ನ್ಯೂಸ್

ಬಿತ್ತನೆ ಖರ್ಚಿಗೂ ಆಗದ ಪರಿಹಾರ ಹಣ

ಬೆಳಗಾವಿ: ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಭತ್ತ ಹಾನಿಗೀಡಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಆದರೆ, ಸರ್ಕಾರ ನಿಗದಿ ಪಡಿಸಿದ ಪರಿಹಾರ, ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎನ್ನುವಂತಾಗಿದೆ.

ಅಕಾಲಿಕ ಮಳೆಯಿಂದಾಗಿ ರೈತರಿಗೆ ಪ್ರತಿ ಎಕರೆಗೆ 30 ಸಾವಿರ ರೂಪಾಯಿಯಷ್ಟು ಹಾನಿಯಾಗಿದೆ. ಆದರೆ, ಸರ್ಕಾರ ಹೆಕ್ಟೇರ್‌ಗೆ 6,800 ರೂ. ಪರಿಹಾರ ನೀಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ರೈತರಿಗೆ ನಿರಾಸೆ: ನೆರೆಯ ಹೊಡೆತಕ್ಕೆ ತತ್ತರಿಸಿದ್ದ ರೈತ, ಇನ್ನೇನು ಮೈ ಕೊಡವಿ ನಿಲ್ಲುವ ಹೊತ್ತಿಗೆ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಮತ್ತೆ ನೆಲಕಚ್ಚಿದ್ದಾನೆ. ಕಟಾವಿಗೆ ಬಂದಿದ್ದ ಭತ್ತ ಮಳೆಯಿಂದಾಗಿ ಹಾನಿಯಾಗಿದ್ದು, ರೈತನ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ನ. 17, 18ರಂದು ಜಿಲ್ಲೆಯಲ್ಲಿ ಸುರಿದ ಮಳೆಯಿಂದ 2,150 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾನಿಯಾಗಿರುವ ಕುರಿತು ಅಧಿಕಾರಿಗಳು ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆದರೆ, ಸರ್ಕಾರ ಹೆಕ್ಟೇರ್‌ಗೆ ಕೇವಲ 6,800 ರೂ. ಪರಿಹಾರ ನೀಡಿದ್ದು ರೈತರಿಗೆ ಭಾರಿ ನಿರಾಸೆಯಾಗಿದೆ. ಸಾವಿರಾರು ರೂ. ಖರ್ಚು ಮಾಡಿ ಉಳುಮೆ ಮಾಡಿದ ರೈತನಿಗೆ ಖರ್ಚು ಮಾಡಿದ ಹಣವೂ ಮರಳಿ ಬಂದಿಲ್ಲ.

ಬೆಳೆಹಾನಿ ಮಾಹಿತಿ: ಬೆಳಗಾವಿ ತಾಲೂಕಿನಲ್ಲಿ 1,382 ಹೆಕ್ಟೇರ್, ಖಾನಾಪುರ ತಾಲೂಕಿನಲ್ಲಿ 743 ಹೆಕ್ಟೇರ್ ಹಾಗೂ ಕಿತ್ತೂರು ತಾಲೂಕಿನಲ್ಲಿ 25 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಮಳೆಗಾಹುತಿಯಾಗಿದೆ. ಆದರೆ, ಸರ್ಕಾರ ನೀಡುತ್ತಿರುವ ಪರಿಹಾರ ಮೊತ್ತ ರೈತರನ್ನು ಕಂಗಾಲಾಗಿಸಿದೆ. ಎಕರೆ ಕನಿಷ್ಠ 10ರಿಂದ 15 ಸಾವಿರ ರೂ. ಪರಿಹಾರ ನೀಡಬೇಕು ಎನ್ನುವುದು ರೈತರು ಆಗ್ರಹ. ರಾಷ್ಟ್ರೀಯ ಕೃಷಿ ಬೆಲೆ ಆಯೋಗದ ನಿಯಮದ ಪ್ರಕಾರ ರೈತರಿಗೆ ಸರ್ಕಾರ 20 ಸಾವಿರ ರೂ. ಆದರೂ ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

