ನಗರದಲ್ಲಿ ಬಲೂನು ಮಾರಲು ಕುಟುಂಬದೊಂದಿಗೆ ಬಂದಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಘಟನೆಯು ಜನಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಮತ್ತೆ ಇಂತಹ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕಿದೆ.
ಮೈಸೂರು ಪ್ರವಾಸಿ ತಾಣವಾಗಿದ್ದು, ಇಂತಹ ಘಟನೆಗಳು ನಗರಕ್ಕೆ ಕಪ್ಪು ಮಸಿ ಬಳಿಯಲಿವೆ. ತುತ್ತಿನ ಚೀಲ ತುಂಬಿಸಿಕೊಳ್ಳಲೆಂದು ಹೊರ ಜಿಲ್ಲೆ ಅಥವಾ ರಾಜ್ಯಗಳ ಬೀದಿಬದಿ ವ್ಯಾಪಾರಿಗಳಿಗೆ ನಗರವು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ಜತೆಗೆ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯನ್ನೂ ತಿಳಿಸಿದೆ.
ದಸರಾ ಮೊದಲಾದ ಉತ್ಸವದ ಸಂದರ್ಭ, ವಷಾರ್ಂತ್ಯದಲ್ಲಿ ಮೈಸೂರಿಗೆ ವಿವಿಧೆಡೆಯಿಂದ ಮಕ್ಕಳು ಸೇರಿದಂತೆ ಇಡೀ ಕುಟುಂಬದೊಂದಿಗೆ ಬಹಳಷ್ಟು ಜನರು ಬರುತ್ತಾರೆ. ಹೆಚ್ಚು ಜನರು ಸೇರುವುದರಿಂದ ನಾಲ್ಕು ಕಾಸು ದುಡಿಯಬಹುದು ಎನ್ನುವುದು ಬಡ ವ್ಯಾಪಾರಿಗಳ ಭರವಸೆ. ಇದಕ್ಕಾಗಿ ಅವರು, ಅಂಬಾವಿಲಾಸ ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ, ಬೆಟ್ಟದ ಪಾದ, ದೊಡ್ಡಕೆರೆ ಮೈದಾನದ ವಸ್ತುಪ್ರದರ್ಶನ ಬಳಿ, ವಿವಿಧ ಕಾರ್ಯಕ್ರಮಗಳು ನಡೆಯುವ ಸ್ಥಳಗಳು, ಕೆ.ಆರ್. ವೃತ್ತ ಸಮೀಪ, ಡಿ.ದೇವರಾಜ ಅರಸು ರಸ್ತೆ, ಕೋಟೆ ಆಂಜನೇಯ ದೇವಸ್ಥಾನದ ಬಳಿ ಸೇರಿದಂತೆ ವಿವಿಧೆಡೆ ಅವರು ಬಲೂನು, ಆಟಿಕೆ, ತಿಂಡಿತಿನಿಸುಗಳು ಮೊದಲಾದವುಗಳನ್ನು ಮಾರುತ್ತಾರೆ. ಹೀಗೆ ವ್ಯಾಪಾರ ಮುಗಿದ ಮೇಲೆ ಅವರು ರಸ್ತೆಬದಿಯಲ್ಲೋ, ರಾಜಕಾಲುವೆ ಅಥವಾ ಚರಂಡಿಯ ದಂಡೆಯಲ್ಲೋ ಮಲುಗುತ್ತಾರೆ. ತ್ಯಾಜ್ಯ ಸಂಗ್ರಹವಾಗುವ ಸ್ಥಳಗಳೇ ಅವರ ವಾಸಸ್ಥಾನ. ಅವರಿಗೆ ಸುರಕ್ಷಿತ ಸ್ಥಳದ ಲಭ್ಯತೆ ಇಲ್ಲದಿರುವುದು ಅಥವಾ ಕಲ್ಪಿಸದಿರುವುದು ಮಾನವ ಹಕ್ಕುಗಳ ಉಲ್ಲಂಘನೆಗೂ ಕಾರಣವಾಗುತ್ತಿದೆ.
ಬಯಲಲ್ಲೇ ಶೌಚ!: ಅವರಿಗೆ ಶೌಚಕ್ಕೂ, ಸ್ನಾನಕ್ಕೂ ವ್ಯವಸ್ಥೆ ಇರುವುದಿಲ್ಲ. ಇರುವಲ್ಲೇ ಹಾಕಿಕೊಂಡ ಜೋಪಡಿಯಲ್ಲೋ, ಪ್ಲಾಸ್ಟಿಕ್‌ನಿಂದ ಕಟ್ಟಿಕೊಂಡ ತಾತ್ಕಾಲಿಕ ಟೆಂಟ್‌ನಲ್ಲೋ ಉಳಿಯುತ್ತಾರೆ. ಅವರು ಬಯಲನ್ನೇ ಶೌಚಕ್ಕಾಗಿ ಆಶ್ರಯಿಸುವುದು ಅನಿವಾರ್ಯವೂ ಹೌದು! ಇದು ಅನೈರ್ಮಲ್ಯಕ್ಕೂ ಕಾರಣವಾಗುತ್ತಿದೆ. ಅವರ ಅರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಅಸುರಕ್ಷಿತ ಸ್ಥಳದಲ್ಲಿ, ಅನೈರ್ಮಲ್ಯದ ನಡುವೆಯೇ ಉಳಿಯುವ ಅವರೊಂದಿಗೆ ಬರುವ ಮಕ್ಕಳ ಬಾಲ್ಯವೂ ಕಮರುತ್ತಿದೆ. ಬರೆಯುವ ಕೈಗಳಿಗೆ ಬರೆ ಬೀಳುತ್ತಿದ್ದರೂ, ಮಾನವ ಹಕ್ಕುಗಳ ಉಲ್ಲಂಘನೆಯು ಕಣ್ಣಿಗೆ ರಾಚುವಂತೆಯೇ ನಡೆಯುತ್ತಿದ್ದರೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕಡಿವಾಣ ಹಾಕುವ ನಿಟ್ಟಿನಲ್ಲಿ ಕಣ್ಣೆತ್ತಿ ನೋಡದಿರುವುದು, ಜಾಗೃತಿ ಮೂಡಿಸದಿರುವುದು ಕಳವಳಕಾರಿ ಸಂಗತಿ ಎನ್ನುವುದು ಪ್ರಜ್ಞಾವಂತರ ಆರೋಪವಾಗಿದೆ.