ಕೋಲಾರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದವರನ್ನು ಕಾಂಗ್ರೆಸ್ಗೆ ಸೇರಿಸಿಕೊಂಡಿರುವ ಉದ್ದೇಶವನ್ನು ಹೈಕಮಾಂಡ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಂಗಳ ಒಳಗೆ ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಗಡುವು ನೀಡಿದರು.
ನಗರ ನಿವಾಸದ ಬಳಿ ಶನಿವಾರ ಬೆಂಬಲಿಗರ ಸಭೆ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಅನ್ನು ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಕಟ್ಟಿ ಬೆಳೆಸಿದ್ದೇವೆ. ಅನ್ಯ ಪಕ್ಷಗಳಿಂದ ನಾನೇ ಕರೆತಂದ ನಾಯಕರು ಇಂದು ನನ್ನ ವಿರುದ್ಧ ಸೆಟೆದು ನಿಂತಿದ್ದಾರೆ. ಶಕುನಿ ಪಾತ್ರ ನಿರ್ವಹಿಸುತ್ತಿರುವ ರಮೇಶ್ಕುಮಾರ್ ಸೋನಿಯಾ, ರಾಹುಲ್ಗಾಂಧಿ ಸೇರಿ ಇತರ ದೆಹಲಿ ನಾಯಕರ ಬಳಿ ಏನು ಹೇಳಿ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಚಿಂತಾಮಣಿಯ ಡಾ.ಎಂ.ಸಿ.ಸುಧಾಕರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಮಾಡಿದ್ದಾರೋ ತಿಳಿಯದು. ಪಕ್ಷದ ಕಾರ್ಯಕಾರಿಣಿಯ ಕಾಯಂ ಸದಸ್ಯನಾಗಿದ್ದರೂ, ನನ್ನನ್ನು ಕತ್ತಲಲ್ಲಿಟ್ಟು ತರಾತುರಿಯಲ್ಲಿ ಅವರಿಬ್ಬರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಅಗತ್ಯತೆ, ಅನಿವಾರ್ಯತೆ ಏನಿತ್ತು ಎಂದು ಪ್ರಶ್ನಿಸಿದರು.
ಶೀಘ್ರದಲ್ಲೇ ಹೈಕಮಾಂಡ್ ಮತ್ತು ರಾಜ್ಯದ ನಾಯಕರಿಗೆ ಜ್ಞಾನೋದಯವಾಗಲಿದೆ. ನಾನು ಕಾಂಗ್ರೆಸ್ ಬಿಟ್ಟು ಯಾವ ಪಕ್ಷಕ್ಕೂ ಸೇರುವುದಿಲ್ಲ. ಅವರಂತೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಎಂಎಲ್ಸಿ ಚುನಾವಣೆಯಲ್ಲಿ ಜೆಡಿಎಸ್ಗೆ ಮತ ಹಾಕಿಸಿ ರಾಜಕಾರಣ ಮಾಡಿಲ್ಲ. 30 ವರ್ಷ ನನ್ನನ್ನು ಬೆಳೆಸಿದ ಕಾರ್ಯಕರ್ತರು, ಮುಖಂಡರ ತೀಮಾರ್ನದಂತೆ ನಡೆದುಕೊಳ್ಳುತ್ತೇನೆ. ನಾನು ಸೋತ ಕಾರಣಕ್ಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ನಲ್ಲಿ ನಾವಿರಬೇಕಾ ಅಥವಾ ಕೆ.ಎಚ್.ಮುನಿಯಪ್ಪ ಇರಬೇಕಾ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೇಳುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಶಕುನಿ ಪಾತ್ರ ಮಾಡುತ್ತಿರುವ ರಮೇಶ್ ಕುಮಾರ್ಗೆ ಮುಂದೆ ಇದಕ್ಕೆ ಉತ್ತರ ಸಿಗಲಿದೆ. ಜಿಲ್ಲೆಯ ಎಲ್ಲ ಶಾಸಕರಿಗೆ ಮಾಟ- ಮಂತ್ರ ಮಾಡಿಸಿ ತನ್ನ ಕಪಿಮುಷ್ಠಿಯಲ್ಲಿ ಇರಿಸಿಕೊಂಡಿದ್ದು, ಜಿಲ್ಲೆಯಲ್ಲಿ ಯಾರೂ ಮಂತ್ರಿ ಆಗಬಾರದು ಎಂಬ ನಿಟ್ಟಿನಲ್ಲಿ ಪಾತ್ರವಹಿಸಿದ್ದಾರೆ. ಪಾಂಡವರ ವನವಾಸ ಮುಗಿಯುತ್ತಾ ಬಂದಿದ್ದು, ಮುಂದೆ ಯುದ್ಧ ಆರಂಭವಾಗಲಿದೆ. ಶಕುನಿ, ದುಯೋರ್ಧನ, ದುಶ್ಯಾಸನ ಎಲ್ಲರೂ ಹತರಾಗಲಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೆ, ಪಕ್ಷ ಕಟ್ಟಿ ಬೆಳೆಸಿದವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ತಿಳಿಸಿದರು.
