ಬೈಲಕುಪ್ಪೆ: ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಯಾವುದೇ ಸೈದ್ಧಾಂತಿಕ ನೆಲೆಗಟ್ಟಿಲ್ಲ. ಆದ್ದರಿಂದ ಜನಸಾಮಾನ್ಯರ ಕಷ್ಟಗಳು ಅವರಿಗೆ ಅರಿವಾಗುತ್ತಿಲ್ಲ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆರೋಪಿಸಿದರು.
ತಾಲೂಕಿನ ದೊಡ್ಡ ಹೊನ್ನೂರು ಗ್ರಾಮದಲ್ಲಿ ಬೈಲಕುಪ್ಪೆ ಕಾಂಗ್ರೆಸ್ ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಮತ್ತು ಜೆಡಿಎಸ್ ಜನಸಾಮಾನ್ಯರ ಬವಣೆ ಅರ್ಥ ಮಾಡಿಕೊಳ್ಳದೆ ಸ್ವಾರ್ಥ ಮತ್ತು ಭ್ರಷ್ಟಾಚಾರ ಆಡಳಿತ ನಡೆಸಲು ಹವಣಿಸುತ್ತಿವೆ. ಎರಡು ಪಕ್ಷಗಳು ಸಂವಿಧಾನಾತ್ಮಕ ಮತ್ತು ಪ್ರಜಾಸತ್ತಾತ್ಮಕ ಸಿದ್ಧಾಂತಗಳನ್ನು ಗಾಳಿಗೆ ತೂರಿ ಆಡಳಿತ ನಡೆಸಿ ಜನಸಾಮಾನ್ಯರ ಮೇಲೆ ಇಲ್ಲಸಲ್ಲದ ಕಾಯ್ದೆಗಳನ್ನು ಜಾರಿಗೊಳಿಸಿ ಸಂಕಷ್ಟಕ್ಕೆ ದೂಡಲು ಹುನ್ನಾರ ನಡೆಸಿವೆ. ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಾರದೆ ವಾಮಮಾರ್ಗಗಳ ಮೂಲಕ ಆಡಳಿತ ನಡೆಸುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರಿಗೆ ಉಪಯುಕ್ತವಾದ ಯೋಜನೆಗಳನ್ನು ಅನುಷ್ಠಾನಗೊಳಿಸಿತ್ತು. ಈ ಯೋಜನೆಗಳು ಇಂದಿಗೂ ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪುತ್ತಿದೆ. ಶಾಸಕ ಕೆ.ವೆಂಕಟೇಶ್ ತಾಲೂಕಿನ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂ. ಅನುದಾನ ತಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ಜಯ ಸಾಧಿಸಬೇಕಾಗಿತ್ತು. ಆದರೆ, ಕಾರ್ಯಕರ್ತರು ಮೈ ಮರೆತ್ತಿದ್ದರಿಂದ ಸೋಲು ಅನುಭವಿಸಬೇಕಾಯಿತು. ಇಂತಹ ಪರಿಸ್ಥಿತಿ ಮುಂದೆ ಬಾರದಂತೆ ಜಾಗ್ರತೆ ವಹಿಸಬೇಕು. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿ ಸರ್ಕಾರ ರಚಿಸುವುದು ಖಚಿತ ಎಂದರು.
ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಡವರ, ಕಾರ್ಮಿಕರ ಹಿತ ಕಾಯಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಹೇಳಿದರು.
ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ, ಜೆಡಿಎಸ್ ಅವಕಾಶವಾದಿ ರಾಜಕಾರಣ ಮಾಡುತ್ತಿವೆ. ಇವರಿಗೆ ಕೇವಲ ಅಧಿಕಾರ ಮುಖ್ಯವಾಗಿದ್ದು ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲದಾಗಿದೆ. ಮತದಾರರು ಈ ಎರಡು ಪಕ್ಷಗಳನ್ನು ಕಿತ್ತೊಗೆಯಲು ಮನಸ್ಸು ಮಾಡಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ಮಾಜಿ ಶಾಸಕ ಕೆ.ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಭೂತನಹಳ್ಳಿ ಕರಿಗೌಡ ಮಾತನಾಡಿದರು. ಬೈಲಕುಪ್ಪೆಯಿಂದ ಹೊನ್ನೂರು ಗೇಟ್‌ವರೆಗೆ ರೋಡ್ ಶೋ ಮೂಲಕ ಮುಖಂಡರನ್ನು ವೇದಿಕೆಗೆ ಕರೆತರಲಾಯಿತು.
ಮುಖಂಡರಾದ ಸಮಿವುಲ್ಲಾ ಖಾನ್, ಟಿ.ಡಿ.ಗಣೇಶ್, ನಿತಿನ್ ವೆಂಕಟೇಶ್, ಡಿ.ಟಿ.ಸ್ವಾಮಿ, ಅನಿತಾ ತೋಟಪ್ಪ ಶೆಟ್ಟಿ, ಕೆ.ಹೊಲದಪ್ಪ, ರೆಹಮತ್‌ಜಾನ್ ಬಾಬು, ಸುಮಾ, ಗೀತಾ, ಕಲ್ಯಾಣಪ್ಪ, ಪಿ.ಮಹದೇವ್, ಜವರಪ್ಪ, ಈಶ್ವರ, ಸುಬ್ರಹ್ಮಣ್ಯ, ನಿಸಾರ, ರಘು, ಮಂಜು, ರಾಜು, ನವೀನ್, ಮಹೇಶ್, ಗಣೇಶ್, ಮಂಜೇಶ್, ಪಿ.ಪಿ.ಮಹದೇವ್ ಹಾಜರಿದ್ದರು.