ತಿ.ನರಸೀಪುರ ತಾಲೂಕಿನ ಸೇನಾಪತಿಹಳ್ಳಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಪತಂಜಲಿ ಫುಡ್ ಲಿಮಿಟೆಡ್ ಸಹಯೋಗದಲ್ಲಿ ಆಯೋಜಿಸಿದ್ದ ತಾಳೆ ಬೆಳೆ ಕೃಷಿ ಪ್ರೋತ್ಸಾಹ ಅಭಿಯಾನ ಕಾರ್ಯಕ್ರಮಕ್ಕೆ ಮೈಸೂರು ವಿಭಾಗದ ತೋಟಗಾರಿಗೆ ಜಂಟಿ ನಿರ್ದೇಶಕ ಎಚ್.ಎಂ.ನಾಗರಾಜು ಚಾಲನೆ ನೀಡಿದರು. 
ನ್ಯೂಸ್

ಬಹೂಪಯೋಗಿ ತಾಳೆ ಬೆಳೆಯಲು ರೈತರು ಮುಂದಾಗಲಿ

ತಿ.ನರಸೀಪುರ: ರೈತರು ಕೇವಲ ಅಡಕೆ ಬೆಳೆಗಷ್ಟೇ ಒತ್ತು ಕೊಡದೆ ಬಹೂಪಯೋಗಿ ತಾಳೆ ಬೆಳೆಯುವಂತೆ ಮೈಸೂರು ವಿಭಾಗದ ತೋಟಗಾರಿಗೆ ಜಂಟಿ ನಿರ್ದೇಶಕ ಎಚ್.ಎಂ.ನಾಗರಾಜು ಕರೆ ನೀಡಿದರು.

ತಾಲೂಕಿನ ಸೇನಾಪತಿಹಳ್ಳಿ ಗ್ರಾಮದ ಎ.ಎಂ.ಮಂಜುನಾಥ್ ಅವರ ಜಮೀನಿನಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಪತಂಜಲಿ ಫುಡ್ ಲಿಮಿಟೆಡ್ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಳೆ ಬೆಳೆ ಕೃಷಿ ಪ್ರೋತ್ಸಾಹ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತದಲ್ಲಿ ಖಾದ್ಯ ತೈಲದ ವಾರ್ಷಿಕ ಬೇಡಿಕೆಯನ್ನು ಸ್ಥಳೀಯ ಉತ್ಪಾದನೆಯಿಂದ ಪೂರೈಸಲು ಸಾಧ್ಯವಾಗದ ಕಾರಣ ಸುಮಾರು 80 ಸಾವಿರ ಕೋಟಿ ರೂ.ಮೌಲ್ಯದ ಖಾದ್ಯ ತೈಲವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಖಾದ್ಯ ತೈಲದ ಆಮದು ವೆಚ್ಚ ಕಡಿಮೆ ಮಾಡುವ ದೃಷ್ಟಿಯಿಂದ ತೈಲ ಬೆಳೆಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡಬೇಕೆಂದು ಕೇಂದ್ರ ಸರ್ಕಾರವು ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಕಾರ್ಯಕ್ರಮ ಪ್ರಾರಂಭಿಸಿದೆ ಎಂದು ತಿಳಿಸಿದರು.

ತಾಳೆ ಬೆಳೆಯು ಪ್ರತಿ ಹೆಕ್ಟೇರಿಗೆ ಅತ್ಯಧಿಕ ಖಾದ್ಯ ತೈಲ ನೀಡುವುದಲ್ಲದೆ ಇದನ್ನು ಇತರ ಉಪ ಉತ್ಪನ್ನಗಳಾದ ಕೆಲವು ಆಹಾರ ಸಂಸ್ಕರಣಾ ಉದ್ಯಮ, ಸೌಂದರ್ಯ ವರ್ಧಕ ಉತ್ಪನ್ನ, ಜೈವಿಕ ಇಂಧನಗಳ ಮಿಶ್ರಣದಲ್ಲೂ ಬಳಸಲಾಗುತ್ತಿದೆ. ಬಹೂಪಯೋಗಿ ತಾಳೆ ಎಣ್ಣೆಯನ್ನು ಹೆಚ್ಚಾಗಿ ಉತ್ಪಾದಿಸುವ ನಿಟ್ಟಿನಲ್ಲಿ ತಾಳೆ ಬೆಳೆ ವಿಸ್ತೀರ್ಣವನ್ನು ಹೆಚ್ಚು ಮಾಡುವ ಅವಶ್ಯಕತೆ ಇರುವುದರಿಂದ ರೈತರಿಗೆ ತಾಳೆ ಬೆಳೆಯಲು ಪ್ರೋತ್ಸಾಹ ನೀಡಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಪತಂಜಲಿ ಫುಡ್ ಲಿಮಿಟೆಡ್ ಉಪ ಪ್ರಧಾನ ವ್ಯವಸ್ಥಾಪಕ ಎ.ಎಸ್.ಪ್ರಸಾದ್ ಬಾಬು ಮಾತನಾಡಿ, ಕಂಪನಿಯು ತಾಳೆ ಬೆಳೆ ಖರೀದಿಸುವುದರಿಂದ ಹಾಗೂ ಹಣವನ್ನು ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡುವುದರಿಂದ ಮಾರುಕಟ್ಟೆ ಸಮಸ್ಯೆ ಅಥವಾ ಮಧ್ಯವರ್ತಿಗಳ ಕಾಟ ಇರುವುದಿಲ್ಲ. ಹೀಗಾಗಿ ರೈತರು ಹೆಚ್ಚಾಗಿ ತಾಳೆ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದರು.

ಪ್ರಗತಿಪರ ರೈತ ಕಳ್ಳೀಪುರ ಮಹದೇವಸ್ವಾಮಿ, ಸೇನಾಪತಿಹಳ್ಳಿ ಗ್ರಾಪಂ ಅಧ್ಯಕ್ಷೆ ಸುಧಾ, ತೋಟಗಾರಿಕೆ ಹಿರಿಯ ನಿರ್ದೇಶಕಿ ಎಚ್.ಸಿ.ಶಶಿಕಲಾ, ತಾಳೆ ಬೆಳೆ ಯೋಜನೆ ಸಹಾಯಕ ನಿರ್ದೇಶಕ ಸಿ.ಎಂ.ಪ್ರದೀಪ್ ಕುಮಾರ್, ಕ್ಷೇತ್ರ ಸಹಾಯಕ ಇಂಡವಾಳು ಬಸವರಾಜು ಇತರರು ಇದ್ದರು.