ಏಕಪಾತ್ರಾಭಿನಯ ಮಾಡುತ್ತಿರುವ ರಮೇಶ್ ಕುಮಾರ್ಗೆ ಮುಂದೆ ಜನರೇ ಉತ್ತರ ಕೊಡುತ್ತಾರೆ. ರಮೇಶ್ ಕುಮಾರ್ ಮಾತಿಗೆ ಎಲ್ಲರೂ ಮೂರ್ಖರಾಗಿದ್ದಾರೆ. ನನ್ನಿಂದ ಎಲ್ಲ ರೀತಿಯ ಸಹಾಯ, ಸಹಕಾರ ಪಡೆದು ಶಾಸಕರಾಗಿ ಮೆರೆಯುತ್ತಿರುವ ಮಾಲೂರಿನ ಕೆ.ವೈ.ನಂಜೇಗೌಡ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಉದಾಹರಣೆಯಾಗಿದ್ದಾರೆ. ಪಕ್ಷದ ಧರ್ಮಯುದ್ಧದಲ್ಲಿ ಕೃಷ್ಣನ ಸಹಕಾರದಿಂದ ಪಾಂಡವರು ಗೆಲ್ಲಲಿದ್ದಾರೆ. ನಾನು ಯಾರ ಬಳಿಯೂ ಸಮಯ ಕೇಳಿಲ್ಲ. ಎಲ್ಲವನ್ನೂ ಕಾಲವೇ ರ್ನಿಣಯ ಮಾಡಲಿದೆ. ಸ್ವಲ್ಪ ದಿನ ನಾವು ಶಾಂತರಾಗಿರೋಣ ಎಂದು ಮುಖಂಡರಲ್ಲಿ ಮನವಿ ಮಾಡಿಕೊಂಡರು.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲ ತಾಲೂಕು ಮುಖಂಡರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ವಿವಿಧ ಘಟಕಗಳ ಪದಾಧಿಕಾರಿಗಳು ಸೇರಿ 1 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು ಶೀಘ್ರ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಪಕ್ಷಕ್ಕೆ ನೀವು ಬೇಡವೆಂದ ಮೇಲೆ ನಿಮ್ಮ ಮತ್ತು ನಮ್ಮೆಲ್ಲರ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ನಿಸಾರ್ ಅಹ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಮುಖಂಡರಾದ ಜೆ.ವಿ.ಕೃಷ್ಣಾ, ಚಿಂತಾಮಣಿಯ ಮುದ್ದುಕೃಷ್ಣಾ, ಕೃಷ್ಣೇಗೌಡ, ಜಯದೇವ್ ಇತರರು ಇದ್ದರು.
ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿಯನ್ನು ಪಕ್ಷದಲ್ಲಿ ಬೆಳೆಸಿ, ಗೆಲ್ಲುವಂತೆ ಮಾಡಿದೆ. ಕೊತ್ತೂರು ಮಂಜುನಾಥ್ ಗೆಲುವಿನಲ್ಲೂ ಪಾತ್ರವಹಿಸಿದ್ದೆ. ರಮೇಶ್ ಕುಮಾರ್ ಕಾಂಗ್ರೆಸ್ ಸೇರ್ಪಡೆ ಸಂದರ್ಭದಲ್ಲೂ ಸಹಕರಿಸಿದ್ದೆ. ಆದರೆ ಅವರು ನನ್ನ ಮತ್ತು ಕಾಂಗ್ರೆಸ್ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಚೌಡರೆಡ್ಡಿ ಅವರ ಪುತ್ರ ಸುಧಾಕರರೆಡ್ಡಿ ಕಾಂಗ್ರೆಸ್ನಲ್ಲಿದ್ದಾಗ ಗೆದ್ದಿದ್ದರು. ಅವರಿಗೆ ಕಾಂಗ್ರೆಸ್ ಅನಿವಾರ್ಯ. ಹೀಗಾಗಿ ಕೊತ್ತೂರು ಜತೆ ಸೇರಿ ಕಾಡಿಬೇಡಿ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇವರೆಲ್ಲರ ಬಂಡವಾಳ ಗೊತ್ತಿದೆ.
ಕೆ.ಎಚ್.ಮುನಿಯಪ್ಪ, ಕೇಂದ್ರ ಮಾಜಿ ಸಚಿವ