ಬೆಳಗಾವಿ: ನಗರದ ವಿವಿಧ ಬಡಾವಣೆಗಳಲ್ಲಿರುವ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಆಸ್ತಿಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಸೂಚಿಸಿದರು.
ಬುಡಾ ವ್ಯಾಪ್ತಿಯ ವಿವಿಧ ಬಡಾವಣೆಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಬುಡಾಕ್ಕೆ ಸಂಬಂಧಿಸಿದಂತೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇದೆ. ಆದರೆ, ಯಾವ ಆಸ್ತಿ ಎಲ್ಲಿದೆ ಎಂಬುದು ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ಆಸ್ತಿಗಳ ಸಮೀಕ್ಷೆ ನಡೆಸಬೇಕು ಎಂದು ತಿಳಿಸಿದರು.
ಕುಮಾರಸ್ವಾಮಿ ಲೇಔಟ್, ಹನುಮಾನ ನಗರ, ಲಕ್ಷ್ಮೀ ಟೇಕಡಿ, ಕುವೆಂಪು ನಗರ, ಕಣಬರ್ಗಿ ಸೇರಿ ವಿವಿಧೆಡೆ ಬುಡಾಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಆಸ್ತಿಗಳಿವೆ. ಆದರೆ, ಈ ಆಸ್ತಿಗಳು, ಅವುಗಳ ವಿಸ್ತೀರ್ಣದ ಬಗ್ಗೆ ಅಧಿಕಾರಿಗಳ ಬಳಿ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಮೂಲ ದಾಖಲೆ, ನಕ್ಷೆ ಹಿಡಿದುಕೊಂಡು ಪತ್ತೆ ಹಚ್ಚುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಅಲ್ಲದೆ, ಲಭ್ಯವಿರುವ ಆಸ್ತಿಗಳು, ಬಳಕೆಯಾಗದಿರುವ ಆಸ್ತಿಗಳ ಪಟ್ಟಿಯನ್ನು ತಕ್ಷಣ ನೀಡಬೇಕು ಎಂದು ಸೂಚಿಸಿದರು.
ವಿವಿಧ ಕಾರಣಗಳಿಂದಾಗಿ ನ್ಯಾಯಾಲಯದಲ್ಲಿರುವ ಪ್ರಕರಣ ಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸಬೇಕು. ಯಾರಿಗೆ ಜಾಗ ಸಿಕ್ಕಿಲ್ಲವೋ ಅವರಿಗೆ ಆದಷ್ಟು ಬೇಗ ಜಾಗ ನೀಡಲು ಸ್ಪಂದಿಸಬೇಕು. ಈ ದಿಸೆಯಲ್ಲಿ ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರ ಜನರಿಗೆ ಅಗತ್ಯವಾದ ನಿವೇಶನ ನೀಡಲು ಮುಂದಾಗಬೇಕು ಎಂದು ತಿಳಿಸಿದರು. ಬುಡಾ ಆಯುಕ್ತ ದಿನೇಶಕುಮಾರ ಜಿ.ಟಿ., ಅಭಿಯಂತ ಶಂಕರ ನಾಯಕ ಇತರರು ಇದ್ದರು.