ನ್ಯೂಸ್

ಬಿರುಗಾಳಿ ಸಹಿತ ಬಾರಿ ಮಳೆಗೆ ನೆಲಕಚ್ಚಿದ ಪಾಲಿಹೌಸ್ / ಲಕ್ಷಾಂತರ ಬೆಲೆಬಾಳುವ ಬಿನ್ಸ್ ಬೆಳೆ ನಷ್ಟ / ರೈತನಿಗೆ ಅಘಾತ

ವಿಜಯವಾಣಿ ಸುದ್ದಿಜಾಲ ಕೋಲಾರ
ಇತ್ತೀಚಿಗೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಮತ್ತು ಬಿರುಗಾಳಿಗೆ ಅಲ್ಲಲ್ಲಿ ತರಕಾರಿ ಬೆಳೆಗಳು ನೆಲ ಕಚ್ಚಿವೆ. ಕಳೆದ ೨ ದಿನಗಳ ಹಿಂದೆ ತಾಲ್ಲೂಕಿನ ವಕ್ಕಲೇರಿ ಹೋಬಳಿ ಚಲ್ಲಹಳ್ಳಿ ಗ್ರಾಮದಲ್ಲಿ ಬಿರುಗಾಳಿ ಮಳೆಗೆ ಬೀನ್ಸ್ ಬೆಳೆ ನೆಲಕಚ್ಚಿದ್ದು, ಇದರಿಂದ ರೈತರಿಗೆ ಲಕ್ಷಾಂತರ ರೂ.ಗಳು ನಷ್ಟ ಉಂಟಾಗಿದೆ.

ಚಲ್ಲಹಳ್ಳಿ ಗ್ರಾಮದ ರೈತ ಆದಿಮೂರ್ತಿ ಎಂಬುವರು ಜಮೀನನ್ನು ಲೀಸಿಗೆ ಪಡೆದು ನಲವತ್ತು ಲಕ್ಷ ಖರ್ಚು ಮಾಡಿ ಮೂರು ಎಕರೆಯಲ್ಲಿ ಬಿನ್ಸ್ ಬೆಳೆ ಬೆಳೆದಿದ್ದರು. ಉಷ್ಣಾಂಶದಿAದ ಬೆಳೆ ಹಾನಿ ತಪ್ಪಿಸಲು ಮೂರು ಎಕರೆಯಲ್ಲಿ ಪಾಲಿ ಹೌಸ್ ನಿರ್ಮಾಣಕ್ಕಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿತ್ತು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುತ್ತಿರುವ ಬಿನ್ಸ್ ಬೆಳೆಯಿಂದ ಲಕ್ಷಾಂತರ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ಮಳೆ ಗಾಳಿಯಿಂದಾಗಿ ಕೈಗೆ ಬಂದು ತುತ್ತು ಬಾಯಿಗೆ ಬರದಂತಾಗಿದೆ. ಸಂಪೂರ್ಣವಾಗಿ ಬೆಳೆ ನೆಲಕಚ್ಚಿದ್ದು ರೈತ ಆದಿಮೂರ್ತಿಗೆ ಅಘಾತವಾಗಿದೆ.

ಇದೇ ರೀತಿ ತಾಲ್ಲೂಕಿನಲ್ಲಿ ಅಲ್ಲಲ್ಲಿ ಬೀಳುತ್ತಿರುವ ಬಿರುಗಾಳಿ ಮಳೆಗೆ ತರಕಾರಿ ಬೆಳೆಗಳು ನೆಲಕಚ್ಚುತ್ತಿವೆ. ಮಾವು ಸಹ ಫಸಲಿಗೆ ಬಂದಿದ್ದು, ಇನ್ನೇನು ಮಾರುಕಟ್ಟೆಗೆ ಪ್ರವೇಶ ಮಾಡುವ ಹಂತದಲ್ಲಿರುವ ಮಾವು ನೆಲಕ್ಕೆ ಬೀಳುತ್ತಿವೆ. ಬಿದ್ದ ಕಾಯಿ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಮಳೆ ಬಂದರೆ ಪರವಾಗಿಲ್ಲ, ಬಿರುಗಾಳಿ, ಆಲಿಕಲ್ಲು ಬೀಳದಿದ್ದರೆ ಸಾಕು, ಇರುವ ಕಾಯಿಯನ್ನು ಮಾರಾಟಮಾಡಿಕೊಳ್ಳಲು ಅನುಕೂಲವಾಗುತ್ತದೆ. ಇನ್ನು ಒಂದು ತಿಂಗಳ ಕಾಲ ಬಿರುಗಾಳಿ ಮಳೆ ಬಲಾರದಿದ್ದರೆ ಸಾಕು, ಮಾವಿನ ತೋಟಗಳಲ್ಲಿ ಇರುವ ಕಾಯಿಯನ್ನು ಕಿತ್ತುಕೊಳ್ಳಲು ಅನುಕೂಲವಾಗುತ್ತದೆ ಎಂಬುವುದು ರೈತರ ಅನಿಸಿಕೆಯಾಗಿದೆ.

