ಬೀದರ್: ಇಲ್ಲಿನ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ (ಐಟಿಐ) ಎಲ್ಲ ವಿಭಾಗದಲ್ಲಿಯೂ ಮುಂಚೂಣಿಯಲ್ಲಿದ್ದು, ಈ ಸಂಸ್ಥೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ ನಿರ್ದೇಶಕ ಯೋಗೇಶ್ವರ ಎಸ್. ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವಾತಂತ್ರೃ ಅಮೃತ ಮಹೋತ್ಸವ ನಿಮಿತ್ತ ನಗರದ ಸರ್ಕಾರಿ ಐಟಿಐನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೌಶಲ ಅಭಿವೃದ್ಧಿ ಜೀವನ ಸಮೃದ್ಧಿ ತರಬೇತಿದಾರರ ವಿಶೇಷ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಲ್ಲಿನ ಕಾಲೇಜಿನಲ್ಲಿ ಮೂಲಸೌಕರ್ಯ, ಮಕ್ಕಳ ತರಬೇತಿ ಜ್ಞಾನ ಪರಿಶೀಲಿಸಿದಾಗ ಸಂತಸ ನೀಡಿದೆ. ಹಿಂದುಳಿದ ಜಿಲ್ಲೆಯಲ್ಲಿ ಈ ಐಟಿಐ ಕಾರ್ಯ ಚಟುವಟಿಕೆಗಳಿಂದ ಕೂಡಿದೆ. ಜತೆಗೆ ನಿರಂತರವಾಗಿ ಕ್ಯಾಂಪಸ್ ಆಯೋಜನೆ ಮಾಡಿ ರಾಜ್ಯದ ಗಮನ ಸೆಳೆದಿದೆ. ಈವರೆಗೆ 10 ಸಾವಿರ ವಿವಿಧ ವೃತ್ತಿಯ ತರಬೇತಿದಾರರಿಗೆ ಉದ್ಯೋಗ ಕೊಡಿಸಿರುವುದು ದಾಖಲೆ ಎಂದು ಕೊಂಡಾಡಿದರು.
ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಪ್ರೊ.ಅಶೋಕ ಪಾಟೀಲ್ ಮಾತನಾಡಿ, ಪ್ರಾಚಾರ್ಯ ಟೋಕರೆ ಅವರು ನಿರಂತರ ಕ್ಯಾಂಪಸ್ ಆಯೋಜಿಸುತ್ತಿರುವ ಕಾರಣ ಜಿಲ್ಲೆಯ ಐಟಿಐ ಪ್ರತಿಭೆಗಳಿಗೆ ಉದ್ಯೋಗ ಸಿಗುತ್ತಿದೆ. ಈ ಕಾರ್ಯ ರಾಜ್ಯದ ಇತರ ಐಟಿಐಗಳಿಗೆ ಮಾದರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ, ಜಿಲ್ಲಾ ಐಟಿಐ ನೋಡಲ್ ಅಧಿಕಾರಿ ಶಿವಶಂಕರ ಟೋಕರೆ ಮಾತನಾಡಿ, ಅನೇಕ ಸಂಕಷ್ಟಗಳ ನಡುವೆ ಇಲಾಖೆ ಮಾರ್ಗದರ್ಶನ, ಸ್ಥಳೀಯ ಜನಪ್ರತಿನಿಧಿಗಳ ನೆರವು ಹಾಗೂ ಹಲವು ಕಂಪನಿಗಳ ಸಹಕಾರದಿಂದ ಕ್ಯಾಂಪಸ್ ಆಯೋಜಿಸಿ ಐಟಿಐ ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಡಳಿತದಿಂದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ಕಿರಿಯ ತರಬೇತಿ ಅಧಿಕಾರಿ ಯೂಸು್ಮಿಯ್ಯಾ ಜೋಜನಾ ಹಾಗೂ ನಿವತ್ತಿ ಹೊಂದಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪಾಚಾರ್ಯ ಪ್ರೊ.ರಾಜಪ್ಪ ಬಬಛಡಿ ಅವರನ್ನು ಸನ್ಮಾನಿಸಲಾಯಿತು.
ಇಲಾಖೆ ಹಿರಿಯ ಉಪನಿರ್ದೇಶಕ ಕೆ.ಆರ್. ಹಾಲಪ್ಪಶೆಟ್ಟಿ, ಬಿಪಿಎಚ್ ಐಟಿಐ ಪ್ರಾಚಾರ್ಯ ಶಿವಕುಮಾರ ಪಾಟೀಲ್, ಕೆಆರ್ಇ ಐಟಿಐ ಪ್ರಾಚಾರ್ಯ ವೀರೇಶ ಪಾಟೀಲ್, ಅನುದಾನ ರಹಿತ ಐಟಿಐಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ಗುಪ್ತಾ, ಲಕ್ಷ್ಮೀಕಾಂತ ಭಾಲ್ಕಿ ಇತರರಿದ್ದರು. ಪ್ರಶಾಂತ ಜ್ಯಾಂತಿಕರ್ ಸ್ವಾಗತಿಸಿದರು. ಬಾಬು ಪ್ರಭಾಜಿ ನಿರೂಪಣೆ ಮಾಡಿದರು. ಪ್ರಕಾಶ ಜನವಾಡಕರ್ ವಂದಿಸಿದರು.
ಪ್ರಸ್ತುತ ಕೆಲಸಕ್ಕೆ ಕೊರತೆ ಇಲ್ಲ. ಆದರೆ ಪರಿಪೂರ್ಣ ಕೆಲಸಗಾರರ ಕೊರತೆ ಕಾಡುತ್ತಿದೆ. ಕಲಿಕೆ ವೇಳೆಗೆ ಪ್ರಾಯೋಗಿಕ ಪ್ರಾವೀಣ್ಯತೆ ಕಡೆಗೆ ಹೆಚ್ಚು ಗಮನ ಹರಿಸಬೇಕು. ಕೈಗಾರಿಕೆ ಬಹುಕೌಶಲ ತಂತ್ರಜ್ಞಾನಕ್ಕೆ ಆದ್ಯತೆ ನೀಡಬೇಕು.
|ಯೋಗೇಶ್ವರ ಎಸ್., ಕೈಗಾರಿಕೆ ತರಬೇತಿ, ಉದ್ಯೋಗ ಆಯುಕ್ತಾಲಯ ನಿರ್ದೇಶಕ