ನ್ಯೂಸ್

ಬಸವಣ್ಣ ಜೀವನ ಉತ್ಸಾಹದ ಪ್ರತೀಕ ; ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅಭಿಮತ

ಮೈಸೂರು : ಹನ್ನೆರಡನೇ ಶತಮಾನದಲ್ಲೇ ಬದುಕಿನ ಜೀವನ ಮೌಲ್ಯವನ್ನು ವಿಶ್ವಕ್ಕೆ ಪಸರಿಸಿದ ದಾರ್ಶನಿಕ ಬಸವಣ್ಣ ಇಂದಿಗೂ ಜೀವನದ ಉತ್ಸಾಹದ ಪ್ರತೀಕವಾಗಿದ್ದಾರೆ ಎಂದು ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.


ಬಸವ ಜಯಂತಿ ಅಂಗವಾಗಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮತ್ತು ಬಸವ ಸಮಿತಿಯ ಹುಣಸೂರು ಘಟಕ ವತಿಯಿಂದ ಸೋಮವಾರ ನಗರದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯ ಸಾನ್ನಿಧ ್ಯ ವಹಿಸಿ ಮಾತನಾಡಿದರು.


ಬಸವಣ್ಣ ಅವರ ವಚನಗಳು ಬದುಕಿಗೆ ಬೆಳಕನ್ನು ನೀಡುವ ದೀಪಗಳಾಗಿವೆ. ಕಾಯಕದ ಪರಿಕಲ್ಪನೆಯ ಮೂಲಕ ದುಡಿದು ತಿನ್ನುವ ಬದುಕಿನ ಅರ್ಥವನ್ನು ಸಮಾಜಕ್ಕೆ ತೋರಿದ್ದಾರೆ. ಇಂದಿನ ನೂತನ ಸಂಸತ್ ಭವನ ಬಸವಣ್ಣ ಅವರ ಅನುಭವಮಂಟಪದ ಮೂರ್ತ ರೂಪವಾದರೆ, ಅಂಬೇಡ್ಕರ್‌ರ ಸಂವಿಧಾನದ ಆಶಯಗಳು ಬಸವಣ್ಣರ ಕಾಲದ ಸಮಾಜದಲ್ಲಿ ಜಾರಿಯಲ್ಲಿದ್ದ ನೀತಿ-ನಿಯಮಗಳಾಗಿವೆ ಎಂದರು.


ಪ್ರಧಾನ ಭಾಷಣ ಮಾಡಿದ ಉಪನ್ಯಾಸಕ ಡಾ.ಗುರುಸ್ವಾಮಿ, ಕಾಯಕ ಮತ್ತು ದಾಸೋಹದ ಮಹತ್ವವನ್ನು ಬಸವಣ್ಣ ತಿಳಿಸಿಕೊಟ್ಟರು. ವೀರಶೈವ ಧರ್ಮ ಈ ಕನ್ನಡ ನೆಲದ ಧರ್ಮ. ಅದರ ಸ್ಥಾಪಕರಾಗಿ ಬಸವಣ್ಣ ಒಬ್ಬ ಸಮಗ್ರ ಯುಗಪುರುಷರಾಗಿದ್ದಾರೆ ಎಂದು ಬಣ್ಣಿಸಿದರು.


ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಜಯಂತಿಗಳು ಜಾತಿಗೆ ಸೀಮಿತವಾಗಬಾರದು. ಕಾಯಕದ ಮಹತ್ವವನ್ನು ನಾವು ಇಂದಿಗೂ ಅರಿತಿಲ್ಲ ಎನ್ನುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಜಟಾಪಟಿಗೆ ಕಾರಣವಾಗಿರುವ ಅಕ್ಕಿ ಪೂರೈಕೆಯೇ ಉದಾಹರಣೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ ಎಂದರು.


