ಕುಶಾಲನಗರ: ಡಾ.ಬಾಬು ಜಗಜೀವನ ರಾಮ್ ಅವರು ಹಸಿರು ಕ್ರಾಂತಿ ಹರಿಕಾರ ಎಂದು ತಹಸೀಲ್ದಾರ್ ಟಿ.ಎಂ.ಪ್ರಕಾಶ್ ಬಣ್ಣಿಸಿದರು.
ಕುಶಾಲನಗರ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ದಿವಂಗತ ಡಾ.ಬಾಬು ಜಗಜೀವನರಾಮ್ ಅವರ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿನ ಅಸ್ಪಶ್ಯತೆ ಹೋಗಲಾಡಿಸುವಲ್ಲಿ ಬಾಬೂಜಿ ಕೊಡುಗೆ ಅಪಾರ. ಜಾತಿ ವ್ಯವಸ್ಥೆ ತೊಡೆದುಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು. ದೇಶದಲ್ಲಿ ಸಮರ್ಪಕವಾಗಿ ಎಲ್ಲರಿಗೂ ಆಹಾರ ದೊರೆಯದೇ ಇದ್ದಾಗ ಕೇಂದ್ರದಲ್ಲಿ ಕೃಷಿ ಸಚಿವರಾಗಿದ್ದಾಗ ಕೃಷಿಯಲ್ಲಿ ಗಣನೀಯ ಬದಲಾವಣೆ ತಂದರು. ಹಸಿರು ಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಮೇಲೆತ್ತಿದರು ಎಂದು ಬಣ್ಣಿಸಿದರು.
ಜಗಜೀವನರಾಮ್ ಅವರು ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು, ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮುರಾರ್ಜಿ ದೇಸಾಯಿ ಅವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು ಎಂದರು.
ಸಮಾಜ ಕಲ್ಯಾಣ ಇಲಾಖೆ ಬಾಲಕರ ವಸತಿ ನಿಲಯದ ಮೇಲ್ವಿಚಾರಕ ಎಚ್.ಎಸ್.ಮಧು ಮಾತನಾಡಿ, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಟ್ಟಿಗೆ ಭಾರತವನ್ನು ಸೇರಿಸುವಲ್ಲಿ ಜಗಜೀವನ ರಾಮ್ ಅವರ ಪಾತ್ರ ಮಹತ್ವದ್ದಾಗಿದೆ. ಸಾಮಾಜಿಕ ಸುಧಾರಣೆ, ಹಸಿರು ಕ್ರಾಂತಿ ಅಲ್ಲದೇ ಇನ್ನೂ ಹಲವಾರು ಕ್ಷೇತ್ರಗಳ ಅಭಿವೃದ್ಧಿಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ ಎಂದು ಹೇಳಿದರು.
ತಾಲೂಕು ಆಹಾರ ನಿರೀಕ್ಷಕಿ ಸ್ವಾತಿ, ಶಿರಸ್ತೇದಾರ್ ಅನಿತಾ, ಸಮಾಜ ಕಲ್ಯಾಣ ಇಲಾಖೆಯ ಎಚ್.ಎಲ್.ರವಿ ಇತರರು ಇದ್ದರು.