ನ್ಯೂಸ್

ಬಾಲರಾಮ ಮೂರ್ತಿ ಪ್ರತಿಷ್ಠಾಪನಾ ವಾರ್ಷಿಕೋತ್ಸವ

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರಿಲ್ಲಿ ಬುಧವಾರ ಶ್ರೀರಾಮೋತ್ಸವ ಸಡಗರ ಮೇಳೈಸಿತ್ತು. ನಗರದ ವಿವಿಧೆಡೆ ಮರ್ಯಾದ ಪುರುಷೋತ್ತಮನ ಜಪ ಮಾಡಿ ಆರಾಧಿಸಲಾಯಿತು.

ಉತ್ತಮಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಗರದಲ್ಲೂ ವಿವಿಧ ಧಾರ್ಮಿಕ ಆಚರಣೆ, ಪೂಜಾ ಕಾರ್ಯಗಳು ಸಾಂಗವಾಗಿ ನೆರವೇರಿದವು. ಎಲ್ಲೆಡೆ ರಾಮನಾಮ ಸ್ಮರಣೆ, ಭಜನೆ, ರಾಮತಾರಕ ಹೋಮ, ಮಂದಿರಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಅರ್ಪಿಸಲಾಯಿತು.

ಹಲವು ಸಂಘಟನೆಗಳು ನಗರದ ವಿವಿಧೆಡೆ ದೀಪ ಹಚ್ಚಿ, ಸಿಹಿ, ಮಜ್ಜಿಗೆ, ಪಾನಕ, ಪ್ರಸಾದ ಹಂಚಿದರು. ಎಲ್ಲೆಲ್ಲೂ ಕೇಸರಿ ಬಣ್ಣದ ಬಾವುಟ, ಬಂಟಿಂಗ್‌ಗಳು ರಾರಾಜಿಸಿದವು. ಅಲ್ಲಲ್ಲಿ ರಾಮನಚಿತ್ರವುಳ್ಳ ಧ್ವಜ ಹಾರಾಡಿತು. ವಿವಿಧ ಸಂಘ-ಸಂಸ್ಥೆಗಳು ವಿವಿಧ ರೀತಿಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವ ಮೂಲಕ ಶ್ರೀರಾಮನ ಸ್ಮರಣೆ ಮಾಡಲಾಯಿತು.