ಬಾಳೆಹೊನ್ನೂರು: ಪಟ್ಟಣ ವ್ಯಾಪ್ತಿಯಲ್ಲಿ ಸುಗಮ ಪಾರ್ಕಿಂಗ್ ವ್ಯವಸ್ಥೆಗೆ ಪೊಲೀಸ್ ಇಲಾಖೆ ಹಾಗೂ ಗ್ರಾಪಂ ಆದ್ಯತೆ ನೀಡಲಿದೆ ಎಂದು ಪಿಎಸ್‌ಐ ರವೀಶ್ ತಿಳಿಸಿದರು.
ಪಟ್ಟಣ ವ್ಯಾಪ್ತಿಯಲ್ಲಿ ಬಿ.ಕಣಬೂರು ಗ್ರಾಪಂ, ಪೊಲೀಸ್ ಇಲಾಖೆ ಹಾಗೂ ದಾನಿಗಳ ಸಹಕಾರದಲ್ಲಿ ತಯಾರುಗೊಳಿಸಿದ ಪಾರ್ಕಿಂಗ್ ಬೋರ್ಡ್‌ಗಳನ್ನು ಅಳವಡಿಸಿ ಮಾತನಾಡಿದ ಅವರು, ಪಟ್ಟಣ ವ್ಯಾಪ್ತಿಯಲ್ಲಿ ವಾರದಲ್ಲಿ ಒಂದೊಂದು ದಿನ ಒಂದೊಂದು ಕಡೆಯಲ್ಲಿ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳನ್ನು ಸುಗಮವಾಗಿ ಪಾರ್ಕಿಂಗ್ ಮಾಡಲು ಲಕಗಳನ್ನು ದಾನಿಗಳ ಸಹಕಾರ ಪಡೆದು ಅಳವಡಿಸಲಾಗಿದೆ. ಕೊಪ್ಪ ರಸ್ತೆಯಿಂದ ರೋಟರಿ ವೃತ್ತದವರೆಗೆ 40 ಪಾರ್ಕಿಂಗ್ ಬೋರ್ಡ್‌ಗಳನ್ನು ಅಳವಡಿಸಿದ್ದು, ಎನ್.ಆರ್.ಪುರ ರಸ್ತೆ ಸೇರಿದಂತೆ ವಿವಿಧೆಡೆಗಳಲ್ಲಿ ಇನ್ನೂ 30 ಬೋರ್ಡ್‌ಗಳನ್ನು ಅಳವಡಿಸಲು ಸ್ಥಳ ಗುರುತಿಸಲಾಗಿದೆ ಎಂದು ತಿಳಿಸಿದರು.
ವಾಹನ ಚಾಲಕರು ದಿನಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿ ಆಯಾ ವಾಹನಗಳನ್ನು ನಿಲ್ಲಿಸಿ ಸಹಕರಿಸುವ ಮೂಲಕ ಉತ್ತಮವಾದ ಪಾರ್ಕಿಂಗ್ ವ್ಯವಸ್ಥೆಗೆ ಕೈಜೋಡಿಸಬೇಕಿದೆ. ನಿಗದಿತ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸದಿದ್ದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ವಾಹನಗಳ ಪಾರ್ಕಿಂಗ್ ಸೇರಿದಂತೆ ಎಲ್ಲ ಕಾನೂನು ಪೂರಕ ವ್ಯವಸ್ಥೆಗಳಲ್ಲಿ ಗ್ರಾಪಂ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿದೆ ಎಂದು ತಿಳಿಸಿದರು. ಬಿ.ಕಣಬೂರು ಗ್ರಾಪಂ ಸದಸ್ಯ ಮಹಮ್ಮದ್ ಜುಹೇಬ್, ಎಂ.ಜೆ.ಮಹೇಶ್ ಆಚಾರ್ಯ, ಮಾಜಿ ಅಧ್ಯಕ್ಷ ಜಾನ್ ಡಿಸೋಜಾ, ಗುತ್ತಿಗೆದಾರ ಸುಧಾಕರ್ ಮತ್ತಿತರರಿದ್ದರು.