| ಅಶೋಕ ಶೆಟ್ಟರ ಬಾಗಲಕೋಟೆ
ವಿಶ್ವಗುರು, ಮಹಾಮಾನವತಾವಾದಿ ಬಸವಣ್ಣನ ವಿದ್ಯಾಭೂಮಿ ಹಾಗೂ ಐಕ್ಯವಾದ ಕೂಡಲ ಸಂಗಮವನ್ನು ಸಮಗ್ರ ಅಭಿವೃದ್ಧಿ ಪಡಿಸಬೇಕು ಎನ್ನುವ ಬಸವಾದಿ ಶರಣರ ಭಕ್ತರು ಹಾಗೂ ಅನುಯಾಯಿಗಳ ಕನಸು ಸದ್ಯಕ್ಕಂತೂ ಈಡೇರುವ ಲಕ್ಷಣ ಕಾಣಿಸುತ್ತಿಲ್ಲ. ದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ಕೂಡಲಸಂಗಮವನ್ನು ಅಭಿವೃದ್ಧಿ ಪಡಿಸುವುದಾಗಿ ಕನಸುಗಳನ್ನು ಬಿತ್ತಿದ್ದ ಸರ್ಕಾರ, ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗದೇ ಇರುವುದು ಬಸವ ಅನುಯಾಯಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ತ್ರಿವೇಣಿ ಸಂಗಮ ಖ್ಯಾತಿಯ ಕೂಡಲಸಂಗಮ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಪಡಿಸಲು ಕೋಟ್ಯಂತರ ರೂ. ಅನುದಾನ ಲಭ್ಯ ಇದೆ. ಆದರೆ, ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಸರ್ಕಾರದ ಮೌನದಿಂದಾಗಿ ದುಡ್ಡು ನೀರಿನಂತೆ ಖರ್ಚಾದರೂ ಮೂಲ ಉದ್ದೇಶ ಸಾಕಾರವಾಗುತ್ತಿಲ್ಲ.
ಏನಿದು ಅಕ್ಷರ ಧಾಮ ಮಾದರಿ ಅಭಿವೃದ್ಧಿ?: ದೆಹಲಿ ಅಕ್ಷರಧಾಮ ಮಾದರಿಯಲ್ಲಿ ಕೂಡಲ ಸಂಗಮವನ್ನು ಅಭಿವೃದ್ಧಿಪಡಿಸುವುದು. ಬಸವಾದಿ ಶರಣರ ಕಾಯಕ ತತ್ವವನ್ನು ಆಧರಿಸಿ ಶರಣ ಗ್ರಾಮ ನಿರ್ವಿುಸುವುದು. ಶರಣರ ತತ್ವ, ವಚನ ಸಾಹಿತ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವುದು. ಕೂಡಲಸಂಗಮಕ್ಕೆ ಬರುವ ಭಕ್ತರಿಗೆ ಬಸವಣ್ಣನ ಜೀವನ ಮತ್ತು ಸಂದೇಶಗಳನ್ನು ಅವರ ಕಣ್ಣೇದುರು ಬರುವಂತೆ ವ್ಯವಸ್ಥೆ ಮಾಡುವುದು. ಆಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಬಸವಣ್ಣನ ವಿಚಾರಧಾರೆಗಳನ್ನು ವಿಶ್ವಕ್ಕೆ ಬಿತ್ತರಿಸುವುದು. ಉದ್ಯಾನವನ, ಮ್ಯುಜಿಕಲ್ ಫೌಂಟೇನ್, ಮಿನಿ ಥೇಟರ್ ಪರಿಕಲ್ಪನೆಯ ಯೋಜನೆ ಇದಾಗಿದೆ.
139 ಕೋಟಿ ರೂ. ಅನುದಾನ: ಕೂಡಲ ಸಂಗಮದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆದಾಗ 2015ರಲ್ಲಿ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಆರ್. ಪಾಟೀಲ ಅವರು ಆರ್ ಆಂಡ್ ಆರ್ ಆಯುಕ್ತರಾಗಿದ್ದ ಶಿವಯೋಗಿ ಕಳಸದಗೆ ವಿಸõತ ಯೋಜನೆ ಸಿದ್ಧಪಡಿಸುವಂತೆ ಸೂಚಿಸಿದ್ದರು. ಈ ಬಗ್ಗೆ ಸಾಕಷ್ಟು ಸಭೆ ನಡೆದ ಬಳಿಕ ಅಂದಾಜು 300 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ 3 ಹಂತದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಮಾತಾಗಿತ್ತು. ಅದರಂತೆ ಸಿದ್ದರಾಮಯ್ಯ ಸರ್ಕಾರ 2018ರಲ್ಲಿ 139 ಕೋಟಿ ರೂ.ಗಳನ್ನು ಮೊದಲ ಹಂತದಲ್ಲಿ ಬಿಡುಗಡೆಗೆ ಒಪ್ಪಿಗೆ ನೀಡಿದ್ದಲ್ಲದೆ, ಕಂದಾಯ ಇಲಾಖೆಯಿಂದ 44 ಕೋಟಿ ರೂ. ಹಾಗೂ ಕೃಷ್ಣಾ ಭಾಗ್ಯ ಜಲನಿಗಮದಿಂದ 95 ಕೋಟಿ ರೂ. ಅನುದಾನ ನೀಡಿತ್ತು. 2018ರಲ್ಲಿ ನಾಡಿನ ವಿವಿಧ ಮಠಾಧೀಶರ ಸಮ್ಮುಖ ಕೂಡಲಸಂಗಮದಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು.
