ಯಾವುದೇ ಜೀವಕೋಶ ಅನಿಯಂತ್ರಿತವಾಗಿ ಬೆಳೆದಾಗ ಮತ್ತು ವಿಭಜನೆಗೊಂಡಾಗ ಅಥವಾ ಹಳೆಯ ಜೀವಕೋಶಗಳು ಸಾಯದೆ ನಿಯಂತ್ರಣದಿಂದ ಹೊರಬಂದು ಹೊಸ ಅಥವಾ ಅಸಹಜ ಜೀವಕೋಶಗಳನ್ನು ರೂಪಿಸುತ್ತವೆ. ಹೆಚ್ಚುವರಿ ಜೀವಕೋಶಗಳು ಸಮೂಹವಾಗಿ ಮಾರ್ಪಟ್ಟು ಗಡ್ಡೆಯಾಗುತ್ತದೆ. ಯಾವುದೇ ರೀತಿಯಲ್ಲಿ ತಂಬಾಕು ಸೇವನೆ, ಮದ್ಯಪಾನ ಬಾಯಿಯ ಕ್ಯಾನ್ಸರ್ನ ಅತಿ ದೊಡ್ಡ ಕಾರಣ. ಇವು ಸೆಲ್ಯುಲರ್ ಡಿಎನ್ಎಗೆ ಹಾನಿ ಉಂಟುಮಾಡುವ ಮೂಲಕ ಕ್ಯಾನ್ಸರ್ಗೆ ಕಾರಣವಾಗುತ್ತವೆ. ತಂಬಾಕು ಮತ್ತು ಮದ್ಯ ಇವೆರಡನ್ನೂ ಬಳಸುವವರಲ್ಲಿ ಬಾಯಿಯ ಕ್ಯಾನ್ಸರ್ ಉಂಟಾಗುವ ಅಪಾಯವು ಬಳಸದೇ ಇರುವವರಿಗಿಂತ ಹೆಚ್ಚಿರುತ್ತದೆ. ಹ್ಯೂಮನ್ ಪ್ಯಾಪಿಲೋಮಾ ವೈರಸ್, ಕುಂದಿದ ರೋಗನಿರೋಧಕ ಶಕ್ತಿ, ಕುಪೋಷಣೆ ಕೂಡ ಕೆಲವು ಸಲ ಕ್ಯಾನ್ಸರ್ಗೆ ಕಾರಣವಾಗಬಹುದು. ತಂಬಾಕು ಉತ್ಪನ್ನಗಳಿಂದ ದೂರವಿರುವುದು, ಆಲ್ಕೋಹಾಲ್ ಬಳಕೆಯನ್ನು ಸೀಮಿತಗೊಳಿಸುವುದು ಮತ್ತು ಅತಿಯಾಗಿ ಪಾನ್ ಜಗಿಯುವುದನ್ನು ತಪ್ಪಿಸುವ ಮೂಲಕ ಬಾಯಿಯ ಕ್ಯಾನ್ಸರನ್ನು ತಡೆಯಬಹುದು.
ದಂತವೈದ್ಯರು ಆರಂಭಿಕ ಹಂತದಲ್ಲಿ ಬಯಾಪ್ಸಿ ಮೂಲಕ ರೋಗನಿರ್ಣಯ ಮಾಡಬಹುದು, ಅಂಗಾಂಶವು ಕ್ಯಾನ್ಸರ್ ಎಂದು ದೃಢಪಡಿಸಿದ ನಂತರ ಸಿ.ಟಿ., ಎಂಆರ್ಐ, ಪೆಟ್ನಂತಹ ಪರೀಕ್ಷೆಗಳನ್ನು ಸೂಚಿಸುತ್ತಾರೆ. ಬಾಯಿಯ ಕ್ಯಾನ್ಸರ್ಗೆ ಸಾಮಾನ್ಯವಾಗಿ ಇತರ ಕ್ಯಾನ್ಸರ್ನಂತೆ ಶಸ್ತ್ರಚಿಕಿತ್ಸೆಯ ಮೂಲಕ ಅಥವಾ ಶಸ್ತ್ರಚಿಕಿತ್ಸೆ, ವಿಕಿರಣ ಮತ್ತು ಕಿಮೋಥೆರಪಿಯ ಸಂಯೋಜನೆಯ ಮೂಲಕ ಚಿಕಿತ್ಸೆಯನ್ನು ನೀಡಬಹುದು. ಚಿಕಿತ್ಸೆಯ ವಿಧವು ವ್ಯಕ್ತಿಯ ಸಾಮಾನ್ಯ ಆರೋಗ್ಯದ ಮೇಲೂ ಅವಲಂಬಿತವಾಗಿರುತ್ತದೆ.
ಬಾಯಿಯ ಕ್ಯಾನ್ಸರ್ ಮತ್ತು ಚಿಕಿತ್ಸೆ ಬಾಯಿಯ ಇತರ ಹಲ್ಲುಗಳಿಗೆ ಸಮಸ್ಯೆಯನ್ನುಂಟು ಮಾಡುತ್ತದೆ. ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಅಲ್ಲದೆ ನಿಯಮಿತವಾಗಿ ದಂತವೈದ್ಯರ ಬಳಿ ಬಾಯಿಯನ್ನು ಪರೀಕ್ಷಿಸಿಕೊಳ್ಳುವುದರಿಂದ ಕ್ಯಾನ್ಸರ್ನಂತಹ ಮಹಾಮಾರಿಯನ್ನು ಆರಂಭಿಕ ಹಂತದಲ್ಲೇ ಗುರುತಿಸಿ ದೈನಂದಿನ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದು.