ನ್ಯೂಸ್

ಬಸವ ಪುತ್ಥಳಿ ತನಿಖೆ ಆರಂಭ

ಚಿತ್ರದುರ್ಗ: ಮುರುಘಾಮಠದ ಆವರಣದಲ್ಲಿ ನಿರ್ಮಿಸುತ್ತಿರುವ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ನಿರ್ಮಾಣ ಸಂಬಂಧ ರಾಜ್ಯ ಸರ್ಕಾರ ನೀಡಿರುವ ಅನುದಾನ ದುರ್ಬಳಕೆಯಾಗಿದೆ ಎಂಬ ದೂರಿನ ಮೇರೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನೇತೃತ್ವದ ಐವರ ತಂಡ ತನಿಖೆ ಆರಂಭಿಸಿದೆ.

323 ಅಡಿ ಎತ್ತರದ ಪುತ್ಥಳಿ ನಿರ್ಮಿಸುವ ಯೋಜನೆ ಇದಾಗಿದ್ದು, ಸರ್ಕಾರ ಬಿಡುಗಡೆಗೊಳಿಸಿರುವ ಅನುದಾನ ದುರ್ಬಳಕೆಯಾಗಿದೆ. ಈ ಕುರಿತು ತನಿಖೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಮಾಜಿ ಸಚಿವ ಎಚ್.ಏಕಾಂತಯ್ಯ ದೂರು ನೀಡಿದ್ದರು. ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ತನಿಖಾ ತಂಡ ರಚಿಸಿ, 15 ದಿನದೊಳಗೆ ದಾಖಲೆ ಸಮೇತ ಸ್ಪಷ್ಟ ವರದಿ ಸಲ್ಲಿಸುವಂತೆ 2023ರ ಡಿ. 1ರಂದು ಸೂಚಿಸಿದ್ದರು. ಆದರೆ, ಅನ್ಯ ಕಾರಣಗಳಿಂದಾಗಿ ತನಿಖೆ ತಡವಾಗಿ ಆರಂಭವಾಗಿದೆ.

ತನಿಖಾ ತಂಡ ಮುರುಘಾಮಠ ಹಿಂಭಾಗದಲ್ಲಿರುವ ಪುತ್ಥಳಿ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿದ್ದು, ಗಂಟೆಗೂ ಅಧಿಕ ತಾಸು ಪರಿಶೀಲಿಸಿದೆ. ಮೊದಲ ಹಂತದಲ್ಲಿ ಫೈಬರ್ ಅಚ್ಚು ತಯಾರಿಸಿ, ಅದರೊಳಗೆ ಕಂಚಿನ ಲೋಹ ತುಂಬಲಾಗುತ್ತಿದ್ದು, ಇದು ಕೂಡ ಅರ್ಧಕ್ಕೆ ನಿಂತಿದೆ. ಹೀಗಾಗಿ ಪಾದಗಳನ್ನಷ್ಟೇ ನಿರ್ಮಿಸಲಾಗಿದೆ. ಉಳಿದಂತೆ ಅಲ್ಲಲ್ಲಿ ಫೈಬರ್ ಅವಶೇಷಗಳು ಮಾತ್ರ ಕಂಡುಬಂದಿವೆ.

ಲೆಕ್ಕ ಕೊಡಿ: ಇಂಜಿನಿಯರ್ ಜಗದೀಶ್ ನಿರ್ಮಾಣದ ತಾಂತ್ರಿಕ ಮಾಹಿತಿ ನೀಡಲು ಮುಂದಾದರು. ಇದಕ್ಕೆ ತುಸು ಕೆರಳಿದ ಎಡಿಸಿ, ಅನುದಾನ ಬಳಕೆ ಸಂಬಂಧ ವಾಸ್ತವಾಂಶ ಅರಿಯಲು ನಾವು ಬಂದಿದ್ದೇವೆ. ಸರ್ಕಾರದಿಂದ ಬಿಡುಗಡೆಯಾದ ಹಣವೆಷ್ಟು, ಅದರಲ್ಲಿ ಎಷ್ಟು ಖರ್ಚಾಗಿದೆ ಎಂಬ ಮಾಹಿತಿ ಮಾತ್ರ ಕೊಡಿ ಎಂದು ತಾಕೀತು ಮಾಡಿದರು.

ಪುತ್ಥಳಿಯ ಪಿಒಪಿ ಕಾಮಗಾರಿಗೆ 5 ಕೋಟಿ ರೂ. ಖರ್ಚಾಗಿದೆ ಎಂಬ ಇಂಜಿನಿಯರ್ ಮಾತಿಗೆ ಬಿ.ಟಿ.ಕುಮಾರಸ್ವಾಮಿ ಹೌಹಾರಿದರು. ನಿಮ್ಮ ಸಂಪೂರ್ಣ ಹೇಳಿಕೆ ದಾಖಲಿಸಿಕೊಳ್ಳುತ್ತೇವೆ. ಆನಂತರ ಸರ್ಕಾರಿ ಇಂಜಿನಿಯರ್‌ಗಳು ಅದರ ಅಂದಾಜು ಮಾಡಲಿದ್ದಾರೆ ಎಂದರು.

24 ಕೋಟಿ ಖರ್ಚಾಗಿದೆ: ಸರ್ಕಾರದಿಂದ ಒಟ್ಟು 35 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 24 ಕೋಟಿ ರೂ. ಖರ್ಚಾಗಿದೆ. ಖಾಸಗಿ ಕಂಪನಿನೊಂದಕ್ಕೆ 6 ಕೋಟಿ ರೂ. ಮುಂಗಡ (ಅಡ್ವಾನ್ಸ್) ನೀಡಲಾಗಿದೆ. ಉಳಿದ 5 ಕೋಟಿ ರೂ. ಬ್ಯಾಂಕ್‌ನಲ್ಲಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಲೆಕ್ಕ ಪತ್ರಗಳು ಇವೆ. ಮಠದಲ್ಲಿ ಗೊಂದಲ ಸೃಷ್ಟಿಯಾದ ಪರಿಣಾಮ ಹಿಂದಿನ ಆಡಳಿತಾಧಿಕಾರಿ ಕಾಮಗಾರಿಗೆ ಬೆಂಬಲಿಸಲಿಲ್ಲ. ಹೀಗಾಗಿ ಕಳೆದೊಂದು ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಜಗದೀಶ್ ಸರ್ಕಾರಿ ಇಂಜಿನಿಯರ್‌ಗಳು ಒಳಗೊಂಡ ತನಿಖಾ ತಂಡ ಕೇಳಿದ ಪ್ರಶ್ನೆಗಳಿಗೆ ಮಾಹಿತಿ ನೀಡಿದರು.

ಪುತ್ಥಳಿ ನಿರ್ಮಾಣದ ಪೀಠವನ್ನೂ ತಂಡ ಪರಿಶೀಲಿಸಿತು. ಕೆಲಸ ಈಗಷ್ಟೇ ಆರಂಭವಾಗಿದೆ. 20 ಅಡಿ ಆಳದಿಂದ ಕಂಬಗಳನ್ನು ಹಾಕಿಕೊಂಡು ಬರಲಾಗಿದ್ದು, ಕಬ್ಬಿಣ ತುಕ್ಕು ಹಿಡಿಯಲಾರಂಭಿಸಿದೆ.

ತನಿಖಾ ತಂಡದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ತಹಸೀಲ್ದಾರ್ ನಾಗವೇಣಿ, ಮುರುಘಾಮಠದ ಆಡಳಿತ ಮಂಡಳಿಯ ಕೆ.ಸಿ.ನಾಗರಾಜ್, ಎಚ್.ಆನಂದಪ್ಪ, ವೀರಶೈವ-ಲಿಂಗಾಯತ ಸಮಾಜದ ಮುಖಂಡ ಎಸ್‌ಎಂಎಲ್ ತಿಪ್ಪೇಸ್ವಾಮಿ ಇದ್ದರು.

ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಸರ್ಕಾರಿ ಅನುದಾನ ಖರ್ಚು ಮಾಡಿರುವ ಹಾಲಿ ವೆಚ್ಚದ ಕುರಿತು ಪಿಡಬ್ಲ್ಯುಡಿ ಇಂಜಿನಿಯರ್‌ಗಳು ಕೂಲಂಕಷವಾಗಿ ಪರಿಶೀಲಿಸಲಿದ್ದಾರೆ. ನಂತರ ಲೆಕ್ಕ ಪತ್ರ ಪರಿಶೀಲಿಸಿ, ಅಂತಿಮವಾಗಿ ಸಿದ್ಧಗೊಂಡ ವರದಿ ಡಿಸಿ ಅವರಿಗೆ ಸಲ್ಲಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ.