ನ್ಯೂಸ್

ಬಿರುಗಾಳಿ ಸಹಿತ ಭಾರೀ ಮಳೆ

ನಂಜನಗೂಡು: ಬಿರುಗಾಳಿ ಸಹಿತ ಭಾರೀ ಮಳೆಗೆ ತಾಲೂಕಿನ ಗೆಜ್ಜಗನಹಳ್ಳಿ ಗ್ರಾಮದಲ್ಲಿ ವಾಣಿಜ್ಯ ಮಳಿಗೆಗಳೂ ಸೇರಿದಂತೆ ಐದು ಮನೆಗಳ ಮೇಲ್ಛಾವಣಿ ಹಾರಿ ಹೋಗಿದೆ.


ಗುರುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಗ್ರಾಮದ ನಿವಾಸಿ ಚಲುವರಾಯ, ಸಿದ್ದಾಚಾರಿ ಎಂಬುವರ ಜನರಲ್ ಸ್ಟೋರ್, ನಿಂಗರಾಜು ಎಂಬುವರ ಶಂಭುಲಿಂಗೇಶ್ವರರ ಬೇಕರಿ ಮೇಲ್ಛಾವಣಿ ಹಾರಿ ಹೋಗಿದೆ. ಇದಲ್ಲದೆ ಗೆಜ್ಜಗಹಳ್ಳಿ ಗ್ರಾಮದ ನಿವಾಸಿಗಳಾದ ಸಣ್ಣಮ್ಮ, ಮಾದಯ್ಯ, ರಾಜೇಶ್ ಎಂಬುವರ ಮನೆಗಳ ಮೇಲ್ಛಾವಣಿ ಸುಮಾರು 100 ಮೀಟರ್ ದೂರಕ್ಕೆ ಹಾರಿ ಹೋಗಿ ಬಿದ್ದಿದೆ. ಮನೆಯಲ್ಲಿದ್ದ ಪರಿಕರಗಳು ಹಾಗೂ ದವಸ-ಧಾನ್ಯಗಳೂ ಹಾನಿಗೊಳಗಾಗಿದೆ. ಅಂದಾಜು 10 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸ್ಥಳಕ್ಕೆ ಗ್ರಾ.ಪಂ. ಸದಸ್ಯರಾದ ಗೆಜ್ಜಗನಹಳ್ಳಿ ವಿಠಲ್, ಶಿವಣ್ಣ, ರಾಜೇಶ್, ಅಂಕಯ್ಯ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಸಂತ್ರಸ್ತರಿಗೆ ಪರಿಹಾರ ನೀಡಲು ತಾಲೂಕು ಆಡಳಿತಕ್ಕೆ ಮನವಿ ಮಾಡುವುದಾಗಿ ಭರವಸೆ ನೀಡಿದರು.