ನ್ಯೂಸ್

ಬಾಲ್ಯ ಅನುಭವಿಸಲು ಮಕ್ಕಳಿಗೆ ಅವಕಾಶ ನೀಡಿ : ಮೈಸೂರು ಪ್ರಾದೇಶಿಕ ಹೆಚ್ಚುವರಿ ಆಯುಕ್ತ ಪಿ.ಶಿವರಾಜು ಸಲಹೆ

ಮೈಸೂರು : ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದ ನಾನು ನಗರ ಪ್ರದೇಶಕ್ಕೆ ಬಂದು ಭಾಷಣ ಮಾಡುವಷ್ಟು ಬೆಳೆದಿದ್ದೇನೆ. ನಗರದಲ್ಲಿರುವ ನೀವು ಮಹಾನಗರಗಳಿಗೆ ಹೋಗಿ ಭಾಷಣ ಮಾಡುವ ಮಟ್ಟಿಗೆ ಬೆಳೆಯಬೇಕು ಎಂದು ಮೈಸೂರು ಪ್ರಾದೇಶಿಕ ಹೆಚ್ಚುವರಿ ಆಯುಕ್ತ ಪಿ.ಶಿವರಾಜು ಮಕ್ಕಳಿಗೆ ಸಲಹೆ ನೀಡಿದರು.


ಪಟ್ಟಣದ ಬಳೆ ಬಸವರಾಜಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ತಾಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುವೆಂಪು ಅವರ ಆಶಯದಂತೆ ಮಕ್ಕಳು ಭತ್ತ ತುಂಬುವ ಚೀಲಗಳಾಗದೆ ಭತ್ತ ಬೆಳೆಯುವ ಗದ್ದೆಗಳಾಗಬೇಕೆಂದು ತಿಳಿಸಿದರು.


ಮೊಟ್ಟೆಯಿಂದ ಮರಿ ತಾನಾಗಿಯೇ ಹೊರ ಬರಬೇಕೆ ವಿನಹ ಹೊರಗಿನವರ ಒತ್ತಡದಿಂದ ಹೊರಬರಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಇಂದಿನ ಸವಲತ್ತುಗಳನ್ನು ಉಪಯೋಗಿಸಿಕೊಂಡು ಸ್ವಂತ ಪರಿಶ್ರಮದಿಂದ ಮೇಲೆ ಬರಬೇಕು. ಪಾಲಕರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬಹುದು, ಆಸ್ತಿ ಸೇರಿದಂತೆ ಅವರಿಗೆ ಬೇಕಾದ ಎಲ್ಲವನ್ನೂ ಕೊಡಿಸಬಹುದು, ಆದರೆ ಬಾಲ್ಯವನ್ನು ಮತ್ತೊಮ್ಮೆ ತಂದುಕೊಡಲು ಸಾಧ್ಯವಿಲ್ಲ. ಹಾಗಾಗಿ ಮಕ್ಕಳಿಗೆ ಬಾಲ್ಯವನ್ನು ಅನುಭವಿಸಲು ಅವಕಾಶ ನೀಡಬೇಕೆಂದು ಸಲಹೆ ನೀಡಿದರು.


ಮಕ್ಕಳಿಗೆ ಹೇಳುವ ಮೊದಲು ನಾವು ಮನೆಯಲ್ಲಿ ಮೊಬೈಲ್ ಬಳಸುವುದನ್ನು ನಿಲ್ಲಿಸಬೇಕು. ಆಗ ಮಕ್ಕಳೂ ನಮ್ಮನ್ನು ಅನುಸರಿಸುತ್ತಾರೆ. ಮಕ್ಕಳು ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜತೆಗೆ ಅಂಕ ಗಳಿಕೆಗೂ ಪ್ರಾಮುಖ್ಯತೆ ನೀಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಲಾಲನಹಳ್ಳಿ ಶ್ರೀಗುರುಮಲ್ಲೇಶ್ವರ ದಾಸೋಹ ಮಠದ ಜಯದೇವಿ ತಾಯಿ ಮಾತನಾಡಿ, ಸಂಘದ ಕಾರ್ಯವನ್ನು ಪ್ರಶಂಶಿಸಿ ಸಮಾಜದ ಮಕ್ಕಳ ಜತೆಗೆ ಇತರ ಸಮಾಜದ ಮಕ್ಕಳನ್ನು ಸನ್ಮಾನಿಸಿರುವ ಕಾರ್ಯವನ್ನು ಶ್ಲಾಘಿಸಿದರಲ್ಲದೆ, ಮಕ್ಕಳು ಲಿಂಗಾಯತ ಧರ್ಮದ ಇಷ್ಟಲಿಂಗ ಪೂಜೆಯನ್ನು ಅಳವಡಿಸಿಕೊಂಡು ಓದಿನ ಕಡೆಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ತಿಳಿಸಿದರು.


ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಕೆಂಪರಾಜು, ತಾಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಆಲೂರು ಬಸವರಾಜ್, ತಾಲೂಕು ಅಧ್ಯಕ್ಷ ರಾಜಶೇಖರ್, ಗೌರವಾಧ್ಯಕ್ಷ ಬಿ.ಎಸ್.ಚನ್ನಬಸಪ್ಪ, ಕಾರ್ಯದರ್ಶಿ ಕೆ.ಬಿ.ಚಂದ್ರಶೇಖರ, ಖಜಾಂಚಿ ಗಂಗಾಧರ್ ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭುಸ್ವಾಮಿ, ತಾಲೂಕು ಸಂಘದ ಉಪಾಧ್ಯಕ್ಷರಾದ ಕೆ.ಎಂ.ಹೇಮೇಶ್, ಎಚ್.ಬಿ.ಅನಸೂಯಾರಾಣಿ, ವೀರಶೈವ ಮಹಾಸಭಾ ಉಪಾಧ್ಯಕ್ಷ ಅರುಣ್ ಬಿ.ನರಗುಂದ, ಪ್ರಧಾನ ಕಾರ್ಯದರ್ಶಿ ಗಡ್ಡಮಹೇಶ್, ಸಂಘದ ಪದಾಧಿಕಾರಿಗಳಾದ ಹರೀಶ್, ಯೋಗೇಶ್, ಕಲ್ಲೇಶ್, ಎಸ್.ಆರ್.ಯೋಗಾನಂದ, ಬಸವರಾಜು, ಪ್ರದೀಪ್‌ಕುಮಾರ್, ಜಯಕುಮಾರ್, ಲೋಕೇಶ್, ಅಂಕನಹಳ್ಳಿ ಸುರೇಶ್, ರುದ್ರಮೂರ್ತಿ, ಅಣ್ಣಾಜಪ್ಪ ಲೋಹಿತ್, ಹರೀಶ್, ರವೀಶ್, ಕಮಲಮ್ಮ, ಸಿಆರ್‌ಪಿ ರಾಜಶೇಖರ್ ಇನ್ನಿತರರು ಹಾಜರಿದ್ದರು.