ನ್ಯೂಸ್

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಎಲ್ಲರ ಹೊಣೆ

ಪಿರಿಯಾಪಟ್ಟಣ: ಬಾಲಕಾರ್ಮಿಕ ಪದ್ಧತಿಯಿಂದ ವಿದ್ಯಾರ್ಥಿ ಜೀವನ ಕಳೆಯಬೇಕಾದ ಅದೆಷ್ಟೋ ಬಾಲಕರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ನ್ಯಾಯಾಧೀಶ ಎಂ.ಆರ್.ಯೋಗೇಶ್ ಕಳವಳವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದು ಬಾಲ ಕಾರ್ಮಿಕ ಪದ್ಧತಿ ಜತೆಗೆ ಕಿಶೋರ ಕಾರ್ಮಿಕರು ಎಂದು ಕೂಡ ಗುರುತಿಸಲಾಗುತ್ತಿದೆ. ಆದ್ದರಿಂದ ಈ ಪದ್ಧತಿಯನ್ನು ಸಮಾಜದಿಂದ ಮುಕ್ತಗೊಳಿಸಬೇಕಾದ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದರು.

ಶಿಕ್ಷಣ ಪಡೆಯುವುದ ಪ್ರತಿಯೊಬ್ಬರ ಸಂವಿಧಾನಾತ್ಮಕ ಹಕ್ಕು. ಇದನ್ನು ವಿದ್ಯಾರ್ಥಿಗಳು ಅರಿಯಬೇಕು. ಬಾಲಕಾರ್ಮಿಕ ಪದ್ಧತಿಯನ್ನು ಪ್ರೋತ್ಸಾಹಿಸುವುದು ಮತ್ತು ಅದನ್ನು ಗಮನಿಸಿಯೂ ಸುಮ್ಮನಿರುವುದು ಅಪರಾಧಕ್ಕೆ ಪ್ರೇರಣೆ ನೀಡಿದಂತೆಯೇ. ಆದ್ದರಿಂದ ಅಂತಹ ಪ್ರಕರಣಗಳು ಕಂಡು ಬಂದರೆ ತಕ್ಷಣ ಸಂಬಂಧಪಟ್ಟವರಿಗೆ ದೂರು ನೀಡಬೇಕು ಎಂದರು.

ಬಾಲ ಕಾರ್ಮಿಕ ಪದ್ಧತಿ ಒಂದೇ ಅಲ್ಲ, ಯಾವುದೇ ಅಪರಾಧ ಪ್ರಕರಣಗಳಾಗಲಿ, ಅನ್ಯಾಯದ ವಿರುದ್ಧ ಪ್ರಾಧಿಕಾರದ ಅಧಿಕಾರಿಗಳು ದೂರು ಸ್ವೀಕರಿಸಲು ನಿರಾಕರಿಸಿದರೆ ನ್ಯಾಯಾಲಯಕ್ಕೆ ನೇರವಾಗಿ ದೂರು ನೀಡುವ ಅವಕಾಶವಿದೆ. ನ್ಯಾಯಾಲಯದ ಶಿಷ್ಟಾಚಾರ ಪಾಲಿಸಿ ದೂರು ನೀಡಬೇಕು ಎಂದು ತಿಳಿಸಿದರು.

ಪ್ರತಿಯೊಬ್ಬ ವಿದ್ಯಾರ್ಥಿಗಳು ತಂದೆ-ತಾಯಿಗೆ ಹೊರೆಯಾಗದಂತೆ ತಮ್ಮ ಸ್ಥಿತಿಗತಿ ಅರಿತು ಜೀವನ ನಡೆಸಬೇಕು. ಉನ್ನತ ಶಿಕ್ಷಣ ಪಡೆದು ಪ್ರತಿಯೊಬ್ಬರೂ ತಮ್ಮ ಆರ್ಥಿಕ ಸ್ವಾವಲಂಬಿಯಾಗಿ ಬದುಕುವ ಶಕ್ತಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಸತೀಶ್ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ಸಮಾಜದ ಅನಿಷ್ಟ ಪದ್ಧತಿಗಳಲ್ಲಿ ಒಂದಾಗಿದ್ದು, ಇದನ್ನು ದೂರ ಮಾಡಬೇಕು. ಪ್ರತಿಯೊಂದು ಮಗುವೂ ಶಿಕ್ಷಣದಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪಾಲಕರು ಇವುಗಳ ಸದುಪಯೋಗ ಪಡೆದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಜಾಗೃತಿ ಜಾಥಾವನ್ನು ನ್ಯಾಯಾಧೀಶರಾದ ಎಂ.ಆರ್.ಯೋಗೇಶ್ ಉದ್ಘಾಟಿಸಿದರು. ಶಿರಸ್ತೇದಾರ್ ಸಣ್ಣಸ್ವಾಮಿ, ಸಿಡಿಪಿಒ ಮಮತಾ, ವಕೀಲರ ಸಂಘದ ಖಜಾಂಚಿ ಮಾದೇಗೌಡ, ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಎಚ್.ಪಿ.ಮಲ್ಲಿಕಾರ್ಜುನ್, ಹಿರಿಯ ಕಾರ್ಮಿಕ ನಿರೀಕ್ಷಕ ಆರ್.ರವಿ, ವಕೀಲರಾದ ಬಿ.ಆರ್.ಗಣೇಶ್ ಮತ್ತಿತರರು ಹಾಜರಿದ್ದರು.