ಬಾಗಲಕೋಟೆ: ಬಾದಾಮಿ ತಾಲೂಕಿನ ಕೆರೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೨೦೨೨ರಲ್ಲಿ ನಡೆದಿದ್ದ ಕೊಲೆ ಒಂದರ ಪ್ರಕರಣ ಬೆನ್ನತ್ತಿದ್ದ ಪೊಲೀಸರು ಸುಫಾರಿ ಕಿಲ್ಲರ್ ಗ್ಯಾಂಗ್‌ವೊಂದನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ...!
ಕೊಲೆ ಮಾಡುವುದು, ಭೂವಿವಾದಗಳನ್ನು ಇತ್ಯರ್ಥ ಪಡಿಸುವುದು ಹಾಗೂ ಅಪಘಾತ ನಡೆಸಿ ಕೈಕಾಲು ಮುರಿಯುವುದಕ್ಕಾಗಿ ಈ ಗ್ಯಾಂಗ್ ಕಳೆದ ಹತ್ತು ವರ್ಷಗಳಿಂದ ಸುಫಾರಿ ಪಡೆಯುತ್ತಿರುವುದನ್ನು ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ ತನಿಖಾ ತಂಡವೂ ಪತ್ತೆ ಮಾಡಿದೆ ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ವಿಕಾಸಕುಮಾರ್ ವಿಕಾಸ್ ಸೋಮವಾರ ಎಸ್ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯ ಅನಗವಾಡಿ ಸೇತುವೆ ಬಳಿ ಘಟಪ್ರಭಾ ನದಿಯಲ್ಲಿ ಸಿಕ್ಕಿದ್ದ ಅಪರಿಚಿತ ಶವದ ಪ್ರಕರಣ ಬೆನ್ನುಹತ್ತಿದಾಗಿ ಈ ಕಿಲ್ಲರ್ ಗ್ಯಾಂಗ್ ಸಿಕ್ಕುಬಿದ್ದಿದೆ.
ಬಾಗಲಕೋಟೆ ತಾಲೂಕಿನ ಸೊಕನಾದಗಿ ಗ್ರಾಮದ ಪ್ರಕಾಶ್ ಕೃಷ್ಣಪ್ಪ ಮಾದರ, ಬಸವರಾಜ ಮಾದರ, ಗಣೇಶ್ ಮಾದರ, ಮಂಜುನಾಥ್ ಮಾದರ ಹಾಗೂ ಇವರ ಅಳಿಯ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ ಭೀರಪ್ಪ ಶೆಟ್ಟೆಪ್ಪ ಬರಗಿ ಸುಫಾರಿ ಕಿಲ್ಲರ್ ಗ್ಯಾಂಗ್‌ನ ಸದಸ್ಯರು ಆಗಿದ್ದಾರೆಂದು ಐಜಿಪಿ ಹೇಳಿದರು.
ಕಿಲ್ಲರ್ ಗ್ಯಾಂಗ್ ಒಟ್ಟು ಏಳು ಪ್ರಕರಣದಲ್ಲಿ ಬಾಗಿ ಆಗಿರುವ ಆರೋಪ ಹೊಂದಿದ್ದಾರೆ. ಕನಿಷ್ಠ ೩ ಲಕ್ಷ ರೂ.ಗಳಿಂದ ಗರಿಷ್ಠ ೩೦ ಲಕ್ಷ ರೂ.ಗಳ ವರೆಗೂ ಸುಫಾರಿ ಪಡೆದುಕೊಂಡು ಆಯಾ ದುಡ್ಡಿಗೆ ತಕ್ಕಂತೆ ಭೂ ವಿವಾದ, ಕೊಲೆ, ಗಾಯಗೊಳಿಸುವ ಕಾರ್ಯವನ್ನು ಮಾಡುತ್ತಿದ್ದರು ಎಂದು ಎಸ್ಪಿ ಅಮರನಾಥ ರೆಡ್ಡಿ ಹೇಳಿದ್ದಾರೆ.
ಈ ವರೆಗೂ ಒಟ್ಟು ಮೂರು ಕೊಲೆ ಪ್ರಕರಣದಲ್ಲಿ ಇವರು ಸುಫಾರಿ ಪಡೆದಿರುವುದು ಬೆಳಕಿಗೆ ಬಂದಿದೆ. ಹಾಗೆಯೇ ಕೆರೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಡರಕೊಪ್ಪ ಗ್ರಾಮದ ಕೊಲೆ ಪ್ರಕರಣದಲ್ಲಿ ಸುಫಾರಿ ಪಡೆದಿರುವ ಶಂಕೆಯೂ ವ್ಯಕ್ತವಾಗಿದ್ದು, ತನಿಖೆ ನಡೆಸಿದ್ದಾರೆ. ಮೂರು ಪ್ರಕರಣದಲ್ಲಿ ಕೊಲೆಯಾದವರ ದೇಹ ಸಿಕ್ಕಿದ್ದು, ಆ ಬಗ್ಗೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರಂತೆ.
ದೃಶ್ಯಂ ಮಾದರಿಯಲ್ಲಿ ತಪ್ಪಿಸಿಕೊಳ್ಳುವ ಗ್ಯಾಂಗ್ :
ದುಡ್ಡು ಪಡೆದು ಅಪರಾಧ ಕೃತ್ಯ ನಡೆಸಲು ಒಪ್ಪಿಕೊಳ್ಳುತ್ತಿದ್ದ ಆರೋಪಿಗಳು ದೃಶ್ಯಂ ಚಿತ್ರದಲ್ಲಿ ನಾಯಕ ಯಾವ ರೀತಿ ಕೊಲೆಯ ಸುಳಿವು ಸಿಗದಂತೆ ಪೊಲೀಸರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದರೋ ಅದೇ ರೀತಿ ಈ ಕಿಲ್ಲರ್ ಗ್ಯಾಂಗ್ ಸಹ ಸುಳಿವು ಸಿಗದಂತೆ ಎಚ್ಚರ ವಹಿಸಿ ಕೆಲಸ ಮಾಡುತ್ತಿದ್ದು ಎಂದು ತಿಳಿದು ಬಂದಿದೆ.
ವಿವಿಧ ಜಿಲ್ಲೆಗಳಲ್ಲೂ ಕೃತ್ಯ :
ಸದ್ಯ ಕಲಾದಗಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಇವರೆಲ್ಲ ಸಿಕ್ಕು ಬಿದ್ದಿದ್ದು, ಈ ರೀತಿ ವಿವಿಧ ಸುಫಾರಿಗಳನ್ನು ಪಡೆದು ಅಪರಾಧ ಕೃತ್ಯಗಳನ್ನು ನಡೆಸುತ್ತಿರುವ ಬಗ್ಗೆ ಬಾಗಲಕೋಟೆ ಮಾತ್ರವಲ್ಲದೇ ವಿಜಯಪುರ, ಬೆಳಗಾವಿ ಜಿಲ್ಲೆಯಲ್ಲೂ ಕೃತ್ಯ ನಡೆದಿದ್ದಾರೆ ಎನ್ನುವುದು ತನಿಖೆಯ ವೇಳೆ ಪೊಲೀಸರು ಬಾಯಿ ಬಿಡಿಸಿದ್ದಾರೆ.
ಮೂರು ಮದುವೆ ಆಗಿದ್ದ ಭೀರಪ್ಪ :
ಪ್ರಕರಣದ ಆರೋಪಿ ಭೀರಪ್ಪ ಬರಗಿ ಮೂರು ಮದುವೆ ಮಾಡಿಕೊಂಡಿದ್ದಾನೆ. ಈತನ ಕಿರುಕುಳದಿಂದ ಅವರೆಲ್ಲ ಮನೆಬಿಟ್ಟು ಬೇರೆ ಬೇರೆ ಕಡೆಗೆ ವಾಸ ಮಾಡುತ್ತಿದ್ದಾರೆ. ಇದರ ಜೊತೆಗೆ ಅಪ್ರಾಪ್ತೆಯನ್ನು ಅಪಹರಿಸಿ ಮಾನಸಿಕ, ದೈಹಿಕ, ಲೈಂಗಿಕವಾಗಿ ಕಿರುಕುಳ ನೀಡಿದ್ದಲ್ಲದೇ ಬಾಲಕಿಯ ಪೋಷಕರಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪವೂ ಇದೆ.
ಬಸವರಾಜ ಗ್ಯಾಂಗ್ ನ ಪ್ರಮುಖ :
ಸುಫಾರಿ ಕಿಲ್ಲರ್ ಗ್ಯಾಂಗ್ ನ ಪ್ರಮುಖ ಆರೋಪಿ ಬಸವರಾಜ್ ಮಾದರ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಸಹೋದರರು ಹಾಗೂ ಅಳಿಯನ ಜೊತೆ ಸೇರಿಸಿಕೊಂಡು ಅನೇಕ ಸುಫಾರಿ ಪ್ರಕರಣಗಳಲ್ಲಿ ಭಾಗಿ ಆಗಿದ್ದಾನೆ. ಇತನ ವಿರುದ್ಧ ಆರು ಪ್ರಕರಣಗಳು ಇವೆ. ಉಳಿದಂತೆ ಬಸವರಾಜನ ಸಹೋದರರಾದ ಪ್ರಕಾಶ ಅಣ್ಣನ ಜೊತೆ ಸೇರಿ ಇಂತ ಕೃತ್ಯಗಳಲ್ಲಿ ಭಾಗಿ ಆಗುತ್ತಿದ್ದ. ಇವನ ವಿರುದ್ಧ ಮೂರು ಕೇಸ್ ಗಳು ದಾಖಲಾಗಿವೆ. ಮತ್ತೊಬ್ಬ ಸಹೋದರ ಗಣೇಶ್ ವಿರುದ್ಧವೂ ೩ ಪ್ರಕರಣಗಳು ಇದ್ದರೆ, ಮಂಜುನಾಥ್ ವಿರುದ್ಧವೂ ಒಂದು ಪ್ರಕರಣ ದಾಖಲಾಗಿದೆ. ಈ ಮೂವರು ಸಹೋದರರು ಸಹ ತಮ್ಮ ಅಣ್ಣ ಬಸವರಾಜ ಜೊತೆ ಕೂಡಿಕೊಂಡು ಸುಫಾರಿ ಪಡೆಯುವ ಕೃತ್ಯದಲ್ಲಿ ಭಾಗಿಯಾಗುತ್ತಿದ್ದರು.