ನ್ಯೂಸ್

ಬಸವೇಶ್ವರರ ಭಾವಚಿತ್ರ ಮೆರವಣಿಗೆ

ಅರಸೀಕೆರೆ: ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಬುಧವಾರ ಶ್ರೀ ಬಸವೇಶ್ವರರ ಭಾವಚಿತ್ರ ಮೆರವಣಿಗೆ ನಗರದಲ್ಲಿ ಜರುಗಿತು.

ನಗರದ ಶಾನುಭೋಗರ ಬೀದಿ ರಸ್ತೆಗೆ ಹೊಂದಿಕೊಂಡಂತಿರುವ ಬಸವೇಶ್ವರ ದೇಗುಲದಲ್ಲಿ ಬೆಳಗ್ಗೆಯಿಂದಲೇ ರುದ್ರಾಭಿಷೇಕ, ಬಿಲ್ವಾರ್ಚನೆ, ಕ್ಷೀರಾಭಿಷೇಕ ನೆರವೇರಿದವು. ಟ್ರ್ಯಾಕ್ಟರ್ ಮೇಲೆ ಬಸವೇಶ್ವರರ ಭಾವಚಿತ್ರವನ್ನು ಅಲಂಕರಿಸಿ ಮಹಾಮಂಗಳಾರತಿ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಶಾನುಭೋಗರ ಬೀದಿ ಮಾರ್ಗವಾಗಿ ಶಿವಾಲಯ ತಲುಪಿ ಚಂದ್ರಮೌಳೇಶ್ವರನಿಗೆ ಭಕ್ತಿ ಸಮರ್ಪಿಸಿದರು. ಪೇಟೆಬೀದಿಯಲ್ಲಿ ತೆರಳುವ ವೇಳೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಜೈನ ಹಾಗೂ ವೈಶ್ಯ ಸಮುದಾಯದ ಮುಖಂಡರು ಪಾನಕ ವಿತರಿಸಿದರು. ಕೆಂಡದ ಗುಂಡಿ, ಹುಳಿಯಾರು ವೃತ್ತ ಹಾಗೂ ರಾಷ್ಟ್ರೀಯ ಹೆದ್ದಾರಿ ಆಯಕಟ್ಟಿನ ಜಾಗಗಳಲ್ಲಿ ಮದ್ದುಗುಂಡು, ಬಾಣ, ಬಿರುಸು, ಪಟಾಕಿ ಸಿಡಿಸಲಾಯಿತು.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಉತ್ಸವ ಸಮಿತಿಯಿಂದ ಪ್ರಸಾದ ವಿನಿಯೋಗಿಸಲಾಯಿತು. ವಿವಿಧ ಸಮುದಾಯಗಳ ಗಣ್ಯರು, ಸಂಘ ಸಂಸ್ಥೆಗಳ ಮುಖಂಡರು, ಚುನಾಯಿತ ಜನಪ್ರತಿನಿಧಿಗಳು, ಉತ್ಸವ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.