ನ್ಯೂಸ್

ಬೀದಿನಾಯಿ ನಿಯಂತ್ರಣಕ್ಕೆ ಜಿಲ್ಲಾಪಂಚಾಯತ್ ಕ್ರಮ / ಗ್ರಾಮಪಂಚಾಯ್ತಿಗಳಿಗೆ ಸೂಚನೆ / ಡಾ.ಪ್ರವೀಣ್ ಪಿ.ಬಾಗೇವಾಡಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಬೀದಿ ನಾಯಿಗಳ ನಿಯಂತ್ರಣಕ್ಕೆ ಜಿಲ್ಲಾಪಂಚಾಯ್ತಿ ಮುಂದಾಗಿದ್ದು, ಬೀದಿನಾಯಿಗಳ ಉಪಟಳವನ್ನು ನಿಯಂತ್ರಿಸಲು ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಜಿಲ್ಲಾಪಂಚಾಯ್ತಿ ಸಿ.ಇ.ಓ.ಡಾ.ಪ್ರವೀಣ್ ಪಿ.ಬಾಗೇವಾಡಿ ಸೂಚಿಸಿದ್ದಾರೆ.

ಜಿಲ್ಲೆಯ ೧೫೪ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು ೩೧ ಸಾವಿರ ಬೀದಿನಾಯಿಗಳಿವೆ ಎಂದು ಅಂದಾಜಿಸಲಾಗಿದ್ದು, ಅವುಗಳ ನಿಯಂತ್ರಣಕ್ಕೆ ಪಂಚಾಯ್ತಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.

೨೦೨೩ರಲ್ಲಿ ಕೇಂದ್ರ ಸರ್ಕಾರವು ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮ ಜಾರಿಗೆ ತರಲು ಮಾರ್ಗಸೂಚಿ ನೀಡಿದ್ದು, ಅದರಂತೆ ಗ್ರಾಮೀಣ ಪ್ರದೇಶದಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಗ್ರಾಮಪಂಚಾಯಿತಿಗಳು ಪ್ರಾಣಿಸಂತಾನ ನಿಯಂತ್ರಣ (ಎಬಿಸಿ)ಹಾಗೂ ರೇಬಿಸ್ ಲಸಿಕೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಪ್ರಾಣಿಸಂತಾನ ನಿಯಂತ್ರಣ ನಿಯಮಗಳು :

೨೦೨೩ರ ಮಾರ್ಗಸೂಚಿಗಳ ಅನ್ವಯ, ಬೀದಿನಾಯಿಗಳ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ, ರೇಬಿಸ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ನಿಯಮಿತವಾಗಿ ಬೀದಿನಾಯಿಗಳ ಗಣತಿ ನಡೆಸುವುದು, ಹಾಗೂ ಬೀದಿನಾಯಿ ಕಡಿತಕ್ಕೆ ಗುರಿಯಾದವರಿಗೆ ಪರಿಹಾರ ಒದಗಿಸುವುದು, ಗ್ರಾಮಪಂಚಾಯತಿಗಳ ಕರ್ತವ್ಯವಾಗಿದೆ.

ಬೀದಿನಾಯಿ ನಿಯಂತ್ರಣ ಹಾಗೂ ನಾಯಿ ಕಡಿತಕ್ಕೊಳ್ಳಗಾಗುವ ನಾಗರಿಕರಿಗೆ ಪರಿಹಾರ ನೀಡಲು, ಗ್ರಾಮ ಪಂಚಾಯತಿಯ ಒಟ್ಟು ತೆರಿಗೆ ಮೊತ್ತದಲ್ಲಿ ಶೇ.೨ ರಷ್ಟು ಹಾಗೂ ತಾಲ್ಲೂಕು ಜಿಲ್ಲಾಪಂಚಾಯತಿಗಳು ತಮ್ಮ ಅಭಿವೃದ್ಧಿ ಅನುದಾನದಡಿಯಲ್ಲಿ ಶೆ.೨ರಷ್ಟು ಮೀಸಲಿರಿಸಲು ಕ್ರಮ ವಹಿಸಲಾಗುತ್ತಿದೆ.

ಬೀದಿನಾಯಿ ನಿಯಂತ್ರಣಕ್ಕೆ ತಾಲ್ಲೂಕು ಸಮಿತಿ :

