ನ್ಯೂಸ್

ಬಿಡ್ಲ್ಯೂಎಸ್‌ಎಸ್‌ಬಿ ಕಿಯಾಸ್ಕ್‌ನಲ್ಲಿದ್ದ 2.94 ಲಕ್ಷ ರೂ. ಕಳವು

ಬೆಂಗಳೂರು: ಬನಶಂಕರಿಯ ಬಿಡಬ್ಲ್ಯೂಎಸ್‌ಎಸ್‌ಬಿ ಕಚೇರಿ ಬಳಿ ನೀರಿನ ಬಿಲ್ ಪಾವತಿಸಲು ಅಳವಡಿಸಿರುವ ಕಿಯಾಸ್ಕ್ ಮುರಿದ ದುಷ್ಕರ್ಮಿಗಳು 2.94 ಲಕ್ಷ ರೂ. ಕಳವು ಮಾಡಿದ್ದಾರೆ.
ಬಿಡಬ್ಲ್ಯೂಎಸ್‌ಎಸ್‌ಬಿ ಕಚೇರಿಯ ಕಾರ್ಯನಿರ್ವಾಹಕ ಅಧಿಕಾರಿ ನಹೀಮ್ ಉಲ್ಲಾ ಶರ್ೀ ಎಂಬುವರು ಕೊಟ್ಟ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾರ್ವಜನಿಕರು ನೀರಿನ ಬಿಲ್ ಪಾವತಿಸಲು ಬನಶಂಕರಿ 3ನೇ ಹಂತದ ಬನಗಿರಿನಗರದಲ್ಲಿರುವ ಬಿಡಬ್ಲ್ಯೂಎಸ್‌ಎಸ್‌ಬಿ ಕಚೇರಿ ಬಳಿ ಕಿಯೋಸ್ಕ ಯಂತ್ರ ಅಳವಡಿಸಲಾಗಿದೆ. ಜನರು ಯಂತ್ರದಲ್ಲಿ ಪಾವತಿಸಿದ ನೀರಿನ ಬಿಲ್ ಹಣವನ್ನು ಸಿಬ್ಬಂದಿ ಲಕ್ಷ್ಮಿಪುತ್ರ ನಿಂಗಪ್ಪ ಎಂಬುವರು ತೆಗೆದುಕೊಂಡು ಬ್ಯಾಂಕಿಗೆ ಸಂದಾಯ ಮಾಡುತ್ತಾರೆ. ರಜಾ ದಿನಗಳಲ್ಲಿಯೇ ಹೆಚ್ಚಿನ ಸಂಖ್ಯೆಯ ಜನರು ಬಿಲ್ ಪಾವತಿಸುತ್ತಾರೆ. ಹೀಗಾಗಿ ಯಂತ್ರದಲ್ಲಿ ಬೇಗ ಹಣ ತುಂಬುತ್ತದೆ.

ಸೆ.26 ನಾಲ್ಕನೆ ಶನಿವಾರ ಹಾಗೂ 27ರಂದು ಭಾನುವಾರದ ರಜೆ ಇದ್ದು, ಶನಿವಾರದಂದು ಜನರು ಪಾವತಿಸಿದ ಹಣವನ್ನು ಲಕ್ಷ್ಮಿಪುತ್ರ ನಿಂಗಪ್ಪ ಅವರು ತೆಗೆದಿದ್ದರು. ಅದನ್ನು ಲೆಕ್ಕ ಮಾಡಿದ್ದು 2.94 ಲಕ್ಷ ರೂ. ಯಂತ್ರದ ಪಕ್ಕದಲ್ಲಿನ ಡಬ್ಬಿಯಲ್ಲಿ ಇಟ್ಟು ಹೋಗಿದ್ದರು. ಸೆ.29ರಂದು ಹಣ ತೆಗೆದುಕೊಳ್ಳಲು ಹೋದಾಗ ನಾಪತ್ತೆಯಾಗಿರುವುದು ಕಂಡು ಬಂದಿದೆ. ದುಷ್ಕರ್ಮಿಗಳು ಕಿಯೋಸ್ಕ ಯಂತ್ರವನ್ನು ಜಖಂಗೊಳಿಸಿ ಕಳವು ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.