ಟಮೆಟೋಗು ಉತ್ತಮ ಬೆಲೆ ಇದ್ದು, ತೋಟಗಳಲ್ಲಿರುವ ಫಸಲಿಗೆ ಧಕ್ಕೆಯಾಗದಿದ್ದರೆ ಸಾಕು, ಮಾರುಕಟ್ಟೆಯಲ್ಲಿರುವ ಉತ್ತಮ ಬೆಲೆಯಿಂದ ರೈತನಿಗೆ ಜೇಬು ತುಂಬಾ ಕಾಸು ಬರಲಿದೆ. ಬೇಸಿಗೆಯಲ್ಲಿ ಕಷ್ಟ ಪಟ್ಟು ಬೆಳೆಯನ್ನು ಕಾಪಾಡಿಕೊಂಡು ಬರಲಾಗಿದೆ. ಇತ್ತೀಚೆಗೆ ಬೀಳುತ್ತಿರುವ ಬಿರುಗಾಳಿ ಮಳೆಯಿಂದಾಗಿ ಟಮೋಟೋ ಬೆಳೆಗಾರರ ಆತಂಕದಲ್ಲಿದ್ದಾರೆ.

ಕೋಟ್
ಸುಮಾರು ನಲವತ್ತು ಲಕ್ಷ ಖರ್ಚು ಮಾಡಿ ಬೆಳೆ ಬೆಳೆಯಲಾಗಿತ್ತು. ಎರಡು ದಿನದ ಹಿಂದೆ ಬಿರುಗಾಳಿ ಸಹಿತ ಸುರಿದ ಬಾರಿ ಮಳೆಗೆ ಪಾಲಿ ಹೌಸ್ ಧ್ವಂಸವಾಗಿ ಗಿಡದಲ್ಲಿ ಬಿಟ್ಟಿದ್ದ ಹುರುಳಿಕಾಯಿ ಸಂಪೂರ್ಣವಾಗಿ ನಾಶವಾಗಿವೆ. ಫಸಲು ಚೆನ್ನಾಗಿ ಬಂದಿದ್ದು ಇನ್ನೇನು ಕಾಯಿ ಕಿತ್ತು ಮಾರುಕಟ್ಟೆಗೆ ಹಾಕಬೇಕಾಗಿತ್ತು ಅಷ್ಟರಲ್ಲಿ ಅನಾಹುತ ನಡೆದಿದೆ. ಮಳೆಗಾಳಿಯಿಂದ ಬೆಳೆ ನಷ್ಟವಾಗಿದೆಯ ಆಥವಾ ಕಿಡಿಗೇಡಿಗಳು ಪಾಲಿ ಹೌಸ್‌ಗೆ ಕಟ್ಟಿದ್ದ ಕಂಬಿಗಳನ್ನು ಕಿತ್ತು ಹಾಕಿದ್ದಾರೆಯೋ ಎಂಬುವುದು ಗೊತ್ತಿಲ್ಲ, ಸಾಲ ಮಾಡಿ ಮನೆಯಲ್ಲಿದ್ದ ಚಿನ್ನ ಅಡವಿಟ್ಟು ಬೆಳೆ ಮಾಡಿದ್ದೇವೆ. ಈಗ ಬೆಳೆ ಹಾನಿಯಿಂದ ಧಿಕ್ಕು ತೋಚದಂತಗಿದೆ. ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಹೋದವರು ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಹಾಗೂ ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

-ಚಲ್ಲಹಳ್ಳಿ ಗ್ರಾಮದ ರೈತ ಆದಿಮೂರ್ತಿ

ಚಿತ್ರ ೦೯ ಕೆ.ಎಲ್.ಆರ್. ೦೨ : ವಕ್ಕಲೇರಿ ಹೋಬಳಿ ಚಲ್ಲಹಳ್ಳಿ ಗ್ರಾಮದ ರೈತ ಆದಿಮೂರ್ತಿಯವರ ಬೀನ್ಸ್ ತೋಟದ ಪಾಲಿಹೌಸ್ ಗಾಳಿ ಮಳೆಗೆ ನೆಲಕ್ಕೆ ಉರುಳಿರುವುದು.

ಚಿತ್ರ ೦೯ ಕೆ.ಎಲ್.ಆರ್. ೦೨ಎ : ವಕ್ಕಲೇರಿ ಹೋಬಳಿ ಚಲ್ಲಹಳ್ಳಿ ಗ್ರಾಮದ ರೈತ ಆದಿಮೂರ್ತಿಯವರ ಭಾವಚಿತ್ರ