ನ್ಯೂಸ್

ಬಾಗಲಕೋಟೆ, ಮೈಸೂರು ಟೀಂ ಚಾಂಪಿಯನ್ಸ್

ಉತ್ತಮ ಪ್ರದರ್ಶನ ನೀಡಿದ ಬಾಗಲಕೋಟೆ ಮತ್ತು ಮೈಸೂರು ತಂಡಗಳು ಕ್ರಮವಾಗಿ ರಾಜ್ಯ ಮಟ್ಟದ ದಸರಾ ಸೈಕಲ್ ಪೋಲೋ ಸ್ಪರ್ಧೆಯ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದವು.

ದಸರಾ ಕ್ರೀಡಾ ಉಪ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಸೈಕಲ್ ಪೋಲೋ ಅಸೋಸಿಯೆಷನ್ ವತಿಯಿಂದ ನಗರದ ಗೌತಮ್ ಹಾಸ್ಟೆಲ್ ಗ್ರೌಂಡ್‌ನಲ್ಲಿ ಗುರುವಾರ ಆಯೋಜಿಸಿದ್ದ ಪುರುಷರ ವಿಭಾಗದ ಅಂತಿಮ ಪಂದ್ಯದಲ್ಲಿ ಬಾಗಲಕೋಟೆ ತಂಡ 9-0 ಗೋಲುಗಳಿಂದ ಚಾಮರಾಜನಗರ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆಯಿತು. ಇದರೊಂದಿಗೆ ಚಾಮರಾಜನಗರ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತು. ಮೂರನೇ ಸ್ಥಾನಕ್ಕೆ ನಡೆದ ಮತ್ತೊಂದು ಪಂದ್ಯದಲ್ಲಿ ಮೈಸೂರು ತಂಡ 4-2 ಗೋಲುಗಳಿಂದ ಬೆಂಗಳೂರು ತಂಡವನ್ನು ಮಣಿಸಿತು.

ಮೈಸೂರು ಪ್ರಥಮ: ಮಹಿಳಾ ವಿಭಾಗದ ಫೈನಲ್ ಪಂದ್ಯದಲ್ಲಿ ಮೈಸೂರು ತಂಡ 5-2 ಗೋಲುಗಳಿಂದ ಬೆಂಗಳೂರು ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆಯಿತು. ಈ ಸೋಲಿನೊಂದಿಗೆ ಬೆಂಗಳೂರು ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತು. ಮೂರನೇ ಸ್ಥಾನಕ್ಕೆ ನಡೆದ ಮತ್ತೊಂದು ಪಂದ್ಯದಲ್ಲಿ ಮಂಡ್ಯ ತಂಡ 3-0 ಗೋಲುಗಳಿಂದ ಬೆಳಗಾವಿ ತಂಡವನ್ನು ಮಣಿಸಿತು.

ಇದಕ್ಕೂ ಮುನ್ನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಪಂದ್ಯಾವಳಿಗೆ ಚಾಲನೆ ನೀಡಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಗೋಪಾಲಸ್ವಾಮಿ ಶಿಶುವಿಹಾರ ಸಂಸ್ಥೆಯ ಕಾರ್ಯದರ್ಶಿ ಎನ್.ಆರ್.ಮಂಜುನಾಥ್ ಇತರರಿದ್ದರು. ಇದೇ ವೇಳೆ ಅಂತಾರಾಷ್ಟ್ರೀಯ ವುಶು ಕ್ರೀಡಾ ಪದಕ ವಿಜೇತೆ ಎಸ್.ಎಂ.ಶಾನ್ವಿ ಅವರನ್ನು ಸನ್ಮಾನಿಸಲಾಯಿತು.