ಮಾಡಲು ಅನುದಾನ, ಬೌದ್ಧರಾದವರಿಗೆ ಧರ್ಮ ಪ್ರಮಾಣಪತ್ರ ನೀಡಬೇಕು. ಬೌದ್ಧ ವಿದ್ಯಾರ್ಥಿಗಳಿಗೆ ಹೊರ ದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಅನುದಾನ ನೀಡಬೇಕು. ಸಾಮ್ರಾಟ ಅಶೋಕರು ನಿರ್ಮಿಸಿದಂತಹ ಶಿಲಾಶಾಸನಗಳನ್ನು ಸಂರಕ್ಷಣೆ ಮಾಡಬೇಕು ಎಂದು ನಿರ್ಣಯಿಸಲಾಯಿತು.