ಗ್ರಾಮೀಣ ಪ್ರದೇಶದಲ್ಲಿ ಬೀದಿನಾಯಿಗಳ ರಕ್ಷಣೆ, ಸಂತಾನ ನಿಯಂತ್ರಣ ಹಾಗೂ ರೋಗಗ್ರಸ್ಥ ನಾಯಿಗಳಿಗೆ ಚಿಕಿತ್ಸೆ ಹಾಗೂ ಆರೈಕೆಗಾಗಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಲಾಗಿರುತ್ತದೆ. ಸಮಿತಿಗಳು ತಮ್ಮ ಗ್ರಾಮಪಂಚಾಯತಿ ವ್ಯಾಪ್ತಿಯ ಬೀದಿನಾಯಿಗಳನ್ನು ಹಿಡಿಯುವುದು, ಸ್ಥಳಾಂತರ, ಸಂತಾನ ಹರಣ ಚಿಕಿತ್ಸೆಗೆ ಮೂಲಸೌಕರ್ಯಗಳನ್ನು ಒದಗಿಸುವುದು. ರೇಬಿಸ್ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿವುದು, ಸಮಿತಿಯ ಕರ್ತವ್ಯವಾಗಿರುತ್ತದೆ. ಪಶುಪಾಲನೆ ಇಲಾಖೆಯಿಂದ ಉಚಿತವಾಗಿ ಬೀದಿನಾಯಿಗಳಿಗೆ ರೇಬಿಸ್ ಲಸಿಕೆ ನೀಡಲಾಗುವುದು.

ಐದು ಲಕ್ಷದವರಿಗೆ ಪರಿಹಾರ :

ಬೀದಿನಾಯಿಕಡಿತಕ್ಕೆ ಗುರಿಯಾದ ಸಂತ್ರಸ್ಥರು ಸ್ಥಳೀಯ ಸಂಸ್ಥೆಗಳಿAದ ಪರಿಹಾರಧನ ಪಡೆಯಲು ಆರ್ಹರಾಗಿರುತ್ತಾರೆ. ಬೀದಿನಾಯಿಗಳಿಂದ ಗಾಯಗೊಂಡವರಿಗೆ ೫ ಸಾವಿರ ಪರಿಹಾರ ಹಾಗೂ ಮರಣ ಸಂಭವಿಸಿದ್ದಲ್ಲಿ ೫ ಲಕ್ಷ ಪರಿಹಾರದ ಹಣ ನೀಡಬೇಕು. ಬೀದಿನಾಯಿ ದಾಳಿಯ ದೂರು ಸ್ವೀಕೃತವಾದ ಅಥವಾ ಗಮನಕ್ಕೆ ಬಂದ ನಂತರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಲ್ಲೂಕು ಮಟ್ಟದ ಸಮಿತಿಯು ೪ ದಿನದಲ್ಲಿ ಪರಿಹಾರಧನ ಪಾವತಿಸಲು ಕ್ರಮವಹಿಸಲಾಗಿದೆ.

ಕೋಟ್

ಗ್ರಾಮೀಣ ಪ್ರದೇಶದಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಜಿಲ್ಲಾಪಂಚಾಯತಿಯಿAದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತಾಲ್ಲೂಕು ಮಟ್ಟದ ಸಮಿತಿಗಳನ್ನು ರಚಿಸಲಾಗಿದ್ದು, ಬೀದಿನಾಯಿಗಳಿಗೆ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಮತ್ತು ರೇಬಿಸ್ ನಿಯಂತ್ರಣ ಲಸಿಕೆ ಹಾಕಿಸುವ ಜವಾಬ್ದಾರಿ ನೀಡಲಾಗಿದೆ. ಸಾರ್ವಜನಿಕರಿಗೆ ಬೀದಿನಾಯಿಗಳ ದಾಳಿ ಹಾಗೂ ರೇಬಿಸ್ ರೋಗದ ಬಗ್ಗೆ ಜಾಗೃತಿ ಮೂಡಿಸಲು ಕ್ರಮವಹಿಸಲಾಗುತ್ತಿದೆ.

-ಸಿಇಓ ಡಾ. ಪ್ರವೀಣ್ ಪಿಬಾಗೇವಾಡಿ

ಕೋಟ್

ಪಶುಪಾಲನ ಇಲಾಖೆ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮವಹಿಸಲಾಗುತ್ತಿದೆ. ರೇಬೀಸ್ ಒಂದು ಮಾರಣಾಂತಿಕ ವೈರಸ್ ಆಗಿದ್ದು, ಈ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಅಸ್ತಿತ್ವದಲ್ಲಿಲ್ಲ. ಹೀಗಾಗಿ ಸಾರ್ವಜನಿಕರು ಪ್ರಾಣಿಗಳು ಕಚ್ಚಿದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಆಂಟಿ ರೇಬೀಸ್ ಲಸಿಕೆ ಪಡೆಯಬೇಕು.

-ಟಿ.ಕೆ. ರಮೇಶ್, ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಕೋಲಾರ.

ಚಿತ್ರ ೦೩ ಕೆ.ಎಲ್.ಆರ್. ೦೫ : ಬೀದಿನಾಯಿಗಳ ಚಿತ್ರ

ಚಿತ್ರ ೦೩ ಕೆ.ಎಲ್.ಆರ್. ೦೫ಎ : ಡಾ.ಪ್ರವೀಣ್ ಪಿ.ಬಾಗೇವಾಡಿ ರವರ ಭಾವಚಿತ್ರ