ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ಕ್ರಮ ಸರಿಯಲ್ಲ ಎಂದು ಲಿಂಗಾಯತ ಗೌಡ ಮಹಾಸಭಾ ಅಧ್ಯಕ್ಷ ಆಲನಹಳ್ಳಿ ಪುಟ್ಟಸ್ವಾಮಿ ಕಿಡಿಕಾರಿದ್ದಾರೆ.
ಯತ್ನಾಳ ಅವರು ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ. ಅಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಕಟ್ಟಿ ಬೆಳೆಸಲು ಅಪಾರ ಶ್ರಮ ವಹಿಸಿದ್ದವರು. ಅಂತಹ ನಾಯಕನಿಗೆ ಬಿಜೆಪಿ ಅಗೌರವ ಸಲ್ಲಿಸುವ ಮೂಲಕ ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬರಲು ಲಿಂಗಾಯತ ಸಮುದಾಯ ಕಾರಣ. ಪ್ರತಿ ಚುನಾವಣೆಯಲ್ಲೂ ಲಿಂಗಾಯತ ಸಮುದಾಯ ಬಿಜೆಪಿಗೆ ಬೆನ್ನೆಲುಬಾಗಿ ನಿಂತಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಇಡೀ ಸಮುದಾಯ ಯತ್ನಾಳ್ ಅವರ ಮುಂದಾಳತ್ವದಲ್ಲಿ ಬಿಜೆಪಿ ಬೆಂಬಲಿಸಿದೆ. ತಮ್ಮ ಸುದೀರ್ಘ ಅವಧಿಯ ರಾಜಕಾರಣದಲ್ಲಿ ಯತ್ನಾಳ್ ಅವರದ್ದು ಒಂದು ಕಪ್ಪು ಚುಕ್ಕೆಯೂ ಇಲ್ಲ. ಅವರ ರಾಜಕೀಯ ಜೀವನ ತೆರೆದ ಪುಸ್ತಕವಿದ್ದಂತೆ. ಇಂತಹ ನಾಯಕನನ್ನು ಅಮಾನತು ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಬಿಜೆಪಿ ಆಲೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.
ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಯತ್ನಾಳ್ ಮುಂದಿದ್ದಾರೆ. ಇದಕ್ಕಾಗಿ ಮನೆ ಮಠ ಬಿಟ್ಟು ಹೋರಾಟ ಮಾಡಿದ್ದಾರೆ. ಹೀಗಾಗಿ ಸಮುದಾಯ ಅವರ ಪರ ನಿಲ್ಲುವುದರಲ್ಲಿ ಅನುಮಾನವಿಲ್ಲ. ಭವಿಷ್ಯದ ದೃಷ್ಟಿಯಿಂದ ಉಚ್ಚಾಟನೆ ಆದೇಶವನ್ನು ಹಿಂಪಡೆದು ಯತ್ನಾಳ್ ಅವರಿಗೆ ಗೌರವ ನೀಡದಿದ್ದಲ್ಲಿ ಮುಂಬರುವ ದಿನಗಳಲ್ಲಿ ಸಮುದಾಯದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.