ಸಂಸದ ಪ್ರತಾಪ್‌ಸಿಂಹ ಮಾತನಾಡಿ, ಪ್ರಧಾನಿ ಮೋದಿ ಅವರು ಬಸವಣ್ಣನವರ ವಚನಗಳನ್ನು ಉಲ್ಲೇಖಿಸದೆ ತಮ್ಮ ಭಾಷಣವನ್ನು ಸಂಪನ್ನಗೊಳಿಸುವುದಿಲ್ಲ. ಸರ್ಕಾರಕ್ಕೆ ಸವಾಲೆಸೆಯುವಂತೆ ವೀರಶೈವ-ಲಿಂಗಾಯತ ಮಠಮಾನ್ಯಗಳು ಜನರಿಗೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.


ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಹುಣಸೂರು ಮಿನಿ ಭಾರತವಿದ್ದಂತೆ. ಎಲ್ಲ ಜಾತಿ ಧರ್ಮಗಳ ಜನರು ಇಲ್ಲಿ ವಾಸಿಸುತ್ತಿದ್ದು, ಬಸವತತ್ವದಡಿಯಲ್ಲೇ ತಾಲೂಕಿನ ಅಭಿವೃದ್ಧಿಗೆ ದುಡಿಯಲಾಗುವುದು. ಜಗಜ್ಯೋತಿ ಬಸವೇಶ್ವರರು ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ರ ಆಡಳಿತ ಇಂದಿಗೂ ಮಾದರಿ ಎಂದು ಹೇಳಿದರು.


ಅಭಿವೃದ್ಧಿ ವಿಚಾರದಲ್ಲಿ ತಾಲೂಕು ಹಿಂದುಳಿದಿದೆ. ವೀರಶೈವ ಲಿಂಗಾಯತ ಸಮಾಜದ ಬಹುವರ್ಷಗಳ ಬೇಡಿಕೆಯಾದ ಸಮುದಾಯ ಭವನ ನಿರ್ಮಾಣಕ್ಕೆ 1 ಎಕರೆ ಭೂಮಿ ಗುರುತಿಸಿ ಕಟ್ಟಣ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡುತ್ತೇನೆ ಎಂದು ಭರವಸೆ ನೀಡಿದರು.


ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿದರು. ಧಾರ್ಮಿಕ ಸಭೆಯಲ್ಲಿ ಗುಂಡ್ಲುಪೇಟೆ ಶಾಸಕ ಗಣೇಶ್‌ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಕನಕಪುರ ದೇಗುಲ ಮಠದ ಮಠಾಧ್ಯಕ್ಷ ಚನ್ನಬಸವ ಸ್ವಾಮೀಜಿ, ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ, ಗಾವಡಗೆರೆಯ ಗುರುಲಿಂಗಜಂಗಮ ಮಠದ ನಟರಾಜ ಸ್ವಾಮೀಜಿ ಆಶೀರ್ವಚನ ನೀಡಿದರು.


ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವೀರಶೈವ-ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಕಾನ್ಯ ಶಿವಮೂರ್ತಿ, ತಾಲೂಕು ಘಟಕದ ಅಧ್ಯಕ್ಷ ಯು.ಎಸ್.ಬಸವರಾಜು, ಬಸವ ಬಳಗದ ತಾಲೂಕು ಅಧ್ಯಕ್ಷ ಬಿ.ಕೆ.ಕೂಸಪ್ಪ, ಮುಖಂಡರಾದ ಹಂದನಹಳ್ಳಿ ಸೋಮಶೇಖರ್, ಡಾ.ವೃಷಬೇಂದ್ರಸ್ವಾಮಿ, ಗೌರಮ್ಮ ಸೋಮಶೇಖರ್, ರಮೇಶ್‌ಕುಮಾರ್, ಯು.ಎಸ್.ಶೇಖರ್ ಸೇರಿಂತೆ ಸಮಾಜದ ಮುಖಂಡರು ಹಾಜರಿದ್ದರು.


ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಿಂದ ಬಸವೇಶ್ವರ ಭಾವಚಿತ್ರವನ್ನು ಆಕರ್ಷಕ ಜಾನಪದ ಕಲಾ ತಂಡಗಳೊಂದಿಗೆ ನಗರದ ಪ್ರಮುಖ ಮೆರವಣಿಗೆ ಮಾಡಲಾಯಿತು.