ನ್ಯೂಸ್

ಬಾಲ್ಯವಿವಾಹ ನಡೆಯದಂತೆ ಅಧಿಕಾರಿಗಳು ನೋಡಿಕೊಳ್ಳಲಿ

ದಾವಣಗೆರೆ : ಜಿಲ್ಲೆಯಲ್ಲಿ ಬಾಲ್ಯವಿವಾಹದ ಒಂದೇ ಒಂದು ಪ್ರಕರಣವೂ ನಡೆಯದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಂಕರಪ್ಪ ಸೂಚಿಸಿದರು.

ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಂವಾದ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಮಕ್ಕಳ ದತ್ತು ಸ್ವೀಕಾರದ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಕಾರ್ಯಕ್ಕೆ ಎಲ್ಲ ಇಲಾಖೆಗಳೂ ಸಂಯೋಜನೆಯಿಂದ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ನಡೆಯದಂತೆ ನೋಡಿಕೊಂಡರೆ ರಾಜ್ಯಮಟ್ಟದಲ್ಲಿ ಜಿಲ್ಲೆಯ ಮರ್ಯಾದೆ ಉಳಿಯುತ್ತದೆ ಎಂದು ತಿಳಿಸಿದರು.

ಬಾಲ್ಯವಿವಾಹ ನಡೆಯದಂತೆ ನೋಡಿಕೊಳ್ಳುವುದು ಸಮಾಜದ ಎಲ್ಲರ ಜವಾಬ್ದಾರಿಯಾಗಿದೆ. ಹಾಗಾಗಿ ಈ ಪ್ರಯತ್ನದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಹಲವಾರು ಕಾಯ್ದೆಗಳನ್ನು ಅನ್ವಯಿಸಬಹುದಾಗಿದೆ. ಆ ಸಾಧ್ಯತೆಗಳ ಬಗ್ಗೆ ಯೋಚಿಸಿ ಮುಂದುವರಿಯಬೇಕು. ಇದೊಂದು ಗಂಭೀರ ವಿಷಯವಾಗಿದ್ದು ನಿರ್ಲಕ್ಷೃ ಮಾಡುವಂತಿಲ್ಲ ಎಂದರು.

ಮಗು ಶಾಲೆಯಲ್ಲಿದ್ದರೆ ಸುರಕ್ಷಿತವಾಗಿರುತ್ತದೆ. ಶಾಲೆಗೆ ಸರಿಯಾಗಿ ಬರುತ್ತಿದೆಯೆ ಎಂಬುದನ್ನು ಗಮನಿಸಬೇಕಾಗುತ್ತದೆ. ಈ ವಿಚಾರದಲ್ಲಿ ಪಾಲಕರು, ಮುಖ್ಯ ಶಿಕ್ಷಕರ ಜತೆಗೆ ಗ್ರಾಮ ಲೆಕ್ಕಿಗ, ಪಿಡಿಒ, ಕಂದಾಯ ನಿರೀಕ್ಷಕರ ಜವಾಬ್ದಾರಿಯೂ ಇದೆ ಎಂದು ಹೇಳಿದರು.