ಕಟ್ಟಡಕ್ಕಷ್ಟೇ ಆದ್ಯತೆ..!: ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿ ವಿಲ್ಲ’ ಎಂದಿದ್ದ ಬಸವಣ್ಣನ ನೆಲದಲ್ಲಿ ಇದೀಗ ಬರೀ ಭೌತಿಕ ಕಟ್ಟಡಗಳ ದರ್ಬಾರ್ ನಡೆಯುತ್ತಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ 139 ಕೋಟಿ ರೂ. ಗಳಲ್ಲಿ ಬರೀ ಕಟ್ಟಡಗಳನ್ನಷ್ಟೇ ಕಟ್ಟಲಾಗಿದೆ. ಈ ಹಿಂದೆ ನಿರ್ಮಾಣ ಮಾಡಿ, ಹಾಳುಕೊಂಪೆ ಆಗಿರುವ ಬಸವ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಹೊಂದಿಕೊಂಡಂತೆ ಅಂದಾಜು 50 ಕೋಟಿ ರೂ. ವೆಚ್ಚದಲ್ಲಿ ಮತ್ತೊಂದು ಬೃಹತ್ ಕಟ್ಟಡ ನಿರ್ವಣಮಾಡಲಾಗುತ್ತಿದೆ. ಆದರೆ, ಅದು ಏತಕ್ಕಾಗಿ ಎನ್ನುವುದು ಯಾರಿಗೂ ಗೊತ್ತಿಲ್ಲ. 4 ವರ್ಷಗಳಿಂದ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.
ಕೂಡಲಸಂಗಮ ಸಮಗ್ರ ಅಭಿವೃದ್ಧಿ’ ಎನ್ನುವುದು ಕಟ್ಟಡಗಳ ಮೂಲಕ ಅಲ್ಲ. ಅವರ ವಿಚಾರ ಧಾರೆಗಳನ್ನು ಬಿತ್ತರಿಸುವ ಮೂಲಕ ಆಗಬೇಕು. ಆದರೆ, ಇದು ಎಷ್ಟರಮಟ್ಟಿಗೆ ಸಾಕಾರಗೊಂಡಿದೆ ಎಂದು ನೋಡಿದಾಗ ಮನಸ್ಸಿಗೆ ನೋವಾಗುತ್ತಿದೆ. ಸರ್ಕಾರ ತಾನು ಕೊಟ್ಟಿರುವ ಅನುದಾನ ಯಾವ ರೀತಿ ಬಳಕೆ ಆಗುತ್ತಿದೆ? ಎಂದು ಒಂದೊಮ್ಮೆ ಪರಿಶೀಲಿಸಬೇಕು. | ಬಸವಜಯ ಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ, ಕೂಡಲಸಂಗಮ ಕೂಡಲಸಂಗಮ ಸಮಗ್ರ ಅಭಿವೃದ್ಧಿಗೆ ಹಿಂದಿನ ಸಿಎಂ ಜೆ.ಎಚ್. ಪಟೇಲರು ಸಾಕಷ್ಟು ಅನುದಾನ ನೀಡಿದ್ದರು. ಸಿದ್ದರಾಮಯ್ಯ ಸರ್ಕಾರವೂ ಅಪಾರ ಅನುದಾನ ನೀಡಿದೆ. ಆದರೆ, ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಸಾಗಿಲ್ಲ. ಅಭಿವೃದ್ಧಿ ಬರೀ ಕಟ್ಟಡಕ್ಕೆ ಸೀಮಿತ ಆಗಬಾರದು. ಈ ಬಗ್ಗೆ ಪ್ರಾಧಿಕಾರ, ಸರ್ಕಾರ ಹೆಚ್ಚಿನ ಒತ್ತುಕೊಟ್ಟು ಬಸವಾದಿ ಶರಣರ ವಿಚಾರ ಧಾರೆಗಳು ಬಿತ್ತರಿಸುವ ಕೆಲಸ ಆಗಬೇಕು | ಮಾದೇಶ್ವರ ಸ್ವಾಮೀಜಿ ಬಸವಧರ್ಮ ಪೀಠ, ಕೂಡಲಸಂಗಮ ಕ್ಷೇತ್ರ
ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ಕಾಮಗಾರಿ: ಕೂಡಲ ಸಂಗಮವನ್ನು ಸಮಗ್ರ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 1997ರಲ್ಲಿ ಕೂಡಲ ಸಂಗಮ ಅಭಿವೃದ್ಧಿ ಮಂಡಳಿಯನ್ನು ಸರ್ಕಾರ ಸ್ಥಾಪನೆ ಮಾಡಿದೆ. ಆದರೆ, ಜೆ.ಎಚ್. ಪಟೇಲ್ ಸರ್ಕಾರ ಇದ್ದಾಗ ಅಂದಿನ ಆಯುಕ್ತರಾಗಿದ್ದ ಡಾ. ಶಿವಾನಂದ ಜಾಮದಾರ ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಕೆಲಸಮಾಡಿದರು. ಅವರ ನಂತರದಲ್ಲಿ ಕೆಲ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಂಡಳಿ ಆಯುಕ್ತರು ಇಚ್ಛಾಶಕ್ತಿ ಇಲ್ಲದೇ, ಬರೀ ಕಟ್ಟಡ ಕಟ್ಟಿ ಬೀಗ ಜಡಿಯುವ ಕೆಲಸಕ್ಕೆ ಸೀಮಿತವಾಗಿದ್ದಾರೆ.