ಬಾಳೆಹೊನ್ನೂರು ಸಮೀಪದ ಬಿಕ್ಕರಣೆ ಬಳಿ ಹಳ್ಳದ ಬಳಿ ಪ್ರತ್ಯಕ್ಷಗೊಂಡ ಕಾಡಾನೆಗಳ ಹಿಂಡು. 
ನ್ಯೂಸ್

ಬಿಕ್ಕರಣೆ, ಸಾರಗೋಡಿನಲ್ಲಿ ಕಾಡಾನೆ ಹಿಂಡು ಪತ್ತೆ

ಬಾಳೆಹೊನ್ನೂರು: ಚಿಕ್ಕಮಗಳೂರು ತಾಲೂಕಿನ ಹುಯಿಗೆರೆ ಗ್ರಾಮದ ಬಿಕ್ಕರಣೆ ಹಾಗೂ ಕುಂದೂರು ಸಮೀಪದ ಸಾರಗೋಡು ಗ್ರಾಮದಲ್ಲಿ ಸೋಮವಾರ ಕಾಡಾನೆಗಳ ಹಿಂಡು ಪತ್ತೆಯಾಗಿದ್ದು ಗ್ರಾಮಸ್ಥರು ಆತಂಕಕ್ಕೆ ಈಡಾಗಿದ್ದಾರೆ.
ಹುಯಿಗೆರೆ ಸಮೀಪದ ಬಿಕ್ಕರಣೆ, ಸಾರಗೋಡು ಬಳಿ ಕೆಲವು ತೋಟಗಳಲ್ಲಿ ಏಳು ಕಾಡಾನೆಗಳು ಕಾಣಿಸಿಕೊಂಡಿದ್ದು ರೈತರ ಕಾಫಿ, ಅಡಕೆ ಸೇರಿದಂತೆ ವಿವಿಧ ಬೆಳೆ ಹಾನಿಗೊಳಿಸಿವೆ. ಹುಲಿಗೆಹಳ್ಳ ಎಂಬಲ್ಲಿ ಸೋಮವಾರ ಬೆಳಗ್ಗೆ ಹತ್ತಕ್ಕೂ ಅಧಿಕ ಕಾಡಾನೆಗಳ ಹಿಂಡು ಹಳ್ಳದ ಸಮೀಪದಲ್ಲಿ ಇರುವುದು ಪತ್ತೆಯಾಗಿದೆ.
ಈ ಭಾಗದಲ್ಲಿ ಹಲವು ಸಮಯದಿಂದ ಕಾಡಾನೆಗಳು ಆಗಾಗ ದಾಳಿ ಮಾಡುತ್ತಿದ್ದು ಇದೀಗ ಹತ್ತಾರು ಕಾಡಾನೆಗಳು ಒಮ್ಮೆಗೆ ಪ್ರತ್ಯಕ್ಷವಾಗಿರುವುದರಿಂದ ಜನರು ಆತಂಕಗೊಂಡಿದ್ದಾರೆ. ಗ್ರಾಮಸ್ಥರು ಕಾಡಾನೆಗಳನ್ನು ಕಾಡಿಗೆ ಅಟ್ಟುವ ಪ್ರಯತ್ನ ನಡೆಸಿದರೂ ಸಹ ಆನೆಗಳು ತೋಟವನ್ನು ಬಿಟ್ಟು ಕದಲುತ್ತಿಲ್ಲ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.