ನ್ಯೂಸ್

ಬಾಬೂಜಿ ತತ್ವಾದರ್ಶಗಳನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕಿದೆ : ತಾಲೂಕು ಬಾಬು ಜಗಜೀವನರಾಮ್ ಜನ ಕಲ್ಯಾಣ ಸಂಘದ ಅಧ್ಯಕ್ಷ ಮಲಿಯೂರು ಶಂಕರ್ ಹೇಳಿಕೆ


ಮೈಸೂರು : ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರ ತತ್ವ ಹಾಗೂ ಆದರ್ಶಗಳನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕಿದೆ ಎಂದು ತಾಲೂಕು ಬಾಬು ಜಗಜೀವನರಾಮ್ ಜನ ಕಲ್ಯಾಣ ಸಂಘದ ಅಧ್ಯಕ್ಷ ಮಲಿಯೂರು ಶಂಕರ್ ಹೇಳಿದರು.

ತಿ.ನರಸೀಪುರ ಪಟ್ಟಣದ ಪಿಡಬ್ಲುೃಡಿ ಅತಿಥಿಗೃಹದಲ್ಲಿ ಏರ್ಪಡಿಸಿದ್ದ ಡಾ.ಬಾಬು ಜಗಜೀವನ ರಾಮ್ ಅವರ 37ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಬಾಬೂಜಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿ ಮಾತನಾಡಿದರು.


ಬಾಬೂಜಿ ಅವರು ಸೃಷ್ಟಿಸಿದ ಹಸಿರು ಕ್ರಾಂತಿಯಿಂದ ದೇಶದಲ್ಲಿ ಬಡವರಿಗೆ ಆಹಾರದ ಕೊರತೆ ದೂರವಾಯಿತು. ಅಧಿಕಾರ ಮತ್ತು ಆಸ್ತಿಯಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ ಹಾಗೂ ತ್ಯಾಗದಿಂದ ಗಳಿಸಬಹುದೆಂದು ಬಾಬು ಜಗಜೀವನ ರಾಮ್ ಅವರ ಬದುಕು ತಿಳಿಸಿಕೊಡುತ್ತದೆ ಎಂದರು.
ಬಾಬೂಜಿ ಅವರ ನಿಸ್ವಾರ್ಥ ಸೇವೆ, ಸ್ವಾತಂತ್ರ್ಯ ಚಳವಳಿ ಮತ್ತು ಸಮರ್ಪಣಾ ಮನೋಭಾವದ ಹೋರಾಟದಿಂದ ಆದರ್ಶ ವ್ಯಕ್ತಿಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ ಎಂದರು.


ದಿವಂಗತ ಎನ್.ರಾಚಯ್ಯ ಅವರು ಮಾದಿಗ ಸಮುದಾಯದ ಧೀಮಂತ ನಾಯಕರಾಗಿದ್ದರು. ರಾಜ್ಯದಲ್ಲಿ ನಿರ್ಮಾಣಗೊಂಡಿರುವ ಅಂಗನವಾಡಿ ಶಾಲೆಗಳು ಅವರ ಕಲ್ಪನೆಯ ಕೂಸಾಗಿದ್ದು, ರಾಜ್ಯದ ಎಲ್ಲ ಅಂಗನವಾಡಿ ಶಾಲೆಗಳಲ್ಲಿ ಅವರ ಜನ್ಮದಿನ ಆಚರಿಸಲು ಸರ್ಕಾರ ಕ್ರಮ ಕೊಳ್ಳಬೇಕಿದೆ ಎಂದರು. ಸಂಘದ ಉಪಾಧ್ಯಕ್ಷ ಸಿದ್ದನಹುಂಡಿ ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ವಾಟಾಳ್ ಜಿ.ಎನ್.ಪುಟ್ಟಸ್ವಾಮಿ, ಬಿ.ಮಾದೇಶ್, ಬನ್ನೂರು ಪುರಸಭಾ ಸದಸ್ಯ ಶಿವಣ್ಣ, ಬಿ.ಮಹದೇವ, ಎನ್.ಡಿ. ರಾಚಪ್ಪ, ಎಂ.ಮೂರ್ತಿ, ರಾಜಣ್ಣ, ಎಂ. ಮಹದೇವಸ್ವಾಮಿ, ಶಿವು, ಕಾಂತರಾಜು, ನಿಂಗರಾಜು, ವಿ.ಎಸ್.ಶಿವಕುಮಾರ್, ಹುಣಸೂರು ಸಿದ್ದರಾಜು, ಲಿಂಗರಾಜು, ಶಿವರಾಜು, ವಡ್ಗಲಯ್ಯ, ಬಸವರಾಜು, ಸುರೇಶ, ಲಿಂಗರಾಜು, ರಮೇಶ್, ಮೂಗೂರು ಸಿದ್ದರಾಜು, ತಲಕಾಡು ಮಹದೇವ ಮತ್ತಿತರರಿದ್ದರು.