ಸಮೀಕ್ಷೆ ವರದಿ ಸಲ್ಲಿಸಿದ ಅಧಿಕಾರಿಗಳು: ಭತ್ತ ಬೆಳೆಯುವ ಬೆಳಗಾವಿ, ಖಾನಾಪುರ ಹಾಗೂ ಕಿತ್ತೂರು ತಾಲೂಕಿನಲ್ಲಿ ನವೆಂಬರ್ 21ರ ವರೆಗೆ ಬೆಳೆಹಾನಿ ಸಮೀಕ್ಷೆ ಮಾಡಲಾಗಿದ್ದು, 2,150 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿರುವ ಬಗ್ಗೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ನವೆಂಬರ್ 22ರಿಂದ ಮತ್ತೆ ಜಂಟಿ ಸಮೀಕ್ಷೆ ಕಾರ್ಯ ನಡೆಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಮಳೆಗೆ ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿಯಾಗಿದೆ. ಆದರೆ, ಸರ್ಕಾರ ಅವೈಜ್ಞಾನಿಕವಾಗಿ ಬೆಳೆ ಪರಿಹಾರ ನೀಡುತ್ತಿರುವುದು ಸರಿಯಲ್ಲ. ಕೊನೆ ಪಕ್ಷ ರೈತರಿಗೆ ಖರ್ಚು ಮಾಡಿದಷ್ಟು ಹಣವಾದರೂ ಪರಿಹಾರ ಹಣ ಮೂಲಕ ರೈತರ ಕೈ ಸೇರಬೇಕು ಎನ್ನುತ್ತಾರೆ ಬೆಳಗಾವಿ ಜಿಲ್ಲಾ ರೈತ ಮುಖಂಡ ಚೂನಪ್ಪ ಪೂಜಾರಿ.

ಒಂದು ಎಕರೆ ಭತ್ತ ಬೆಳೆಯಲು ರೈತರು ಏನಿಲ್ಲ ಅಂದರೂ 15 ಸಾವಿರ ರೂ. ಖರ್ಚು ಮಾಡಿದ್ದಾರೆ. ಆದರೆ, ಹೆಕ್ಟೇರ್‌ಗೆ ಕೇವಲ 6,800 ರೂ. ಪರಿಹಾರ ನಿಗದಿ ಮಾಡಿದ್ದಾರೆ. ಯಾವ ಮಾನದಂಡ ಅನುಸರಿಸಿದ್ದಾರೆ ಎಂದು ತಿಳಿಯುತ್ತಿಲ್ಲ.| ಜಯಶ್ರೀ ಗುರಣ್ಣವರ ರೈತ ಹೋರಾಟಗಾರ್ತಿ, ಬೆಳಗಾವಿ
ಕಳೆದ ವಾರ ಬೆಳಗಾವಿ ಜಿಲ್ಲೆಯಲ್ಲಿ ಸುರಿದ ಮಳೆಗೆ ಕಟಾವಿಗೆ ಬಂದ ಭತ್ತ ಹಾನಿಯಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ ಮಾರ್ಗ ಸೂಚಿಯನ್ವಯ 1 ಹೆಕ್ಟೇರ್ ಮಳೆಯಾಶ್ರಿತ ಭತ್ತ ಬೆಳೆಹಾನಿಗೆ 6,800 ರೂ. ನಿಗದಿ ಮಾಡಲಾಗಿದೆ. ಬೆಳೆಹಾನಿ ಸಮೀಕ್ಷೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಸರ್ಕಾರದ ಮಾರ್ಗಸೂಚಿಯನ್ವಯ ಪರಿಹಾರ ಹಣ ವಿತರಿಸುತ್ತಿದ್ದೇವೆ.| ಶಿವನಗೌಡ ಪಾಟೀಲ ಕೃಷಿ ಇಲಾಖೆ ಜಂಟಿ ನಿರ್ದೇಶಕ, ಬೆಳಗಾವಿ

| ಜಗದೀಶ ಹೊಂಬಳಿ